ವಿದ್ಯಾರ್ಥಿಗಳ ಸೃಜನಶೀಲತೆಗೆ ವೇದಿಕೆ: ಪರಮ್ ಮತ್ತು ವೇದಾಂತ ಭಾರತಿಯಿಂದ ʻವೇದಾಂತ ಮೇಕಥಾನ್'

varthajala
0

 ಬೆಂಗಳೂರು,ಡಿ.5: ಭಾರತೀಯ ಜ್ಞಾನ ಪರಂಪರೆಯನ್ನು ಆಧುನಿಕ ವಿಜ್ಞಾನದೊಂದಿಗೆ ಬೆಸೆಯುವ ವಿಶಿಷ್ಟ ಪ್ರಯತ್ನವೊಂದಕ್ಕೆ ಉದ್ಯಾನನಗರಿ ಬೆಂಗಳೂರು ಸಾಕ್ಷಿಯಾಗುತ್ತಿದೆ. ಪರಮ್ ಫೌಂಡೇಶನ್ ಮತ್ತು ವೇದಾಂತ ಭಾರತಿ ಜಂಟಿಯಾಗಿ ವಿದ್ಯಾರ್ಥಿಗಳಿಗಾಗಿ 'ವೇದಾಂತ ಮೇಕಥಾನ್' ಎಂಬ ಎರಡು ತಿಂಗಳ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ. ವೇದಾಂತ ಮೇಕಥಾನ್: ಪ್ರಶ್ನೆಗಳು ಅನುಭವಗಳಾಗಿ ಬದಲಾಗುವ ವಿಶಿಷ್ಟ ವೇದಿಕೆಯಾಗಿದೆ. ಪರಮ್ ಫೌಂಡೇಶನ್ ಮತ್ತು ವೇದಾಂತ ಭಾರತಿಯಿಂದ ಆಯೋಜಿಸಿರುವ 'ವೇದಾಂತ ಮೇಕಥಾನ್' ಭಾರತೀಯ ಜ್ಞಾನ ಪರಂಪರೆ ಮತ್ತು ಆಧುನಿಕ ವಿಜ್ಞಾನವನ್ನು ಬೆಸೆಯುವ ಒಂದು ಅಪೂರ್ವ ಪ್ರಯೋಗವಾಗಿದೆ. ಎರಡು ತಿಂಗಳ ಕಾಲ ನಡೆಯುವ ಈ ನವೀನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವೇದಾಂತದ 'ಮಾಯೆ', 'ಚೈತನ್ಯ'ದಂತಹ ದಾರ್ಶನಿಕ ವಿಚಾರಗಳನ್ನು ದೃಷ್ಟಿ ಭ್ರಮೆ ಅಥವಾ ನರವಿಜ್ಞಾನದಂತಹ ಆಧುನಿಕ ತಂತ್ರಜ್ಞಾನದೊಂದಿಗೆ ಜೋಡಿಸಿ, ಸಂವಾದಾತ್ಮಕ ಪ್ರದರ್ಶಿಕೆಗಳನ್ನು ಸಿದ್ಧಪಡಿಸಲಿದ್ದಾರೆ.  ತಜ್ಞರ ಮಾರ್ಗದರ್ಶನದಲ್ಲಿ ಮೂಡಿಬರುವ ಈ ಸೃಜನಶೀಲ ಮಾದರಿಗಳು ಅಂತಿಮವಾಗಿ ಜನವರಿ 31ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ನಡೆಯಲಿರುವ 'ದಕ್ಷಿಣಾಸ್ಯ ದರ್ಶಿನಿ' ಸಾರ್ವಜನಿಕ ಪ್ರದರ್ಶನದಲ್ಲಿ ಅನಾವರಣಗೊಳ್ಳಲಿವೆ. ಇದು ಕೇವಲ ಕಲಿಕೆಯಲ್ಲ, ಪ್ರಾಚೀನ ಜ್ಞಾನವನ್ನು ಪ್ರಾಯೋಗಿಕವಾಗಿ ಅನುಭವಿಸುವ ಒಂದು ಅಪೂರ್ವ ಅವಕಾಶವಾಗಿದೆ.

ಕಾರ್ಯಕ್ರಮದ ವಿಶೇಷತೆ: ವಿಜ್ಞಾನ, ಎಂಜಿನಿಯರಿಂಗ್ ಮಾತ್ರವಲ್ಲದೆ ವಿನ್ಯಾಸ, ಮನೋವಿಜ್ಞಾನ ಮತ್ತು ಮಾನವಿಕ ವಿಭಾಗದ ವಿದ್ಯಾರ್ಥಿಗಳೂ ಭಾಗವಹಿಸಬಹುದು. ಆಯ್ಕೆಯಾದ ತಂಡಗಳಿಗೆ ವಿಜ್ಞಾನಿಗಳು, ಕಲಾಕಾರರು ಮತ್ತು ವಿದ್ವಾಂಸರಿಂದ ಎರಡು ತಿಂಗಳ ಕಾಲ ಮಾರ್ಗದರ್ಶನ ನೀಡಲಾಗುತ್ತದೆ. ತತ್ವಶಾಸ್ತ್ರದ ವಿಚಾರಗಳನ್ನು ಸೆನ್ಸಾರ್ಗಳು, ಕೃತಕ ಬುದ್ದಿಮತ್ತೆ ಮತ್ತು ಎಂಜಿನಿಯರಿಂಗ್ ಬಳಸಿ ಪ್ರದರ್ಶಿಕೆಗಳಾಗಿ ಮಾಡುವ ಕಲೆ ಇಲ್ಲಿ ಸಿದ್ಧಿಸುತ್ತದೆ. ನೋಂದಣಿಗೆ ಜನವರಿ 15 ರವರೆಗೆ ಅವಕಾಶ ಇರಲಿದೆ. ಪ್ರತಿ ತಂಡದಲ್ಲಿ ಗರಿಷ್ಠ 5 ಸದಸ್ಯರು ಇರಲಿದ್ದಾರೆ. ಜಯನಗರದ ಪರಮ್ ಮೇಕರ್ ಸ್ಪೇಸ್ ನಲ್ಲಿ ಜ. 15 ರಂದು ವೃತ್ತಿ ತರಬೇತಿ ನಡೆಯಲಿದೆ, 

ಅಂತಿಮ ಪ್ರದರ್ಶನ: ಈ ಮೇಕಥಾನ್ ನಲ್ಲಿ ತಯಾರಾದ ಅತ್ಯುತ್ತಮ ಮಾದರಿಗಳನ್ನು ಜನವರಿ 28 ರಿಂದ 31ರ ವರೆಗೆ ಬೆಂಗಳೂರಿನ ಅರಮನೆ ಮೈದಾನದ (ತ್ರಿಪುರ ವಾಸಿನಿ) ಬೃಹತ್ ವೇದಿಕೆಯಲ್ಲಿ ನಡೆಯುವ 'ದಕ್ಷಿಣಾಸ್ಯ ದರ್ಶಿನಿ' ಎಂಬ ಸಾರ್ವಜನಿಕ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತದೆ.

Post a Comment

0Comments

Post a Comment (0)