ರಘುಕುಲತಿಲಕ ಶ್ರೀರಾಮನಚಂದ್ರನ ಪದಪಂಕಜ ಭಜಕರು. ಶ್ರೀಮದಾಚಾರ್ಯರ ಟೀಕಾಕೃತ್ಪಾದರ ಗ್ರಂಥಗಳ ಭಾವದ ಬೋಧನೆಗೆ ಐದು ಭಾವಬೋಧ ಗ್ರಂಥಗಳನ್ನು ರಚಿಸಿದ ಗರಿಮೆಯುಳ್ಳವರು. ಟಿಪ್ಪಣೀಕಾರರ ಪರಂಪರೆಯನ್ನು ಕೊಟ್ಟ ಶಾಸ್ತ್ರ ಪಾರಂಗತರು. ಜ್ಞಾನಿಗಳೇ ಬೆರಗಾಗುವ ಜ್ಞಾನ, ತ್ರಿವಿಕ್ರಮನೇ ಒಲಿಯುವಂತಹ ಭಕ್ತಿ, ತಿಂತೃಣೀ ವೃಕ್ಷವು ತಮಗೆ ನೆರಳಾದರೆ ಅದನ್ನು ಸುಟ್ಟುಬಿಡುವ ವೈರಾಗ್ಯ ಇವರದ್ದು. ತಮ್ಮ ತಪಸ್ಸಿಗಾಗಿ ತ್ರಿವಿಕ್ರಮನ ಕ್ಷೇತ್ರವಾದ ತಿರುಕೊಯ್ಲೂರಿನ ಶಾಂತ ಪರಿಸರವನ್ನು ಆರಿಸಿಕೊಂಡ ತಪೋಮೂರ್ತಿಗಳು. (ಬೃಂದಾವನಸ್ಥರಾದವರು). ಆ ಕ್ಷೇತ್ರದಲ್ಲಿದ್ದು ಕಾಮಧೇನು ಕಲ್ಪವೃಕ್ಷ ಚಿಂತಾಮಣಿಗಳಂತೆ ಬಂದ ಜನರ ಭವಸಾಗರವನ್ನು ದಾಟಿಸುವ ಗುರೂತ್ತಮರೇ ಶ್ರೀರಘೂತ್ತಮತೀರ್ಥರು.
ಇವರ ಅನುಗ್ರಹವಿದ್ದರೆ ಅಸಾಧ್ಯವಾದ ಏನನ್ನೂ ಸಾಧಿಸಲು ಸಾಧ್ಯ. ಅಭೀಷ್ಟಗಳನ್ನು ಪೂರೈಸಿಕೊಳ್ಳಲು ಸಾಧ್ಯ. ಇವರ ಸೇವೆಯಿಂದ ಇವರ ಅನುಗ್ರಹವನ್ನು ಸಂಪಾದಿಸಬಹುದು. ಸೇವೆ ಪ್ರದಕ್ಷಿಣೆ, ನಮಸ್ಕಾರ, ಸ್ತೋತ್ರ ಪಾರಾಯಣ ಇತ್ಯಾದಿ ರೂಪವಾಗಿದೆ.
ಈ ನಿಟ್ಟಿನಲ್ಲಿ ಶ್ರೀ ಶ್ರೀ ೧೦೦೮ ಶ್ರೀಸತ್ಯಾತ್ಮತೀರ್ಥ ಶ್ರೀಪಾದಂಗಳವರು ಒಂದು ವರ್ಷದ ಹಿಂದೆ ಶ್ರೀರಘೂತ್ತಮ ಸ್ತೋತ್ರದ ಪಾರಾಯಣವು ಕೋಟಿ ಸಂಖ್ಯೆಯಲ್ಲಿ ಆಗಬೇಕೆಂದು ಸಂಕಲ್ಪಿಸಿದ್ದರು. ಸತ್ಯಸಂಕಲ್ಪನಾದ ಮೂಲರಾಮನು ತನ್ನ ಭಕ್ತರಾದ ಶ್ರೀಪಾದಂಗಳವರ ಸಂಕಲ್ಪವನ್ನು ಸತ್ಯವಾಗಿಸಿ ಅನುಗ್ರಹಸಿದ್ದಾನೆ.
