ಬೆಂಗಳೂರು : ವಿಧಾನ ಪರಿಷತ್ತಿನÀ ಅಧಿವೇಶನದಲ್ಲಿಂದು ಸಭಾಪತಿ ಬಸವರಾಜ ಎಸ್.ಹೊರಟ್ಟಿ ಅವರು ಇತ್ತೀಚೆಗೆ ನಿಧನರಾದ ಮಾಜಿ ಸಚಿವರು, ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾಗಿದ್ದ ಡಾ. ಭೀಮಣ್ಣ ಖಂಡ್ರೆ ಅವರಿಗೆ ಸಂತಾಪ ಸೂಚಕ ನಿರ್ಣಯ ಮಂಡಿಸಿದರು. ಡಾ. ಭೀಮಣ್ಣ ಖಂಡ್ರೆ ಅವರು 1925 ನವೆಂಬರ್ 1 ರಂದು ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಜನಿಸಿದ್ದರು. ಶ್ರೀಯುತರು 102 ವರ್ಷಗಳ ಪರಿಪೂರ್ಣ ಜೀವನವನ್ನು ಪೂರೈಸಿದ ಶ್ರೀಯುತರು ಬಿ,ಎ, ಎಲ್.ಎಲ್.ಬಿ ಪದವಿಯನ್ನು ಹೊಂದಿದ್ದು ವೃತ್ತಿಯಲ್ಲಿ ವಕೀಲರಾಗಿದ್ದರು. ಶ್ರೀಯತರು ದೇಶದ ಸ್ವಾತಂತ್ರ್ಯ ಹೋರಾಟ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1953 ರಲ್ಲಿ ಭಾಲ್ಕಿ ಪುರಸಭೆಗೆ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ರಂಗ ಪ್ರವೇಶಿಸಿದರು.
ಶ್ರೀಯುತರು 1962, 1967, 1978 ಮತ್ತು 1983ರಲ್ಲಿ ನಾಲ್ಕು ಅವಧಿಗೆ ಭಾಲ್ಕಿ ಕ್ಷೇತ್ರದಿಂದ ಕರ್ನಾಟಕ ವಿಧಾನ ಸಭೆಯ ಸದಸ್ಯರಾಗಿ, 1988 ರಿಂದ 1994 ಹಾಗೂ 1994 ರಿಂದ 2000ರ ಅವಧಿಗೆ 2 ಬಾರಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿನ ಶಾಸಕರಾಗಿ ಸೇವೆ ಸಲ್ಲಿಸಿರುತ್ತಾರೆ. 1992 ರಿಂದ 1994ರ ವರೆಗೆ ಎಂ. ವೀರಪ್ಪ ಮೊಯ್ಲಿ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಬೀದರ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ರಾಜ್ಯ ಕಿಸಾನ್ ಕೋಶದ ಸಂಚಾಲಕರಾಗಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾಗಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದ ಶ್ರೀಯುತರು ಹಳ್ಳಿಖೇಡದ ಬೀದರ್ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತು ಹುಣಜಿ ಮಹಾತ್ಮ ಗಾಂಧೀ ಸಕ್ಕರೆ ಕಾರ್ಖಾನೆಯ ಸ್ಥಾಪಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುತ್ತಾರೆ.
ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಗಡಿಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನಾಂದಿ ಹಾಡಿದ ಶ್ರೀಯುತರು ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣ ದೊರಕಿಸಲು ಬೀದರ್‍ನಲ್ಲಿ ಅಕ್ಕಮಹಾದೇವಿ ಕಾಲೇಜು, ಬಾಲ್ಕಿಯಲ್ಲಿ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಿ ಸಾವಿರಾರು ಯುವಜನರ ಭವಿಷ್ಯ ರೂಪಿಸಿದ್ದರು. ನಿರ್ಲಕ್ಷ್ಯಕ್ಕೀಡಾಗಿದ್ದ ಬಸವಕಲ್ಯಾಣ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಶ್ರಮಿಸಿದ್ದರು. ಸುಮಾರು 60 ವರ್ಷಗಳ ಕಾಲ ರಾಜಕೀಯ. ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಗಡಿಜಿಲ್ಲೆ ಬೀದರ್‍ನ ಅಭಿವೃದ್ಧಿಯು ಹರಿಕಾರರೆಂದು ಜನಜನಿತರಾಗಿದ್ದರು.
ಶ್ರೀಯುತರು ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಹಕಾರ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಗುಲ್ಬರ್ಗಾ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿರುತ್ತದೆ.
ಶ್ರೀಯುತರ ನಿಧನದಿಂದಾಗಿ ರಾಜ್ಯವು ಹಿರಿಯ ರಾಜಕೀಯ ಮುತ್ಸದಿ, ಧೀಮಂತ ನಾಯಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಸಂತಾಪ ಸೂಚನೆ ಮಂಡಿಸಿದರು.
ಸಭಾ ನಾಯಕರಾದ ಭೀಮಣ್ಣ , ವಿರೋಧ ಪಕ್ಷದ ನಾಯಕರು ಹಲವು ಸದಸ್ಯರು ಶೀಯುತರ ಕುರಿತು ಮಾತನಾಡಿ, ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ, ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಪರಮಾತ್ಮನು ಕರುಣಿಸಲಿ ಎಂದು ಪ್ರಾರ್ಥಿಸಿ ಸಂತಾಪ ಸೂಚನೆಗೆ ಬೆಂಬಲ ವ್ಯಕ್ತಪಡಿಸಿದರು.
ನಂತರ ಮೃತರ ಗೌರವಾರ್ಥ ಒಂದು ನಿಮಿಷ ಮೌನವನ್ನು ಆಚರಿಸಲಾಯಿತು. ಸದನದಲ್ಲಿ ಪ್ರಸ್ತಾಪಿಸಿದ ಸಂತಾಪ ಸೂಚನೆಯ ನಿರ್ಣಯವನ್ನು ಮೃತ ಗಣ್ಯøರ ಕುಟುಂಬ ವರ್ಗದವರಿಗೆ ಕಳುಹಿಸಲಾಗುವುದು ಎಂದು ಸಭಾಪತಿಗಳು ಸದನಕ್ಕೆ ತಿಳಿಸಿದರು.