ಬೆಂಗಳೂರು : ಬೆಂಗಳೂರಿನ ಐಐಎಸ್‍ಎಸ್ಸಿಯ ಆವರಣದಲ್ಲಿ ಜನವರಿ 20 ರಂದು From Scale to Resilience: Rethinking Efficient AI Systems ಎಂಬ ಶೀರ್ಷಿಕೆಯಡಿ ಒಂದು ದಿನದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ‘ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್’ನ ಪೂರ್ವಭಾವಿ ಕಾರ್ಯಕ್ರಮವಾಗಿರುತ್ತದೆ. ಕರ್ನಾಟಕ ಸರ್ಕಾರದ ಇ-ಆಡಳಿತ ಕೇಂದ್ರದ ಅಡಿಯಲ್ಲಿರುವ ಕರ್ನಾಟಕ ಎಐ ಸೆಲ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಭಾರತ ಸರ್ಕಾರ ಹಾಗೂ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್ ಸಹಯೋಗದೊಂದಿಗೆ ನಡೆಯಲಿದೆ.
ಸರ್ಕಾರವು ಸಾರ್ವಜನಿಕ ಸೇವಾಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನವನ್ನು ವಿನ್ಯಾಸಗೊಳಿಸಲು ಅಗತ್ಯವಿರುವ ಪ್ರಾಯೋಗಿಕ ವಿಧಾನಗಳು ಹಾಗೂ ಸವಾಲುಗಳ ಬಗ್ಗೆ ಈ ಕಾರ್ಯಕ್ರಮದಲ್ಲಿ ಚರ್ಚಿಸಲು ನೀತಿ ನಿರೂಪಕರು (Policy Makers), ಸಂಶೋಧಕರು, ಉದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವವರು, ಸ್ಟಾರ್ಟಅಪ್, ಅಂತಾರಾಷ್ಟ್ರೀಯ ಖ್ಯಾತಿಯ ತಜ್ಞರು ಪಾಲ್ಗೊಳ್ಳಲಿದ್ದಾರೆ. ದತ್ತಾಂಶ ಸುರಕ್ಷತೆ, ದತ್ತಾಂಶ ಭದ್ರತೆ, ಪಾರದರ್ಶಕತೆ ಮತ್ತು ಕಡಿಮೆ ವೆಚ್ಚದಲ್ಲಿ ಪ್ರಸ್ತುತ ತಂತ್ರಜ್ಞಾನದ ಮೂಲಕ ಪ್ರಾಯೋಗಿಕ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಬಗ್ಗೆ ಸಂಶೋಧನಾ ಸಂಸ್ಥೆಗಳು ಯಾವ ರೀತಿ ಒಳಗೊಳ್ಳಬಹುದು ಎನ್ನುವ ಬಗ್ಗೆ ತಜ್ಞರುಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿದ್ದಾರೆ.
ಕರ್ನಾಟಕ ಎಐ ಸೆಲ್ ಈಗಾಗಲೇ ರಾಜ್ಯದಲ್ಲಿ “AI for Public Sector Innovations” ಮೂಲಕ ಮಹತ್ವದ ಪಾತ್ರ ವಹಿಸುತ್ತಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ, ರಾಜ್ಯದ ‘ಕರ್ತವ್ಯ’ (ಏಂಂಒS) ಹಾಜರಾತಿ ನಿರ್ವಹಣಾ ವ್ಯವಸ್ಥೆಯಲ್ಲಿ ಅಳವಡಿಸಲಾಗಿರುವ ‘ಫೇಸ್-ಮ್ಯಾಚ್’ ತಂತ್ರಜ್ಞಾನ. ಈ ವ್ಯವಸ್ಥೆಯು ಲಕ್ಷಾಂತರ ಸರ್ಕಾರಿ ನೌಕರರಿಗೆ ಸುರಕ್ಷಿತ ಮತ್ತು ಸುಲಭವಾದ ಸೇವೆಯನ್ನು ಒದಗಿಸುತ್ತಿದ್ದು, ಕರ್ನಾಟಕ ಸರ್ಕಾರದ ʼಡಿಜಿಟಲ್ ರೂಪಾಂತರಯಾನʼಕ್ಕೆ ಮುನ್ನುಡಿ ಬರೆದಿದೆ. ಇಂತಹ ಯಶಸ್ವಿ ಪ್ರಯೋಗಗಳನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವು ವೇದಿಕೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.