ಪಂ. ಪುರಂದರಾಚಾರ್ಯ ಹಯಗ್ರೀವ ಇವರ ನೇತೃತ್ವದಲ್ಲಿ ಮತ್ತು ಇನ್ನಿತರ ಅನೇಕ ವಿದ್ವಾಂಸರ ಸಹಕಾರದೊಂದಿಗೆ ದೇಶದಾದ್ಯಂತ ಊರು ಊರುಗಳಲ್ಲಿ ರಘೂತ್ತಮ ಸ್ತೋತ್ರ ಪಾರಾಯಣ ಮಹಾಯಜ್ಞ ಸಂಪನ್ನವಾಗಿದೆ. ಯಜ್ಞಭುಕ್ ನಾಮಕನಾದ ಭಗವಂತ ಈ ಮಹಾಯಜ್ಞದ ಆಹುತಿಯನ್ನು ಸ್ವೀಕರಿಸಿದ್ದಾನೆ. ಕೈಗಾ, ಪರಿಗಿ, ಚಿನ್ನರಾಜಮೂರು ಇತ್ಯಾದಿ ಸಣ್ಣ ಸಣ್ಣ ಹಳ್ಳಿಗಳಲ್ಲೂ ಭಗವದ್ಭಕ್ತರು ಭಕ್ತಿಯಿಂದ ಸ್ತೋತ್ರದ ಪಾರಾಯಣವನ್ನು ನಡೆಸಿ ಕೊಟ್ಟಿದ್ದಾರೆ. ರಘೂತ್ತಮತೀರ್ಥರ ಪಾದುಕಾ ಪೂಜೆಯನ್ನು ಮಾಡಿದ್ದಾರೆ. ಅವರ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಈ ಮಹಾಯಜ್ಞದ ಅವಭೃತ ಸ್ನಾನದ ಸಮಯ ಹತ್ತಿರವಾಗಿದೆ. ಆ ಮಹಾಯಜ್ಞದ ಸಮರ್ಪಣೋತ್ಸವವನ್ನು ಮಹಾಸ್ವಾಮಿಗಳವರು ನಡೆಸಿಕೊಡಲಿದ್ದಾರೆ.
ರಘೂತ್ತಮತೀರ್ಥರ ಉತ್ತರ ಆರಾಧನೆಯ ಪರಮ ಪವಿತ್ರವಾದ ಪರ್ವಕಾಲದ ದಿನದಂದು (ದಿ: 01/01/2026, ಗುರುವಾರ) ತಿರುಕ್ಕೋಯಿಲೂರಿನಲ್ಲಿ ಮಹಾಸ್ವಾಮಿಗಳವರು ಸ್ತೋತ್ರ ಪಾರಾಯಣ ಮಹಾಯಜ್ಞವನ್ನು ಗುರುಗಳ ಮುಖಾಂತರ ಭಗವಂತನ ಅಡಿದಾವರಗಳಿಗೆ ಸಮರ್ಪಿಸಿ, ದೇಶದಾದ್ಯಂತ ಎಲ್ಲಾ ಊರುಗಳಲ್ಲಿ ಏಕ ಕಾಲಕ್ಕೆ ಅನ್ನಸಂತರ್ಪಣೆಯನ್ನು ಮಾಡಿಸಿ ಕೃಷ್ಣಾರ್ಪಣವೆನ್ನಲ್ಲಿದ್ದಾರೆ. (ಆನ್ಲೈನ್ ಮುಖಾಂತರ ಬೆರೆ ಊರುಗಳಲ್ಲಿರುವ ಭಗವದ್ಭಕ್ತರಿಗೆ ಕೃಷ್ಣಾರ್ಪಣವೆನ್ನುತ್ತಾರೆ.) ತಾವೆಲ್ಲ ಭಗವದ್ಭಕ್ತರು ಪರಮ ಪವಿತ್ರವಾದ ಈ ಸಮರ್ಪಣೋತ್ಸವದಲ್ಲಿ ಭಾಗವಹಿಸಿ ಹರಿ-ವಾಯು-ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕು.
