ರಾಜ್ಯ ಸರಕಾರದಿಂದ ಪೊಲೀಸ್ ಇಲಾಖೆಯ ದುರ್ಬಳಕೆ ಸತ್ಯ ಮರೆಮಾಚುವ ಕೆಲಸ- ಬಿ.ವೈ.ವಿಜಯೇಂದ್ರ

varthajala
0

 

  ಬೆಳಗಾವಿ: ಸದನದಲ್ಲಿ ವಿಪಕ್ಷ ನಾಯಕರು ಮಾತನಾಡುವಾಗ ಅದನ್ನು ಕೇಳುವ ವ್ಯವಧಾನವೂ ಆಡಳಿತ ಪಕ್ಷದವರಿಗೆ ಇಲ್ಲವೆಂದಾದರೆ, ಇದು ಖಂಡಿತ ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪ್ರಶ್ನೆಗೆ ಉತ್ತರಿಸಿದರು. 9-10 ದಿನಗಳ ಕಾಲ ಸದನ ನಡೆಯುತ್ತದೆ. ಎರಡು ದಿನ ಕಳೆದಿದೆ. ಸದನದ ಸಮಯ ವ್ಯರ್ಥ ಆಗಬಾರದು. ನಾಡಿನ ರೈತರ, ನಿರುದ್ಯೋಗಿಗಳ, ನೀರಾವರಿ ವಿಚಾರದಲ್ಲಿ ಸಮರ್ಪಕ ಉತ್ತರ ಪಡೆಯುವುದೇ ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.ಸದನದಲ್ಲಿ ರಾಜ್ಯದ ರೈತರ ಮತ್ತು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ರಾಜ್ಯ ಸರಕಾರ ಸ್ಪಂದಿಸುತ್ತಿದ್ದರೆ ಅದು ನಮಗೆ ಮಾಡುವ ಉಪಕಾರವಲ್ಲ; ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಮೊನ್ನೆಯಿಂದ ಆರಂಭವಾಗಿದೆ. ನಾಡಿನ ಜ್ವಲಂತ ಸಮಸ್ಯೆ, ರೈತರ ಸಂಕಷ್ಟ, ಅಪೂರ್ಣ ನೀರಾವರಿ ಯೋಜನೆಗಳ ಬಗ್ಗೆ ಚರ್ಚಿಸಲು ಅಧಿವೇಶನ ಕರೆದಿದ್ದಾರೆ. ಇವರೇನೂ ನಮಗೆ ಉಪಕಾರ ಮಾಡುತ್ತಿಲ್ಲ ಎಂದು ತಿಳಿಸಿದರು.ಕಾಂಗ್ರೆಸ್ ಸರಕಾರ ಸತ್ಯ ಮರೆಮಾಚುವ ಕೆಲಸ ಮಾಡುತ್ತಿದೆ. ನಿನ್ನೆಯೂ ಬಿಜೆಪಿ ರೈತ ಮೋರ್ಚಾ ವತಿಯಿಂದ ನಾಡಿನ ರೈತರ ಸಮಸ್ಯೆ ಕುರಿತು ಹೋರಾಟ ನಡೆಸಿದ್ದೆವು. ಹೋರಾಟಗಾರರು ಹೋರಾಟದ ಸ್ಥಳಕ್ಕೆ ತಲುಪದಂತೆ ಅಡೆತಡೆ ಒಡ್ಡಿದ್ದರು. ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿದ್ದಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.ನಿರುದ್ಯೋಗಿ ಯುವಜನರು ಸಾಕಷ್ಟು ವರ್ಷಗಳಿಂದ ತಪಸ್ಸಿನಂತೆ ಕೆಪಿಎಸ್ಸಿ, ಇತರ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿ ಉದ್ಯೋಗದ ನಿರೀಕ್ಷೆಯಲ್ಲಿದ್ದರು. ಅವರು ಬೀದಿಗಿಳಿದು ಹೋರಾಟ ಮಾಡುವುದು ಅಪರಾಧವೆಂದು ಸರಕಾರಕ್ಕೆ ಅನಿಸಿದರೆ, ಸರಕಾರದ ಈ ಧೋರಣೆ ಸರಿಯಲ್ಲ; ಇದರ ಕುರಿತು ಸದನದಲ್ಲೂ ಚರ್ಚೆ ಮಾಡುವುದಾಗಿ ತಿಳಿಸಿದರು.ರಾಹುಲ್ ಗಾಂಧಿಯವರು ಭಾರತ್ ಜೋಡೋ ಸಂದರ್ಭದಲ್ಲಿ ಬಹಳಷ್ಟು ಭರವಸೆಗಳನ್ನು ನೀಡಿ ಹೋಗಿದ್ದರು. ರಾಜ್ಯದಲ್ಲಿ 2.5 ಲಕ್ಷ ಸರಕಾರಿ ಉದ್ಯೋಗಗಳು ನೇಮಕಾತಿ ಇಲ್ಲದೇ ಖಾಲಿ ಇವೆ. ಅವುಗಳನ್ನು ಭರ್ತಿ ಮಾಡುವ ಭರವಸೆ ಹಾಗೇ ಇದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಹತಾಶ ಯುವಜನರ ಆಶಯಕ್ಕೆ ಮಣ್ಣೆರಚುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ದೂರಿದರು.
ಸತ್ಯ ಮರೆಮಾಚುವ ಕೆಲಸ:-ಕೆಪಿಎಸ್ಸಿ ಸರಿ ಮಾಡುವ ಕೆಲಸ ರಾಜ್ಯ ಸರಕಾರದ್ದಲ್ಲವೇ ಎಂದು ಕೇಳಿದರು. ಹೋರಾಟ ಹತ್ತಿಕ್ಕಿ ಸತ್ಯ ಮರೆಮಾಚುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ಆಕ್ಷೇಪಿಸಿದರು. ತೆಲಂಗಾಣದಲ್ಲಿ ಗ್ಯಾರಂಟಿ ಅನುಷ್ಠಾನದಿಂದ ಸರಕಾರ ನೌಕರರಿಗೆ ಸಂಬಳ ಕೊಡಲೂ ಸಾಧ್ಯವಾಗುತ್ತಿಲ್ಲ; ಇದು ವಾಸ್ತವಿಕ ಸತ್ಯ. ಕಾಂಗ್ರೆಸ್ ಆಡಳಿತವುಳ್ಳ ಹಿಮಾಚಲ ಪ್ರದೇಶದಲ್ಲೂ ಗ್ಯಾರಂಟಿಗಳನ್ನು ಘೋಷಿಸಿದ್ದರು. ಅಲ್ಲಿ ದೇವಸ್ಥಾನದ ಆದಾಯವನ್ನು ಸರಕಾರಕ್ಕೆ ಕೊಡುವಂತೆ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ ಎಂದು ಗಮನ ಸೆಳೆದರು.

