ಬೆಂಗಳೂರು : ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಮಕ್ಕಳಿಗೆ ಹಚ್ಚಿನ ವಿದ್ಯಾಭ್ಯಾಸ ಕೈಗೊಳ್ಳಲು ಹಣ ಮಂಜೂರು ಮಾಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂಖಾನ್ ಅವರು ತಿಳಿಸಿದರು. ಇಂದು ವಿಧಾನ ಪರಿಷತ್ತಿನ ಅಧಿವೇಶನದ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಶಿವಕುಮಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಮಹಾನಗರ ಪಾಲಿಕೆಗಳಲ್ಲಿ ಖಾಯಂ/ನೇರಪಾವತಿ/ದಿನಗೂಲಿ ಸೇರಿ 8380 ಹಾಗೂ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳಲ್ಲಿ 10,368 ಒಟ್ಟು 18,748 ಜನ ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಸರ್ಕಾರದ ಆದೇಶದ ದಿನಾಂಕ: 07-08-2017ರ ರೀತ್ಯಾ ಸ್ವಚ್ಛತಾ ಕಾರ್ಯವನ್ನು ಹೊರಗುತ್ತಿಗೆ ನೀಡುವುದನ್ನು ಸ್ಥಗಿತಗೊಳಿಸಲಾಗಿದ್ದು, ಹಾಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ - ಪೌರಕಾರ್ಮಿಕರನ್ನು ಅಗತ್ಯಕ್ಕೆ ಅನುಗುಣವಾಗಿ, ನೇರಪಾವತಿ - ಮೂಲಕ ಕೆಲಸಕ್ಕೆ ತೆಗೆದುಕೊಂಡು ನಗರಸ್ಥಳೀಯ ಸಂಸ್ಥೆಗಳಿಂದ ಸಂಭಾವನೆಯನ್ನು ನೀಡಲು ಆದೇಶಿಸಲಾಗಿರುತ್ತದೆ. ಅದರಂತೆ ಪ್ರಸ್ತುತ ನಗರಸ್ಥಳೀಯ ಸಂಸ್ಥೆಗಳಲ್ಲಿ ಖಾಯಂ/ನೇರಪಾವತಿ/ದಿನಗೂಲಿ/ ಕ್ಷೇಮಾಭಿವೃದ್ಧಿ ಅಡಿಯಲ್ಲಿ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿರುವುದಿಲ್ಲ. ರಾಜ್ಯದ ಮಹಾನಗರ ಪಾಲಿಕೆ (ಜಿ.ಬಿ.ಎ. ಹೊರತುಪಡಿಸಿ), ನಗರಸಭೆ, ಪುರಸಭೆ, ಪಟ್ಟಣಪಂಚಾಯಿತಿಗಳಲ್ಲಿ 12790 ಖಾಯಂ ಹಾಗೂ ನೇರನೇಮಕಾತಿ / ದಿನಗೂಲಿಯಡಿ 5958 ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಖಾಯಂ ಪೌರಸೇವಾ ನೌಕರರಿಗೆ ಸರ್ಕಾರದ ಆದೇಶಾನುಸಾರ ಕಾಲಕಾಲಕ್ಕನುಗುಣವಾಗಿ ಹಾಗೂ ವೇತನ ಆಯೋಗದ ಆದೇಶದಂತೆ ಬದಲಾಗುವ ವೇತನದಂತೆಯೇ ಖಾಯಂ ಪೌರಕಾರ್ಮಿಕರಿಗೂ ಸಹ ವೇತನ ಪಾವತಿಸಲಾಗುತ್ತಿದೆ. ಇನ್ನುಳಿದಂತೆ ಪೌರಕಾರ್ಮಿಕರ ಮಕ್ಕಳ ಹೆಚಿನ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.