ಪಾನ್ಸರೆ ಹತ್ಯೆ ಪ್ರಕರಣದಲ್ಲಿ ಸುಳ್ಳು ಆರೋಪ ಹೊತ್ತ ನಿರಪರಾಧಿ ಸಮೀರ್ ಗಾಯಕ್ವಾಡ್ ನಿಧನ ! "ಸಮೀರ್ ಅವರ ಸಾವು ವ್ಯವಸ್ಥೆಯು ತೆಗೆದುಕೊಂಡ ಬಲಿಯಾಗಿದೆ!" - ಸನಾತನ ಸಂಸ್ಥೆ

varthajala
0

ಸನಾತನ ಸಂಸ್ಥೆಯ ಸಾಧಕರಾದ ಶ್ರೀ. ಸಮೀರ್ ಗಾಯಕ್ವಾಡ್ ಅವರು ಇಂದು ದುರದೃಷ್ಟವಶಾತ್ ನಿಧನರಾಗಿದ್ದಾರೆ. ಈಶ್ವರನು ಅವರ ಆತ್ಮಕ್ಕೆ ಸದ್ಗತಿಯನ್ನು ನೀಡಲಿ ಎಂದು ನಾವು ಪ್ರಾರ್ಥಿಸುತ್ತೇವೆ. 2015ರಲ್ಲಿ ಕಾಮ್ರೇಡ್ ಗೋವಿಂದ್ ಪಾನ್ಸರೆ ಹತ್ಯೆ ಪ್ರಕರಣದಲ್ಲಿ ಸಮೀರ್ ಅವರನ್ನು ಅನಗತ್ಯವಾಗಿ ಬಂಧಿಸಲಾಗಿತ್ತು. ಬೈಕಿನಲ್ಲಿ ಬಂದ ಇಬ್ಬರು ಹಂತಕರು ಈ ಕೃತ್ಯ ಎಸಗಿದ್ದಾರೆ, ಅದರಲ್ಲಿ ಒಬ್ಬರು ಸಮೀರ್ ಗಾಯಕ್ವಾಡ್ ಎಂದು ತನಿಖಾ ಸಂಸ್ಥೆಗಳು ಪ್ರತಿಪಾದಿಸಿದ್ದವು. ಒಬ್ಬ ಶಾಲಾ ಹುಡುಗನನ್ನು ಪ್ರತ್ಯಕ್ಷದರ್ಶಿ ಸಾಕ್ಷಿಯೆಂದು ಕರೆತರಲಾಗಿತ್ತು; ಆದರೆ ಕೇವಲ ಒಂದು ವರ್ಷದಲ್ಲೇ ಆ ಇಬ್ಬರು ಹಂತಕರು ಬೇರೆಯೇ ವ್ಯಕ್ತಿಗಳು ಎಂದು ಘೋಷಿಸಲಾಯಿತು. ಇದರರ್ಥ ಸಮೀರ್ ಗಾಯಕ್ವಾಡ್ ನಿರಪರಾಧಿಯಾಗಿದ್ದರು.

