ಜನವರಿ 18, ಭಾನುವಾರ ಶ್ರೀ ಪುರಂದರದಾಸರ ಆರಾಧನೆಯ ಪ್ರಯುಕ್ತ ಈ ಲೇಖನ ಪುರಂದರದಾಸರು ನಾರದಾಂಶ ಸಂಭೂತರೆಂಬ ಪ್ರತೀತಿಯಿದೆ. ಅವರನ್ನು ವ್ಯಾಸರಾಯರೇ 'ದಾಸರೆಂದರೆ ಪುರಂದರ ದಾಸರಯ್ಯ' ಎಂದು ಕೊಂಡಾಡಿದ್ದಾರೆ. ಅವರು ಶ್ರೀನಿವಾಸನಾಯಕ ಎಂದೇ ಪ್ರಸಿದ್ಧರಾದವರು. ಆಗಿನ ಕಾಲದಲ್ಲಿಯೇ ಅವರು 9 ಕೋಟಿ ವರಹಗಳಿಗೆ ಒಡೆಯರಾಗಿದ್ದರು. ಆದರೂ ಲೋಭವೆಂಬುದು ಅವರ ಸ್ವರೂಪಕ್ಕೆ ಅಂಟಿಕೊಂಡಿತ್ತು. ಪರಮಾತ್ಮನು ಅದನ್ನು ಅರಿತು ಸಜ್ಜನರನ್ನು ಉದ್ಧಾರ ಮಾಡಬೇಕು ಎಂದು ಸಂಕಲ್ಪಸಿ ಅವರ ಮನೆಗೆ ಆರು ತಿಂಗಳು ಮಗನ ಉಪನಯನ ಏನಾದರೂ ಸಹಾಯ ಮಾಡಿ ಎಂದು ತಿರುಗಾಡುತ್ತಾರೆ. ಆದರೂ ಅವರು ಏನೂ ಕೊಡದೆ ನಾಳೆ ಬಾ ಎಂದು ಅವರನ್ನು ಆರು ತಿಂಗಳು ಸುತ್ತಾಡಿಸುತ್ತಾರೆ. ಆಗ ಪರಮಾತ್ಮನು ಅವರ ಮಡದಿಯನ್ನು ಕೇಳಿ ನಾಸಿಕದಲ್ಲಿದ್ದ ಮೂಗುತಿಯನ್ನು ಪಡೆದು ನಾಯಕರ ಹತ್ತಿರ ಬಂದು ವರಾಹ ಕೊಡು ಎಂದು ಕೇಳುತ್ತಾರೆ. ನಾಯಕರು ಇದು ನಮ್ಮಾಕಿಯದು ಎಂದು ಯೋಚಿಸುತ್ತಾ ಮನೆಗೆ ಬಂದು ಸರಸ್ವತಿಬಾಯಿಯ ಬರಿಯ ನಾಸಿಕವನ್ನು ಕಂಡು ಮೂಗುತಿ ಎಲ್ಲಿ ಎಂದು ವಿಚಾರಿಸುತ್ತಾರೆ. ಆಗ ಅವಳು ದಾನ ಮಾಡಿದೆ ಎಂದು ಹೇಳಲಾಗಿ ವಿಷ ಪ್ರಾಶನ ಮಾಡಲು ಹೋದಾಗ ಮೂಗುತಿ ಬಟ್ಟಲಲ್ಲಿ ಬಿದ್ದ ಶಬ್ದವಾಗಿ ಅದನ್ನು ನಾಯಕರಿಗೆ ತಂದಿತ್ತಳು. ಅಂಗಡಿಯಲ್ಲಿ ಭದ್ರವಾಗಿ ಇಟ್ಟಿದ್ದ ಮೂಗುತಿ ಇರಲಿಲ್ಲ. ಮತ್ತೆ ಮನೆಗೆ ಹೋಗಿ ಬ್ರಾಹ್ಮಣನ ವಿಚಾರವೆಲ್ಲವನ್ನು ಹೆಂಡತಿಯಿಂದ ಕೇಳಿ ತಿಳಿದುಕೊಂಡ. ಆಗ ಶ್ರೀನಿವಾಸನಾಯಕನಿಗೆ ಜ್ಞಾನೋದಯವಾಗಿ ಪರಮಾತ್ಮನನ್ನು ಶರಣು ಹೋಗುತ್ತಾರೆ.
