ಆನೇಕಲ್ ನ ವಿವಿಧ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಅಳವಡಿಕೆ!

varthajala
0

 ಆನೇಕಲ್ : ಇಂದು ದೇಶದಾದ್ಯಂತ ಅನೇಕ ಕ್ಷೇತ್ರಗಳಲ್ಲಿ ವಸ್ತ್ರ ಸಂಹಿತೆ ಜಾರಿಯಲ್ಲಿದ್ದು, ದೇವಸ್ಥಾನಗಳು, ಗುರುದ್ವಾರಗಳು, ಚರ್ಚುಗಳು, ಮಸೀದಿಗಳು ಸೇರಿದಂತೆ ವಿವಿಧ ಪ್ರಾರ್ಥನಾ ಸ್ಥಳಗಳು, ಖಾಸಗಿ ಸಂಸ್ಥೆಗಳು, ಶಾಲಾ–ಕಾಲೇಜುಗಳು, ನ್ಯಾಯಾಲಯಗಳು, ಪೊಲೀಸ್ ಇಲಾಖೆ ಮುಂತಾದೆಡೆಗಳಲ್ಲಿ ಶಿಷ್ಟ ಹಾಗೂ ಸಂಯಮಿತ ವೇಷಭೂಷಣ ಪಾಲನೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ದೇವಸ್ಥಾನಗಳ ಪಾವಿತ್ರ್ಯತೆ, ಸಂಸ್ಕೃತಿಯ ಗೌರವ ಮತ್ತು ಶಿಸ್ತುಬದ್ಧ ವಾತಾವರಣವನ್ನು ಕಾಪಾಡುವ ಉದ್ದೇಶದಿಂದ, ದೇವಸ್ಥಾನಗಳಿಗೆ ಬರುವ ಭಕ್ತರು ಯೋಗ್ಯ ವೇಷಭೂಷಣವನ್ನು ಧರಿಸುವಂತೆ ಜಾಗೃತಿ ಮೂಡಿಸುವ ಕಾರ್ಯವನ್ನು ಕರ್ನಾಟಕ ಮಂದಿರ ಮಹಾಸಂಘದಿಂದ ಕೈಗೊಳ್ಳಲಾಗಿದೆ. ಈ ದಿಶೆಯಲ್ಲಿ ಚಂದಾಪುರದಲ್ಲಿರುವ ಪ್ರಸಿದ್ಧ ದೇವಸ್ಥಾನಗಳಾದ ಶ್ರೀಕೋದಂಡರಾಮ ದೇವಸ್ಥಾನ, ಬನಹಳ್ಳಿಯ ದಕ್ಷಿಣ ಮುಖ ಶ್ರೀಆಂಜನೇಯ ಸ್ವಾಮಿ ದೇವಸ್ಥಾನ, ಹಾಗೂ ಯಾರಂಡಹಳ್ಳಿಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ವಸ್ತ್ರ ಸಂಹಿತೆಯ ಕುರಿತು ಸೂಚನಾ ಫಲಕಗಳನ್ನು ಅಳವಡಿಸಿ, ಭಕ್ತರಲ್ಲಿ ಜನಪ್ರಬೋಧನೆ ನಡೆಸಲಾಗುತ್ತಿದೆ. ದೇವಾಲಯಗಳು ಭಕ್ತಿಯ ಮತ್ತು ಸಾತ್ವಿಕತೆಯ ಕೇಂದ್ರಗಳಾಗಿರುವುದರಿಂದ, ಭಕ್ತರು ತುಂಡು ಅಥವಾ ಅಸಂಗತ ಉಡುಪುಗಳನ್ನು ತೊರೆದು, ಭಾರತೀಯ ಸಂಸ್ಕೃತಿಗೆ ತಕ್ಕಂತೆ ವೇಷಭೂಷಣ ಧರಿಸಿ ದೇವಸ್ಥಾನ ವ್ಯವಸ್ಥಾಪನೆಗೆ ಸಹಕರಿಸಬೇಕೆಂದು ವಿನಂತಿಸಲಾಗಿದೆ. 

ಭಾರತೀಯ ಸಾತ್ವಿಕ ಉಡುಪುಗಳು: ಮಹಿಳೆಯರು ಚುಡಿದಾರ, ಲಂಗ–ದಾವಣಿ, ಸಲ್ವಾರ್–ಕುರ್ತಾ, ಸೀರೆ, ಓಡಾಣಿ ಮುಂತಾದ ಪಾರಂಪರಿಕ ಮತ್ತು ಸಾತ್ವಿಕ ವೇಷಭೂಷಣಗಳನ್ನು ಧರಿಸಬೇಕು.
ಪುರುಷರು ಕುರ್ತಾ, ಧೋತಿ, ಲುಂಗಿ, ಪೈಜಾಮ ಅಥವಾ ಸಾಮಾನ್ಯ ಶರ್ಟ್–ಪ್ಯಾಂಟ್ ಧರಿಸುವುದು ಸೂಕ್ತವಾಗಿದೆ.
ಅಸಾತ್ವಿಕ ಹಾಗೂ ಅನರ್ಹ ಉಡುಪುಗಳು: ಪಾಶ್ಚಾತ್ಯ ಶೈಲಿಯ ಸ್ಕರ್ಟ್, ಮಿಡಿ, ಶಾರ್ಟ್ ಪ್ಯಾಂಟ್, ಸ್ಯಾಂಡೋ ವೆಸ್ಟ್, ಜೀನ್ಸ್, ಸ್ಲೀವ್‌ಲೆಸ್ ಡ್ರೆಸ್, ನೈಟ್ ಡ್ರೆಸ್, ಸಾಕ್ಸ್ ಮುಂತಾದ ಉಡುಪುಗಳನ್ನು ದೇವಸ್ಥಾನ ಪ್ರವೇಶದ ವೇಳೆ ಧರಿಸದಂತೆ ಭಕ್ತರಲ್ಲಿ ವಿನಂತಿಸಲಾಗುತ್ತದೆ. ಭಕ್ತರು ಈ ವಸ್ತ್ರ ಸಂಹಿತೆಯನ್ನು ಸ್ವಯಂ ಪ್ರೇರಣೆಯಿಂದ ಪಾಲಿಸಿ, ದೇವಾಲಯಗಳ ಸಾಂಸ್ಕೃತಿಕ ಹಾಗೂ ಧಾರ್ಮಿಕ ಮೌಲ್ಯಗಳ ರಕ್ಷಣೆಗೆ ಕೈಜೋಡಿಸಬೇಕೆಂದು ಕರ್ನಾಟಕ ಮಂದಿರ ಮಹಾಸಂಘ ಮನವಿ ಮಾಡಿದೆ.

 

Post a Comment

0Comments

Post a Comment (0)