ಭರವಸೆಯ ಕಲಾವಿದೆ ಕೀರ್ತನಾ ಶಶಾಂಕ್ ರಂಗಪ್ರವೇಶ

VK NEWS
0

ಖ್ಯಾತ  'ನಾಟ್ಯ ಕಲಾಕ್ಷೇತ್ರ' ( ಹೆಬ್ಬಾಳ)  ನೃತ್ಯಸಂಸ್ಥೆಯ ನೃತ್ಯಗುರು ಹಾಗೂ ನೃತ್ಯ ಕಲಾವಿದ ಪ್ರಶಾಂತ್ ಗೋಪಾಲ್ ಶಾಸ್ರೀ ಅವರು ಬದ್ಧತೆಗೆ ಇನ್ನೊಂದು ಹೆಸರು. ಇಂದಿನ ಪುರುಷ ನರ್ತಕರಲ್ಲಿ ಗಮನಾರ್ಹರಾಗಿರುವ ಪ್ರಶಾಂತ್ ಉತ್ತಮ ನೃತ್ಯ ಕಲಾವಿದರಾಗಿದ್ದು, ತಮ್ಮ ಶಿಷ್ಯರನ್ನೂ ಆ ದಿಸೆಯಲ್ಲಿ ಉತ್ತಮವಾಗಿ ತಯಾರು ಮಾಡುತ್ತಿರುವ ನುರಿತ ಉತ್ತಮ ಗುರುವೂ ಹೌದು. ಇಂಥವರ ಸಮರ್ಥ ಗರಡಿಯಲ್ಲಿ ರೂಪುಗೊಂಡ ನೃತ್ಯಶಿಲ್ಪ ಶ್ರೀಮತಿ ಎಂ.ಎಸ್. ಕೀರ್ತನಾ ತನ್ನ 7 ನೆಯ ವಯಸ್ಸಿನಿಂದಲೇ ನೃತ್ಯ ಕಲಿಯುತ್ತ ನಾಡಿನಾದ್ಯಂತ ಅನೇಕ ಪ್ರತಿಷ್ಠಿತ ವೇದಿಕೆ- ದೇವಾಲಯಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದ್ದಾಳೆ.

ಶ್ರೀ ಎಂ.ಕೆ.ಸೂರ್ಯಪ್ರಕಾಶ್ ಮತ್ತು ಕೆ.ಎಸ್. ಆರತಿಯವರ ಪುತ್ರಿಯಾದ ಕೀರ್ತನಾ, ಎಂ.ಬಿ.ಎ. ಪದವೀಧರೆ.  ಚಿತ್ರಕಲೆ, ಸಂಗೀತ, ಸಮಾಜಸೇವೆ ಇನ್ನಿತರ ಉತಮ ಹವ್ಯಾಸಗಳನ್ನು ಬೆಳೆಸಿಕೊಂಡಿರುವ ಬಹುಮುಖ ಪ್ರತಿಭೆಯಾದ ಇವಳು  ಕಳೆದ 17 ವರ್ಷಗಳಿಂದ ಅತ್ಯಂತ ಆಸಕ್ತಿಯಿಂದ ಭರತನಾಟ್ಯಾಭ್ಯಾಸ ಮಾಡುತ್ತಿದ್ದು, ಗುರು ಪ್ರಶಾಂತ್ ಶಾಸ್ತ್ರಿಯವರ ಉನ್ನತ ಮಾರ್ಗದರ್ಶನದಲ್ಲಿ ಮುಂದುವರೆಯುತ್ತಿದ್ದಾಳೆ. ಆತ್ಮವಿಶ್ವಾಸದಿಂದ ನೃತ್ಯದ ವಿವಿಧ ಆಯಾಮಗಳನ್ನು ಮೈಗೂಡಿಸಿಕೊಂಡಿರುವ ಇವಳು ಇದೀಗ ತನ್ನ ಮೊದಲ ಏಕವ್ಯಕ್ತಿ ಕಲಾಪ್ರದರ್ಶನಕ್ಕೆ ಸಿದ್ಧಳಾಗಿದ್ದಾಳೆ. ಕೀರ್ತನಳ ನೃತ್ಯ ನೈಪುಣ್ಯವು ಇದೇ ತಿಂಗಳ 10 ನೇ ತಾ. ಸಂಜೆ 4.30 ಗಂಟೆಗೆ ಮಲ್ಲೇಶ್ವರದ ‘ಸೇವಾಸದನ’ದಲ್ಲಿ ಅನಾವರಣಗೊಳ್ಳಲಿದ್ದು, ಈ ಉದಯೋನ್ಮುಖ ಕಲಾವಿದೆ ತನ್ನ  ‘ರಂಗಪ್ರವೇಶ’ವನ್ನು ವಿದ್ಯುಕ್ತವಾಗಿ ನೆರವೇರಿಸಿಕೊಳ್ಳಲಿದ್ದಾಳೆ. ಕೀರ್ತನಾಳ ಈ ಸುಂದರ ಕಲಾತ್ಮಕ ನಾಟ್ಯವಿಲಾಸವನ್ನು ಕಣ್ತುಂಬಿಕೊಳ್ಳಲು ಎಲ್ಲ ಕಲಾರಸಿಕರಿಗೂ ಆದರದ ಸ್ವಾಗತ. 