'ಕರ್ನಾಟಕ ಸಂಗೀತ ಪಿತಾಮಹ' ಶ್ರೀ ಪುರಂದರದಾಸರು
January 16, 2026
0
ತಮ್ಮಲ್ಲಿದ್ದ ಎಲ್ಲಾ ಆಸ್ತಿಯನ್ನು ತುಳಸೀ ದಳ ಇಟ್ಟು ಕೃಷ್ಣಾರ್ಪಣ ಎನ್ನುತ್ತಾರೆ. ತದನಂತರ ಅವರು ವ್ಯಾಸರಾಯರ ಸಮಕ್ಷಕ್ಕೆ ಬಂದು ಶರಣಾಗತರಾಗಿ ಉದ್ಧಾರ ಮಾಡಬೇಕೆಂದು ಬೇಡಿಕೊಳ್ಳುತ್ತಾರೆ. ವ್ಯಾಸರಾಯರು ಅವರನ್ನು ತಮ್ಮ ಶಿಷ್ಯರಾಗಿ ಪರಿಗಣಿಸಿ ಅವರಿಗೆ 'ಪುರಂದರವಿಠಲ' ಎಂಬ ಅಂಕಿತವನ್ನು ಕೊಡುತ್ತಾರೆ. ತದನಂತರ ಅವರು ನಾಲ್ಕು ಲಕ್ಷ ಎಪ್ಪತ್ತೈದು ಸಾವಿರ ದೇವರ ನಾಮಗಳನ್ನು ರಚಿಸುತ್ತಾರೆ. ಆ ದೇವರನಾಮಗಳೆಲ್ಲವೂ ವೇದ ಉಪನಿಷತ್ತುಗಳ ಸಾರವೇ ಆಗಿದೆ. ದಾಸರು 'ಆಡು ಮುಟ್ಟದ ಸೊಪ್ಪಿಲ್ಲ' ಎಂಬ ರೀತಿ ಎಲ್ಲಾ ಆಯಾಮಗಳಲ್ಲೂ ದೇವರ ನಾಮಗಳನ್ನು ರಚಿಸಿದ್ದಾರೆ. ಸಮಾಜದಲ್ಲಿ ನಡೆಯುವ ಆಗುಹೋಗುಗಳನ್ನು ನೋಡಿ ಅದರ ಬಗ್ಗೆಯೂ ಕಳಕಳಿಯಿಂದ ದೇವರ ನಾಮಗಳನ್ನು ಹಾಡಿದ್ದಾರೆ. ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರ ಎಂದು ಮನುಕುಲಕ್ಕೆ ಸಂದೇಶವನ್ನು ಕೊಟ್ಟಿದ್ದಾರೆ. ಇಂತಹ ಮಾನವ ಜನ್ಮ ಬಂದಾಗ ನಾವುಗಳು ಅದನ್ನು ಸಾರ್ಥಕಪಡಿಸಿಕೊಳ್ಳಬೇಕುನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ ಎಂದಿದ್ದಾರೆ.
ನಾವು ಹೇಗೆ ಸಮಯ ಕಳೆಯಬೇಕೆಂದರೆ ಕಾಗದ ಬಂದಿದೆ ನಮ್ಮ ಕಮಲ ನಾಭನದು ಈ ಕಾಗದವನ್ನು ಓದಿಕೊಂಡುಕಾಲ ಕಳೆಯಿರೋ ತಿಳಿಸಿದ್ದಾರೆ. ನಮ್ಮ ಆಕಾಂಕ್ಷೆಗಳಿಗೆ ಕೊನೆಯಿಲ್ಲ. ಅದನ್ನು ಅರಿತು ಭಿನ್ನಹಕೆ ಬಾಯಿಲ್ಲವಯ್ಯ ಅನಂತ ಅಪರಾಧ ಎನ್ನಲ್ಲಿ ಇರಲಾಗಿ ಭಿನ್ನಹಕೆ ಬಾಯಿಲ್ಲವಯ್ಯ ಅಂದಿದ್ದಾರೆ.
ನಮಗೆ ಎಷ್ಟು ಮೋಹ ಇರುತ್ತದೆ ಅಂದರೆ ಶಿಶು ಮೋಹ ಸತಿ ಮೋಹ ಜನನಿ ಜನಕರ ಮೋಹ... ಎಂದಿದ್ದಾರೆ. ಅನ್ನಮದ ಅರ್ಥ ಮದ ಅಖಿಲ ವೈಭವದ ಮದ ಎಂದಿದ್ದಾರೆ.
ಅವರು ಅವರು ವೈರಾಗ್ಯದ ಸಾಕಾರ ಮೂರ್ತಿಗಳಾಗಿದ್ದರು. ಆಗಿನ ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತು ರತ್ನಗಳು ಯಾಯಿ ವಾರಕ್ಕೆ ಬಂದಾಗ ನೀಡಿದರೂ ಅದರನ್ನೆಲ್ಲ ಕಲ್ಲು ಮಣ್ಣು ಎಂದು ಭಾವಿಸಿ ತಿರಸ್ಕಾರ ಮಾಡಿ ಕೇವಲ ವೈರಾಗ್ಯದಿಂದ ಜೀವಿಸಿ ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಂಡಿದ್ದಾರೆ. ಅವರ ಮಹಿಮೆಗಳಂತೂ ಅಪಾರ ಅದನ್ನು ಹೇಳಲು ಅಸಾಧ್ಯ ವ್ಯಾಸರಾಯರೇ ಇವರನ್ನು ದಾಸರೆಂದರೆ ಪುರಂದರ ದಾಸರಯ್ಯ ಎಂದು ಕೊಂಡಾಡಿದ್ದಾರೆ. ಇವರು ಎಂಥ ಮಹನೀಯರು ಎಂದು ನಾವು ತಿಳಿದುಕೊಳ್ಳಬೇಕು ಇವರ ಬಗ್ಗೆ ಮಾತನಾಡುವುದು ಇವರ ಬಗ್ಗೆ ಬರೆಯುವುದು ಎಂದರೆ ಅದು ಕೇವಲ ನಮ್ಮ ಉದ್ಧಾರಕ್ಕೆ ಹೊರತು ಬೇರೆ ಏನೂ ಇಲ್ಲ ಅವರು ಮಾಡಿದ ಪ್ರತಿಯೊಂದು ಹಾಡಿನಲ್ಲಿ ನಮಗೆ ಭಕ್ತಿ ಹುಟ್ಟಿ ನಾವು ವಿರಕ್ತರಾಗಿ ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ಇದೇ ಅವರ ಆರಾಧನೆ.