ಬೆಂಗಳೂರು : ಕರ್ನಾಟಕ ರಾಜ್ಯ ಕಟ್ಟೆ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಫಲಾನುಭವಿಗಳಾಗಿ ನೋಂದಾಯಿಸುವುದು ಮತ್ತು ಅವರ ಸದಸ್ಯತ್ವವನ್ನು ನವೀಕರಿಸಿ ವಿವಿಧ ಸೌಲಭ್ಯಗಳನ್ನು ಒದಗಿಸಲು ಅನುಕೂಲವಾಗುವಂತೆ ರಾಜ್ಯದ 43 ಕಾರ್ಮಿಕ ಅಧಿಕಾರಿಗಳ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಎ.ಐ ಆಧಾರಿತ ತಂತ್ರಾಂಶದೊಂದಿಗೆ "ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್" ಕಾರ್ಮಿಕ ಸೇವಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ಕ್ರಮೀಕರಣ ಮತ್ತು ಸೇವಾಷರತ್ತುಗಳು) ಕಾಯ್ದೆ 1996 ರಡಿ ಪರವಾನಗಿ ಪಡೆದ ಬಿಲ್ಡರ್ ಗಳು (ನಿರ್ಮಾಣಗಾರರು) ಹಾಗೂ ಗುತ್ತಿಗೆ ಕಾರ್ಮಿಕರ (ನಿಯಂತ್ರಣ ಮತ್ತು ನಿರ್ಮೂಲನೆ) ಕಾಯ್ದೆ 1970 ರಡಿ ಪರವಾನಗಿ ಪಡೆದ ಕಂಟ್ರ್ಯಾಕ್ಟರ್‍ಗಳು (ಗುತ್ತಿಗೆದಾರರು) ಮಂಡಳಿಯ ತಂತ್ರಾಂಶದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಫಲಾನುಭವಿಗಳಾಗಿ ನೋಂದಣೆ/ನವೀಕರಣ ಮಾಡಿಸಲು ಉದ್ಯೋಗ ಪ್ರಮಾಣಪತ್ರವನ್ನು ನೀಡುವ ವಿಧಾನ ಹಾಗೂ ಅರ್ಹ ಕಟ್ಟೆ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಲು ನಿರ್ಮಾಣದಾರರು/ಗುತ್ತಿಗೆದಾರರುಗಳೀ ಗೆ, ಬಿಲಡರ್/ಕಂಟ್ರ್ಯಾಕ್ಟರ್ ಮಾಡ್ಯೂಲ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಹಾಗಾಗಿ ಸಂಬಂಧಪಟ್ಟ ನಿರ್ಮಾಣದಾರರು/ಗುತ್ತಿಗೆದಾರರು ಮಂಡಳಿಯು ತಯಾರಿಸಿರುವ https://www.kbocwwb.karnataka. gov.in ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು: ಬಿಲ್ಡರ್ ಮಾಡ್ಯೂಲ್: ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಯ ಕಾಯ್ದೆಯ ಸೆಕ್ಷನ್-7ರ ಅಡಿಯಲ್ಲಿ ಪಡೆದ ಚಾಲ್ತಿಯಲ್ಲಿರುವ ನಮೂನೆ-II ನೋಂದಣಿ ಪ್ರಮಾಣಪತ್ರ, ಸ್ಥಳೀಯ ಪ್ರಾಧಿಕಾರದಿಂದ ಪಡೆದ ಪ್ಲಾನ್ ಅನುಮೋದನೆ ಪತ್ರವನ್ನು ಅಪ್ಲೋಡ್ ಮಾಡಬೇಕು.
ಕಂಟ್ರ್ಯಾಕ್ಟರ್ ಮಾಡ್ಯೂಲ್: ಗುತ್ತಿಗೆ ಕಾರ್ಮಿಕರ (ನಿಯಂತ್ರಣ ಮತ್ತು ನಿರ್ಮೂಲನೆ) ಕಾಯ್ದೆ 1970 ರ ಕಲಂ-12 ರಡಿಯ ಚಾಲ್ತಿಯಲ್ಲಿರುವ ನಮೂನೆ-VI ರ ಪರವಾನಗಿ ಪತ್ರವನ್ನು ಅಪ್ಲೋಡ್ ಮಾಡಬೇಕು.
ಈ ಪ್ರಕ್ರಿಯೆಯ ಕುರಿತ ಮಾಹಿತಿಯನ್ನು ಮಂಡಳಿಯ ವೆಬ್‍ಸೈಟ್ https://karbwwb.karnataka.gov. in ನಲ್ಲಿ ಪಡೆಯಬಹುದಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.