ಸೆರೆಮನೆಯಲ್ಲೂ ಅವರು ಸಾಕಷ್ಟು ಕಿರುಕುಳ ಅನುಭವಿಸಿದರು. 19 ತಿಂಗಳುಗಳ ಕಾಲ ಅವರನ್ನು ಜೈಲಿನಲ್ಲಿ ಇರಿಸಲಾಗಿತ್ತು. ತದನಂತರ ಅವರು ಜಾಮೀನಿನ ಮೇಲೆ ಹೊರಬಂದಿದ್ದರು; ಆದರೆ ಮಾಡದ ತಪ್ಪಿಗೆ ಸಿಲುಕಿಸಿದ ಕಾರಣ ಅವರ ಮೇಲೆ ಮತ್ತು ಅವರ ಕುಟುಂಬದ ಮೇಲೆ ವಿಪರೀತ ಮಾನಸಿಕ ಒತ್ತಡವಿತ್ತು. ಪಾನ್ಸರೆ ಕೊಲೆ ಪ್ರಕರಣದ ಆರೋಪಿ ಎಂದು ಮಾಧ್ಯಮಗಳಲ್ಲಿ ಬಿಂಬಿತವಾದ ಕಾರಣ ಅವರ ಮಾನಹಾನಿ ಎಷ್ಟು ದೊಡ್ಡ ಮಟ್ಟದಲ್ಲಿ ಆಗಿತ್ತೆಂದರೆ, ಅವರಿಗೆ ವ್ಯವಹಾರ ಮತ್ತು ಉದ್ಯೋಗದ ಎಲ್ಲ ಸ್ಥಳಗಳಲ್ಲೂ ತೊಂದರೆಯಾಯಿತು. ಸಾಮಾನ್ಯ ರೈತ ಕುಟುಂಬದ ಈ ನಿರಪರಾಧಿ ಸಾಧಕನನ್ನು ತನಿಖಾ ಸಂಸ್ಥೆಗಳು ನಡೆಸಿದ ಕಿರುಕುಳ ಮತ್ತು ಪ್ರಗತಿಪರರು ಮಾಡಿದ ಅಪಪ್ರಚಾರವು ಅವರ ಜೀವನವನ್ನೇ ಧ್ವಂಸಗೊಳಿಸಿತ್ತು. ಪ್ರಜಾಪ್ರಭುತ್ವ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಗಾಳಿಗೆ ತೂರಿ, ಸಮೀರ್ ಗಾಯಕ್ವಾಡ್ ಅವರಿಗೆ ಕೊಲ್ಹಾಪುರದಲ್ಲಿ ವಕೀಲರೂ ಸಿಗದಂತೆ ಮಾಡಲಾಗಿತ್ತು. ಇಂತಹ ವ್ಯವಸ್ಥಿತ ದೌರ್ಜನ್ಯಗಳನ್ನು ಅವರು ಎದುರಿಸಬೇಕಾಯಿತು; ದುರದೃಷ್ಟವಶಾತ್ ಇಂದು ಅವರು ಮೃತಪಟ್ಟಿದ್ದಾರೆ. "ಇದು ಕೇವಲ ಸಾವಲ್ಲ, ಬದಲಿಗೆ ವ್ಯವಸ್ಥೆಯು ಪಡೆದ ಬಲಿ" ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಚೇತನ್ ರಾಜಹಂಸ್ ಅವರು ಪ್ರತಿಕ್ರಿಯಿಸಿದ್ದಾರೆ. ಸಮೀರ್ ಗಾಯಕ್ವಾಡ್ ಅವರನ್ನು ಬಂಧಿಸಿದಾಗ, ತನಿಖೆಯ ಸಮಯದಲ್ಲಿ ಪೊಲೀಸರಿಗೆ ಪಾನ್ಸರೆ ಹತ್ಯೆಯ ದಿನದಂದು ಸಮೀರ್ ಪಾಲ್ಘರ್‌ನಲ್ಲಿದ್ದರು ಎಂಬ ವಿಷಯ ತಿಳಿದುಬಂದಿತ್ತು; ಆದರೆ ಒತ್ತಡದ ಕಾರಣ ಅವರು ಅದನ್ನು ನ್ಯಾಯಾಲಯದ ಮುಂದೆ ತರಲಿಲ್ಲ. ಸಮೀರ್ ಅವರು ನ್ಯಾಯಾಲಯದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿ ತಮ್ಮನ್ನು ರಕ್ಷಿಸಿಕೊಳ್ಳಬಹುದಿತ್ತು; ಆದರೆ ಬಹುಶಃ ಈಗ ಆ ಅವಕಾಶ ಕೈತಪ್ಪಿ ಹೋಗಿದೆ. ಈ ಪ್ರಕರಣದಲ್ಲಿ ಇಂದಿಗೂ ಅವರ ಹೆಸರು 'ಆರೋಪಿ ನಂ. 