ಸಾಂಸ್ಕೃತಿಕ ಹಿನ್ನಲೆಯ ಕುಟುಂಬದ ಶ್ರೀ ಶ್ರೀ ಎಂ.ಕೆ.ಸೂರ್ಯಪ್ರಕಾಶ್ ಮತ್ತು ಕೆ.ಎಸ್. ಆರತಿಯವರ ಪುತ್ರಿಯಾದ ಕೀರ್ತನಾಗೆ ನೃತ್ಯ ಬಾಲ್ಯದ ಒಲವು. ಹೆತ್ತವರ ಒತ್ತಾಸೆಯಿಂದ ಅವಳು ತನ್ನ 7 ರ ಎಳವೆಯಲ್ಲೇ ಭರತನಾಟ್ಯ ಕಲಿಯಲು ಭಾರತೀಯ ವಿದ್ಯಾಭವನದಲ್ಲಿ ಗುರು ಪ್ರಶಾಂತ್ ಶಾಸ್ತ್ರಿ ಅವರ ಬಳಿ ಸೇರಿದಳು. ಏಕಾಗ್ರತೆಯಿಂದ ಅಭ್ಯಾಸ ಮಾಡಿದಳು ಕೂಡ. ಈ ಮಧ್ಯ ಗುರು ಪಾರ್ವತಿ ಅವರಲ್ಲಿ ಹಲವಾರು ವರ್ಷಗಳು ನೃತ್ಯದ ಹಲವು ಮಗ್ಗಲುಗಳನ್ನು ಚೆನ್ನಾಗಿ ಅಭ್ಯಾಸ ಮಾಡಿದಳು. ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯದ ಮಧ್ಯಮ ಪೂರ್ಣ ಪರೀಕ್ಷೆಯಲ್ಲಿ ಜಯಶಾಲಿಯಾಗಿ ಭಾರತೀಯ ವಿದ್ಯಾಭವನದಲ್ಲೇ ಭರತನಾಟ್ಯದ 3 ವರ್ಷದ ಡಿಪ್ಲೊಮಾ ಮುಗಿಸಿದ ವಿಶೇಷ ಇವಳದು. ಶಿಸ್ತಿನ ವಿದ್ಯಾರ್ಥಿನಿಯಾದ ಕೀರ್ತನಳದು ಬಹುಮುಖ ಪ್ರತಿಭೆ. ಓದಿನಲ್ಲೂ ಜಾಣೆಯಾದ ಇವಳು ಜೈನ್ ಕಾಲೇಜಿನಿಂದ ಪದವಿ ಗಳಿಸಿ ಅನಂತರ ಎಂಬಿಎ ಪದವಿಯನ್ನು ಪಡೆದುಕೊಂಡಳು. ಸಮಾಜ ಸೇವಾ ಕಾರ್ಯದಲ್ಲಿ ಇವಳಿಗೆ ಅಪರಿಮಿತ ಆಸಕ್ತಿ . ಎನ್.ಎಸ್.ಎಸ್. ನ ಅನೇಕ ಕ್ಯಾಂಪುಗಳಲ್ಲಿ ಸೇವೆ ಸಲ್ಲಿಸಿರುವ ವೈಶಿಷ್ಟ್ಯ ಇವಳದು.  ಈ ಮಧ್ಯೆ ಇವಳು ಅನೇಕ ವೇದಿಕ್ಗಳಲ್ಲಿ ನರ್ತಿಸಿ, ಸ್ಪರ್ಧೆಗಳಲ್ಲಿ ಬಹುಮಾನಗಳನ್ನೂ ಗಳಿಸಿದ್ದಾಳೆ.  ನಾಟ್ಯಕಲಾಕ್ಷೇತ್ರದ ಎಲ್ಲ ನೃತ್ಯ ಚಟುವಟಿಕೆಗಳಲ್ಲಿ ಸಕ್ರಿಯಳಾಗಿರುವ ಇವಳು ನೃತ್ಯಶಾಲೆಯ ಪ್ರತಿಯೊಂದು ನೃತ್ಯರೂಪಕಗಳಲ್ಲೂ, ನೃತ್ಯ ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದಾಳೆ. ನೃತ್ಯ ಉತ್ಸವ, ಗೋಪಿನಾಥ ನ್ಯಾಸ ರಾಷ್ಟ್ರೀಯ ಮಟ್ಟದ ಸಂಗೀತ ಮತ್ತು ನೃತ್ಯ ಸ್ಪರ್ಧೆಯಲ್ಲಿ ಭಾಗಿಯಾಗಿದ್ದು, ವಿಜೇತಳಾಗಿದ್ದಾಳೆ. 