ಸ್ವಾತಂತ್ರ್ಯ ಹೋರಾಟಗಾರರ 8 ತಿಂಗಳ ಪಿಂಚಣಿ ಕೊಟ್ಟಿಲ್ಲ:-ಮಂಡ್ಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ 8 ತಿಂಗಳ ಪಿಂಚಣಿ ಕೊಟ್ಟಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಮುಖ್ಯಮಂತ್ರಿಗಳ ತವರು ಜಿಲ್ಲೆ ಮೈಸೂರಿನಲ್ಲಿ 32 ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಗ್ರಾಮೀಣ ಭಾಗದ ವಿದ್ಯಾರ್ಥಿನಿ, ಕೊಕ್ಕೊ ಆಟಗಾರ್ತಿಗೆ 5 ಲಕ್ಷ ಬಹುಮಾನ ಘೋಷಿಸಿದ್ದರು. ಅಕ್ಕಪಕ್ಕದ ರಾಜ್ಯಗಳಲ್ಲಿ 1 ಕೋಟಿ, 2 ಕೋಟಿ ಬಹುಮಾನ ನೀಡಿದ್ದಾರೆ. ಆದ್ದರಿಂದ ಆ ಹುಡುಗಿ ಆ ಮೊತ್ತವನ್ನು ಹಿಂದಿರುಗಿಸಿದ್ದಾಳೆ ಎಂದು ವಿವರಿಸಿದರು. ಇದು ವಾಸ್ತವಿಕ ಸತ್ಯ. ಇದನ್ನು ಅನುಭವಿ ಮುಖ್ಯಮಂತ್ರಿಗಳು ಮರೆಮಾಚುವುದು ಅಕ್ಷಮ್ಯ ಅಪರಾಧ ಎಂದು ನುಡಿದರು.

Post a Comment

0Comments

Post a Comment (0)