1' ಎಂದೇ ದಾಖಲಾಗಿದೆ; ಆದರೆ ಸಮೀರ್ ಅವರಿಗೆ ಜಾಮೀನು ಸಿಕ್ಕ ನಂತರ ಪೊಲೀಸರು ಹೊಸ ಸಿದ್ಧಾಂತವನ್ನು (Theory) ಮಂಡಿಸಿ, ಪಾನ್ಸರೆ ಕೊಲೆಯನ್ನು ಸಾರಂಗ್ ಅಕೋಲ್ಕರ್ ಮತ್ತು ವಿನಯ್ ಪವಾರ್ ಮಾಡಿದ್ದಾರೆ ಎಂದು ಘೋಷಿಸಿದರು. ಕೆಲವು ತಿಂಗಳುಗಳ ನಂತರ ಮತ್ತೆ ಹೊಸ ಇಬ್ಬರ ಹೆಸರನ್ನು ಮುನ್ನೆಲೆಗೆ ತಂದರು. ಸಮೀರ್ ಈ ದೋಷಪೂರಿತ ತನಿಖೆಯ ಬಲಿಪಶುವಾದರು.  ಪ್ರಗತಿಪರರ ಒತ್ತಡಕ್ಕೆ ಮಣಿದು ಪೊಲೀಸರು ಸನಾತನದ ಸಾಧಕರನ್ನು ಸಿಲುಕಿಸುವ ಪಾಪದ ಕೆಲಸ ಮಾಡಿದರೇ?
ಗಾಯಕ್ವಾಡ್ ಕುಟುಂಬದ ದುಃಖದಲ್ಲಿ ಸನಾತನ ಪರಿವಾರ ಭಾಗಿಯಾಗಿದೆ. ಕುಟುಂಬದವರೊಂದಿಗೆ ಮಾತನಾಡಿದಾಗ, ಸುಳ್ಳು ಪ್ರಕರಣದಲ್ಲಿ ಸಿಲುಕಿದ ನೋವು ಸಮೀರ್ ಅವರ ಮನಸ್ಸಿನ ಮೇಲೆ ಸದಾ ಇತ್ತು ಎಂಬುದು ತಿಳಿಯಿತು. ಅವರ ಸಾರ್ವಜನಿಕ ಜೀವನ ನಾಶವಾಗಿತ್ತು. ಕೊಲೆ ಆರೋಪಿಯೆಂದು ಅವರಿಗೆ ಕೆಲಸ ಸಿಗುತ್ತಿರಲಿಲ್ಲ. ಈ ನಷ್ಟವನ್ನು ಯಾರು ತುಂಬಿಕೊಡುತ್ತಾರೆ ? ಅಜ್ಮಲ್ ಕಸಬ್‌ನಂತಹ ಕ್ರೂರ ಭಯೋತ್ಪಾದಕನಿಗೆ ಸರ್ಕಾರಿ ವೆಚ್ಚದಲ್ಲಿ ವಕೀಲರು ಸಿಗುತ್ತಾರೆ, ಮರಣದಂಡನೆ ಶಿಕ್ಷೆಯಾದವರಿಗಾಗಿ ಮಧ್ಯರಾತ್ರಿ 1 ಗಂಟೆಗೆ ಸುಪ್ರೀಂ ಕೋರ್ಟ್ ಬಾಗಿಲು ತೆರೆಯುತ್ತದೆ; ಆದರೆ ಕೇವಲ ಒಬ್ಬ ಹಿಂದೂ, ಸನಾತನ ಸಂಸ್ಥೆಯ ಸಾಧಕ ಮತ್ತು ಬಡ ರೈತನ ಮಗ ಎಂಬ ಕಾರಣಕ್ಕೆ ಸಮೀರ್ ಅವರಿಗೆ ವಕೀಲರು ಸಿಗದಂತೆ ಮಾಡಲಾಗುತ್ತದೆ. ಅವರ ಜಾಮೀನು ರದ್ದುಗೊಳಿಸಲು ಸರ್ಕಾರ ಉಚ್ಚ ನ್ಯಾಯಾಲಯಕ್ಕೆ ಹೋಗುತ್ತದೆ. ಪೊಲೀಸರು ಯಾರ ಒತ್ತಡದಿಂದ ನ್ಯಾಯಾಲಯದಲ್ಲಿ ಪರಸ್ಪರ ವಿರೋಧಾಭಾಸದ ಪುರಾವೆಗಳನ್ನು ಸಲ್ಲಿಸುತ್ತಾರೆ?
"ಪ್ರಗತಿಪರರ ವೈಚಾರಿಕ ಭಯೋತ್ಪಾದನೆಯು ಸರ್ಕಾರದ ಮೇಲೆ ಒತ್ತಡ ಹೇರಿತು ಮತ್ತು ಇಂದು ಒಬ್ಬ ನಿರಪರಾಧಿ ಬಲಿಯಾಗಿದ್ದಾನೆ ಎಂಬುದು ನಮಗೆ ಅತ್ಯಂತ ದುಃಖದ ಸಂಗತಿಯಾಗಿದೆ. ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಸ್ಟಾನ್ ಸ್ವಾಮಿ ನಿಧನರಾದಾಗ ಮುಂಬೈ ಉಚ್ಚ ನ್ಯಾಯಾಲಯದ ಪೀಠದ ನ್ಯಾಯಾಧೀಶರು ಶೋಕ ವ್ಯಕ್ತಪಡಿಸಿದ್ದರು. ವಿಶ್ವಸಂಸ್ಥೆಯು ಶೋಕ ಪತ್ರಿಕೆಯನ್ನು ಬಿಡುಗಡೆ ಮಾಡಿತ್ತು. ಆದರೆ ಸಮೀರ್ ಗಾಯಕ್ವಾಡ್ ಪರವಾಗಿ ಯಾರಾದರೂ ಧ್ವನಿ ಎತ್ತುತ್ತಾರೆಯೇ?" ಎಂಬ ಪ್ರಶ್ನೆಯನ್ನು ಶ್ರೀ. ರಾಜಹಂಸ್ ಅವರು ಈ ಸಂದರ್ಭದಲ್ಲಿ ಎತ್ತಿದ್ದಾರೆ..

Post a Comment

0Comments

Post a Comment (0)