ಡಯಾಲಿಸಿಸ್‌ ರೋಗಿಗಳಿಗೆ ನೆರವಾಗಲು ಸ್ಯಾರಿಯಲ್ಲಿ ವಾಕಥಾನ್

varthajala
0

 ಬೆಂಗಳೂರು: ಆರೋಗ್ಯವಾಗಿ ಬದುಕುವವರು ಇಂದಿನ ದಿನಗಳಲ್ಲಿ ಅದೃಷ್ಟವಂತರು ಎಂದು ಭಾವಿಸಿದ್ದೇವೆ. ಈ ನಿಟ್ಟಿನಲ್ಲಿ ಸಮಾಜಮುಖಿಯಾಗಿ ಕೈಗೊಂಡ ಸ್ಯಾರಿ ನಡಿಗೆ ನಿಜಕ್ಕೂ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಇಲಾಖೆಯ ಅಧ್ಯಕ್ಷರಾದ ಎಸ್.ಇ ಸುಧೀಂದ್ರ ಅವರು ಹೇಳಿದರು. 

ನಗರದ ಕೊಹಿನೂರ್‌ ಗ್ರೌಂಡ್‌ನಲ್ಲಿ ಮಧುರಾ ಮಹಿಳಾ ಕ್ಲಬ್, ಸುದಯ ಫೌಂಡೇಶನ್ ಮತ್ತು ಗರುಡ ಫೌಂಡೇಶನ್ ಸಹಯೋಗದೊಂದಿಗೆ ಆಯೋಜಿಸಲಾದ ಸ್ಯಾರಿ ವಾಕಥಾನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದ ಡಯಾಲಿಸಿಸ್‌ ಗೆ ಒಳಗಾಗಿರುವ ರೋಗಿಗಳಿಗೆ ಧನಸಹಾಯ ಮಾಡುವ ನಿಟ್ಟಿನಲ್ಲಿ ನಡೆಸಲಾದ ಸ್ಯಾರಿ ವಾಕಥಾನ್‌ ಕಾರ್ಯಕ್ರಮವು ಸಮಾಜಕ್ಕೆ ನಿದರ್ಶನವಾಗಲಿದೆ ಎಂದರು.

ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಎಂಎಲ್‌ಎ ಉದಯ್‌ ಗರುಡಾಚಾರ್‌ ಮಾತನಾಡಿ, ಪೌರಕಾರ್ಮಿಕರು ಈ ನಡಿಗೆಯಲ್ಲಿ ಪಾಲ್ಗೊಂಡಿರುವುದು ನಿಜಕ್ಕೂ ವಿಶೇಷವಾದ ಘಳಿಗೆ ಎಂದು ಎಲ್ಲರಿಗೂ ಶುಭ ಕೋರಿದರು. 

ಬಸವನಗುಡಿ ವಿಧಾನಸಭಾ ಕ್ಷೇತ್ರದ ಎಂಎಲ್‌ಎ ಎಲ್‌.ಎ ರವಿಸುಬ್ರಮಣ್ಯ ಮಾತನಾಡಿ, ಮನೆಯಲ್ಲಿ ಮಹಿಳೆಯೊಬ್ಬರು ಆರೋಗ್ಯವಾಗಿದ್ದರೆ ಕುಟುಂಬವೇ ಆರೋಗ್ಯವಿದ್ದಂತೆ. ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸೀರೆಯನ್ನು ಉಟ್ಟು ಆರ್ಥಿಕವಾಗಿ ಹಿಂದುಳಿದ ಮತ್ತು ಡಯಾಲಿಸಿಸ್‌ ಗೆ ಒಳಗಾಗಿರುವ ರೋಗಿಗಳಿಗೆ ಧನ ಸಂಗ್ರಹ ಮಾಡುವ ಸದುದ್ದೇಶ ನಿಜಕ್ಕೂ ಸಮಾಜಕ್ಕೆ ಸಂದೇಶ ನೀಡುವ ಕೆಲಸ ಎಂದು ಸಂತಸ ವ್ಯಕ್ತಪಡಿಸಿದರು.  

ಸ್ಯಾರಿ ವಾಕಥಾನ್‌ ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದು, ಸೌಂದರ್ಯ, ಒಗ್ಗಟ್ಟು ಮತ್ತು ಮಾನವೀಯತೆಯನ್ನು ಪ್ರದರ್ಶಿಸುವ ಮೂಲಕ ಕಾಲ್ನಡಿಗೆ ಕೈಗೊಂಡು ಡಯಾಲಿಸಿಸ್‌ ಕುರಿತು ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ನೆರೆದಿದ್ದ ಪೌರಕಾರ್ಮಿಕರಿಗೆ ಸೀರೆ ವಿತರಣೆ ಮಾಡಲಾಯಿತು. ಸ್ಥಳದಲ್ಲಿ ವಿವಿಧ ಸ್ಟಾಲ್‌ಗಳನ್ನು ಹಾಕಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮೀಡಿಯಾ ಕನೆಕ್ಟ್‌ ಮತ್ತು ಸುದಯ ಫೌಂಡೇಶನ್‌ ಸಂಸ್ಥಾಪಕರು ಹಾಗೂ ಸಿಇಒ ದಿವ್ಯಾ ರಂಗೇನಹಳ್ಳಿ, ಗರುಡ ಫೌಂಡೇಶನ್‌ ವ್ಯವಸ್ಥಾಪಕ ನಿರ್ದೇಶಕರಾದ ಮೇದಿನಿ ಉದಯ್‌ ಗರುಡಾಚಾರ್‌, 

ಕಿರುತೆರೆ ನಟಿ ವೀಣಾ ರಾವ್‌, ಕಿರುತೆರೆ ನಟಿ ಭುವನ ಮುರಳಿ, ಮಧುರಾ ವುಮೆನ್ಸ್‌ ಕ್ಲಬ್‌ ನ ಅಧ್ಯಕ್ಷರು ಮತ್ತು ಸಂಸ್ಥಾಪಕರಾದ ಮಂಜುಳಾ ಶಂಕರ್‌, ಸದಸ್ಯರಾದ ಲಕ್ಮೀ ಸಿ.ಪಿ ಮತ್ತು ಅನ್ಷು ಹೆಗಡೆ ಉಪಸ್ಥಿತರಿದ್ದರು. 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:  6364466240, 6364409651

Post a Comment

0Comments

Post a Comment (0)