ಇಂದು ವಿಧಾನಸಭೆಯಲ್ಲಿ ಮಾಜಿ ಸಚಿವರಾದ ಡಾ: ಭೀಮಣ್ಣ ಖಂಡ್ರೆ, ಮಾಜಿ ಸದಸ್ಯರಾಗಿದ್ದ ಲಕ್ಕಣ್ಣ, ಪ್ರೋ ಮಾಧವ ಗಾಡ್ಗೀಳ್ ಅವರುಗಳು ನಿಧನ ಹೊಂದಿದ್ದು ಇವರುಗಳಿಗೆ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ ಖಾದರ್ ಫರೀದ್ ಅವರು ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ ಸಂತಾಪ ವ್ಯಕ್ತಪಡಿಸಿದರು.ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಸಂತಾಪ ಸೂಚನೆಗೆ ಬೆಂಬಲವನ್ನು ಸೂಚಿಸಿ ಮಾತನಾಡಿ ಡಾ: ಬೀಮಣ್ಣ ಅವರು ಅವರು 103 ವರ್ಷವಾಗಿದ್ದು ಶತಾಯಿಶಿ ಆಗಿದ್ದರು. 1953ರಲ್ಲಿ ಭಾಲ್ಕಿ ಪುರಸಭೆಗೆ ಮೊದಲ ಚುನಾಯಿತ ಅಧ್ಯಕ್ಷರಾಗುವ ಮೂಲಕ ರಾಜಕೀಯ ಪ್ರವೇಶಿಸಿದ್ದ ಅವರು 1962ರಲ್ಲಿ ಭಾಲ್ಕಿ ವಿಧಾನ ಸಭಾ ಕ್ಷೇತ್ರದಿಂದ ಪ್ರಥಮ ಬಾರಿಗೆ 3ನೇ ವಿಧಾನಸಭೆ ಪ್ರವೇಶಿಸಿ, ಒಟ್ಟು 4 ಬಾರಿ ವಿಧಾನ ಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. 1988 ಮತ್ತು 1994ರಲ್ಲಿ ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಶ್ರೀಯುತರು ಸಾರಿಗೆ ಸಚಿವರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದರು.
ಸುಮಾರು 6 ದಶಕಗಳ ಕಾಲ ರೈತ ಚಳುವಳಿ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಕ್ಷೇತ್ರವೂ ಸೇರಿದಂತೆ ಸಮಾಜದ ವಿವಿಧ ರಂಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀಯುತರು ರಾಜ್ಯಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದರು. ಸಾತ್ವಿಕ ಬದುಕು ರೂಢಿಸಿಕೊಂಡು ಮೃದು ಸ್ವಭಾವ ಹೊಂದಿದ್ದ ಭೀಮಣ್ಣ ಖಂಡ್ರೆ ಅವರು ನೇರ, ನಿಷ್ಠುರ ಹಾಗೂ ಸ್ವಾಭಿಮಾನದ ವ್ಯಕ್ತಿಯಾಗಿದ್ದರು. ಬಸವಣ್ಣರಂತೆ ಬದುಕಬೇಕು, ಸಂಕಷ್ಟ ಎದುರಾದಾಗ ಛತ್ರಪತಿ ಶಿವಾಜಿ ಮಹಾರಾಜನಂತೆ ಹೋರಾಟ ನಡೆಸಬೇಕು ಎಂದು ಗಟ್ಟಿದನಿಯಲ್ಲಿ ಪ್ರತಿಪಾದಿಸುತ್ತಿದ್ದವರು. ಅಷ್ಟೇ ಅಲ್ಲದೇ ಇವರು ಉರ್ದು, ಪಾರ್ಸಿ, ಮರಾಠಿ ಮತ್ತು ಇಂಗ್ಲಿಷ್ ಭಾಷೆಗಳ ಮೇಲೆ ಹಿಡಿತ ಹೊಂದಿದ್ದರು. 30 ವರ್ಷಗ ಕಾಲ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಶತಾಯುಷಿ, ಸ್ವಾತಂತ್ರ್ಯ ಹೋರಾಟಗಾರ, ವೀರಶೈವ ಮಹಾಸಭಾದ ಧುರೀಣ ಇವರು ಹಿರಿಯ ಸಜ್ಜನ ರಾಜಕಾರಣಿಯಾಗಿದ್ದವರು ದಿನಾಂಕ: 16-01-2026ರಂದು ನಿಧನ ಹೊಂದಿರುತ್ತಾರೆ. ಅವರ ಕುಟುಂಬ ವರ್ಗಕ್ಕೆ ದು:ಖ ಭರಿಸುವ ಶಕ್ತಿ ನೀಡಲಿ ಎಂದು ತಿಳಿಸಿ ಸಂತಾಪಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಕೆ.ಲಕ್ಕಣ್ಣ ಅವರು ವಿಧಾನಸಭೆಯ ಮಾಜಿ ಸದಸ್ಯರಾಗಿದ್ದರು. ಲಕ್ಕಣ್ಣ ಅವರು ಕುಣಿಗಲ್ ತಾಲ್ಲೂಕಿನವರು. ವೃತ್ತಿಯಲ್ಲಿ ಕೈಗಾರಿಕೋದ್ಯಮಿಯಾಗಿದ್ದರು. ಇವರು ಎರಡು ಬಾರಿ ಬೆಂಗಳೂರು ನಗರ ಪಾಲಿಕೆಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಸಾಮಾಜಿಕ ಕಳಕಳಿ ಹೊಂದಿದ್ದರು.