ಅಲ್ಲದೆ ಶಾಲಾ-ಕಾಲೇಜುಗಳ ನೃತ್ಯ ಸ್ಪರ್ಧೆಗಳಲ್ಲೂ ಉತ್ಸಾಹದಿಂದ ಭಾಗವಹಿಸಿ ಬಹುಮಾನ-ಪ್ರಶಂಸೆಗಳನ್ನು ಗಳಿಸಿದ್ದು, ಚಿತ್ರಕಲೆಯಲ್ಲಿ ಪರಿಶ್ರಮಿಸಿದ್ದು, ಫೈನ್ ಆರ್ಟ್ಸ್ ನಲ್ಲಿ 3 ವರ್ಷದ ಡಿಪ್ಲೊಮಾವನ್ನು ಪೂರ್ಣಗೊಳಿಸಿರುವುದು ಅವಳ ಕಲಾಸಕ್ತಿಯ ದ್ಯೋತಕ.  ಇವಳೆಲ್ಲ ಆಸಕ್ತಿಗಳಿಗೆ ಪ್ರೋತ್ಸಾಹದ ತುಂಬು ಶ್ರೀರಕ್ಷೆ ನೀಡಿರುವ ಅವಳ ಹೆತ್ತವರ ಜೊತೆ ಅತ್ತೆ- ಮಾವಂದಿರೂ ಪೂರ್ಣ ಸಹಕಾರ- ಉತ್ತೇಜನ ನೀಡುತ್ತ ಬಂದಿರುವುದು ಅವಳ ಅದೃಷ್ಟ. ಕೀರ್ತನಳ ಕಲಾ ಬೆಳವಣಿಗೆಗೆ ಪೋಷಣೆ ನೀಡುತ್ತಿರುವ ಇವಳ ಪತಿ ಶಶಾಂಕ್ ಮಡದಿಯ ನೃತ್ಯ ಪಯಣ- ಸಾಧನೆಗೆ ಇಂಬಾಗಿದ್ದಾರೆ.  ಎಲ್ಲಕ್ಕಿಂತ ಕೀರ್ತನಾ, ತನಗೆ ಉತ್ತಮ ಮಾರ್ಗದರ್ಶಕರಾಗಿರುವ ಗುರು ಹಾಗೂ ಹಿತೈಷಿ ಶ್ರೀ ಪ್ರಶಾಂತ್ ಶಾಸ್ತ್ರೀ ಅವರಿಗೆ ತುಂಬು ಆಭಾರಿ. 

ವೈ.ಕೆ.ಸಂಧ್ಯಾ ಶರ್ಮ

Post a Comment

0Comments

Post a Comment (0)