ಪ್ರೊ. ಮಾಧವ್ ಗಾಡ್ಗೀಳ್ ಇವರು ಪ್ರಖ್ಯಾತ ವಿಜ್ಞಾನಿ ಯಾಗಿದ್ದರು. ಪರಿಸರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪಾರಿಸರಿಕ ವಿಜ್ಞಾನ ಕೇಂದ್ರ ಮತ್ತು ಸೆಂಟರ್ ಪಾರ್ ಥಿಯರಿಟಿಕಲ್ ಸ್ಟಡೀಸ್ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಭಾರತದಲ್ಲಿ ಆಧುನಿಕ ಪರಿಸರ ಸಂಶೋಧನೆಗಳ ಅಧ್ಯಯನಕ್ಕೆ ನಾಂದಿ ಹಾಡಿದ್ದರು. ಹತ್ತು ಹಲವಾರು ಸಂಸ್ಥೆಗಳನ್ನು ಸ್ಥಾಪಿಸಿ ಬೆಳೆಸಿದ್ದರು.
250ಕ್ಕೂ ಹೆಚ್ಚು ವೈಜ್ಞಾನಿಕ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಪಶ್ಚಿಮ ಘಟ್ಟಗಳ ಸಂರಕ್ಷಣೆ ಕುರಿತಂತೆ ಅವರು ನಡೆಸಿದ ಪ್ರಯತ್ನಗಳಿಗಾಗಿ ಪರಿಸರಕ್ಕೆ ಸಂಬಂಧಿಸಿದ ವಿಶ್ವಸಂಸ್ಥೆಯ ಅತ್ಯುನ್ನುತ ಪ್ರಶಸ್ತಿಯಾದ ಚಾಂಪಿಯನ್ಸ್ ಆಫ್ ದಿ ಅರ್ಥ್ ಗೌರವಕ್ಕೆ ಭಾಜರಾಗಿದ್ದ ಶ್ರೀಯುತರು ಪದ್ಮಶ್ರೀ, ಪದ್ಮಭೂಷಣ, ಶಾಂತಿ ಸ್ವರೂಪ್, ಭಾಟ್ನಗರ್, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ, ವಿಕ್ರಮ್ ಸಾರಾಭಾಯ್ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸೇರದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಕೆ.ಲಕ್ಕಣ್ಣ, ಪ್ರೊ: ಮಾಧವ್ ಗಾಡ್ಗೀಳ್ ಇವರುಗಳ ಕುಟುಂಬಗಳ ವರ್ಗಕ್ಕೆ ದು:ಖ ಭರಿಸುವ ಶಕ್ತಿ ನೀಡಲು ಎಂದು ವಿಧಾನಸಭೆಯಲ್ಲಿ ತಿಳಿಸಿ ಸಂತಾಪಕ್ಕೆ ಬೆಂಬಲ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರ ಹೆಚ್.ಕೆ.ಪಾಟೀಲ್, ಸಚಿವರಾದ ಡಾ. ಶರಣ ಪ್ರಕಾಶ್ ಪಾಟೀಲ್, ಶಾಸಕರುಗಳಾದ ಸುರೇಶ್ ಗೌಡ, ಜಿ.ಟಿ.ದೇವೆಗೌಡ, ವಿಜಯೇಂದ್ರ, ಕೃಷ್ಣಪ್ಪ ಇವರುಗಳು ಸಂತಾಪ ಸೂಚನೆಗೆ ಬೆಂಬಲವನ್ನು ಸೂಚಿಸಿ ಮಾತನಾಡಿದರು. ನಂತರ ಎರಡು ನಿಮಿಷಗಳ ಮೌನವನ್ನು ಸಲ್ಲಿಸುವ ಮೂಲಕ ಮೃತರಿಗೆ ನಮನ ಸಲ್ಲಿಸಲಾಯಿತು.