ಬೆಂಗಳೂರು: ಪ್ರಾಮಾಣಿಕ ಸಂಶೋಧನೆಗೆ ಹೆಸರಾಗಿದ್ದ ಎಂ ಚಿದಾನಂದಮೂರ್ತಿ ಮತ್ತು ತಮ್ಮ ಕಾದಂಬರಿಗಳ ಮೂಲಕ ಅಪಾರ ಓದುಗರನ್ನು ಸೃಷ್ಟಿಸಿದ ಎಸ್ ಎಲ್ ಭೈರಪ್ಪ ಇಬ್ಬರೂ ಕನ್ನಡ ಮತ್ತು ಕನ್ನಡಿಗರ ಪರವಾಗಿ ಮಿಡಿದವರಾಗಿದ್ದಾರೆ ಎಂದು ಹಿರಿಯ ಕವಿ ಎಸ್ ಜಿ ಸಿದ್ದರಾಮಯ್ಯ ಭಾನುವಾರ ಹೇಳಿದ್ದಾರೆ. ಕನ್ನಡ ಗೆಳೆಯರ ಬಳಗ, ಕರ್ನಾಟಕ ವಿಕಾಸ ರಂಗ ಮತ್ತು ಸಪ್ನಾ ಪುಸ್ತಕ ಮಳಿಗೆ ಸಂಯುಕ್ತವಾಗಿ ಏರ್ಪಡಿಸಿದ್ದ 'ಕನ್ನಡ- ಕನ್ನಡಿಗ- ಕರ್ನಾಟಕ' ಕೃತಿಯ ಪರಿಷ್ಕೃತ 17ನೇ ಮುದ್ರಣ, ಎಚ್.ಜಿ ಸಿದ್ದರಾಮಯ್ಯ ಅವರಿಗೆ ಚಿದಾನಂದಮೂರ್ತಿ ನೆನಪಿನ ಗೌರವ ಮತ್ತು ಎಸ್ ಎಲ್ ಭೈರಪ್ಪ ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೊದಲು ಕೇವಲ 12 ಪುಟಗಳ ಕರಪತ್ರದ ರೂಪದಲ್ಲಿ ಬಂದ 'ಕನ್ನಡ-ಕನ್ನಡಿಗ- ರ್ನಾಟಕ' ವು ಈಗ 480 ಪುಟಗಳ ಸಮಗ್ರ ಸಂಪುಟದ ಮಟ್ಟಕ್ಕೆ ಬೆಳೆದಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇದರಲ್ಲಿ ಕನ್ನಡಿಗರ ಹಿತದೃಷ್ಟಿಯಿಂದ ಆಗಬೇಕಾದ ಕೆಲಸಗಳು ಏನೇನು ಎಂಬುದು ಗೊತ್ತಾಗುತ್ತದೆ ಎಂದು ಅವರು ಬಣ್ಣಿಸಿದ್ದಾರೆ.
ಚಿದಾನಂದಮೂರ್ತಿಗಳು ಗುರುವಿನ ಸ್ಥಾನದ ಮೌಲ್ಯಗಳ ಮೂರ್ತರೂಪದಂತೆ ಬಾಳಿ ಬದುಕಿದರು. ಅವರು ಪ್ರಾಮಾಣಿಕತೆ, ಅಧಿಕಾರ ನಿರ್ಲಿಪ್ತಿ ಇವುಗಳಿಗೆ ಹೆಸರಾಗಿದ್ದರು. ಒಕ್ಕೂಟ ಧರ್ಮಕ್ಕೆ ಅಪಾಯ ಬಂದಿರುವ ಸಂದರ್ಭದಲ್ಲಿ ಇಂತಹ ಕೃತಿಗಳು ನೆರವಿಗೆ ಬರುತ್ತವೆ ಎಂದು ಅವರು ನುಡಿದಿದ್ದಾರೆ. ಸಂಶೋಧಕ ಡಾ.ಆರ್ ಶೇಷಶಾಸ್ತ್ರಿ ಮಾತನಾಡಿ, ಚಿದಾನಂದಮೂರ್ತಿಗಳು ಖಚಿತ ಪುರಾವೆಗಳನ್ನು ಆಧರಿಸಿ ಸಂಶೋಧನೆ ನಡೆಸುತ್ತಿದ್ದರು. ಇನ್ನೊಬ್ಬರ ಅಭಿಪ್ರಾಯವನ್ನು ಯಾವತ್ತೂ ತಮ್ಮದೆಂದು ಹೇಳಿಕೊಳ್ಳುತ್ತಿರಲಿಲ್ಲ. ಇಡೀ ಕರ್ನಾಟಕಕ್ಕೆ ಸಂಬಂಧಿಸಿದ ಬಹುಮುಖಿ ಧಾರೆಗಳ ಪರಿಪೂರ್ಣ ಗ್ರಂಥಾಲಯ ಸ್ಥಾಪಿಸಬೇಕು ಎಂಬ ಕನಸು ಹೊಂದಿದ್ದರು. ಅದನ್ನು ಸರಕಾರ ಈಡೇರಿಸಬೇಕು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ.ಚನ್ನೇಗೌಡ ಮಾತನಾಡಿ, ಚಿಮೂ ಅವರಿಂದಾಗಿ ಹಂಪೆ ಕನ್ನಡ ವಿವಿ, ನೈರುತ್ಯ ರೈಲ್ವೆ ವಲಯ, ಪುಸ್ತಕ ಪ್ರಾಧಿಕಾರ, ಪ್ರಾಮಾಣಿಕ ಕನ್ನಡ ಚಳವಳಿ ಇವೆಲ್ಲವೂ ಅಸ್ತಿತ್ವಕ್ಕೆ ಬಂದವು ಎಂದು ನೆನಪಿಸಿಕೊಂಡರು. ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ ನಂ ಚಂದ್ರಶೇಖರ ಮಾತನಾಡಿ, ಕನ್ನಡ-ಕನ್ನಡಿಗ-ಕರ್ನಾಟಕ ಕೃತಿಯ ಹೊಸ ಆವೃತ್ತಿಯಲ್ಲಿ ಕರ್ನಾಟಕದ ಇತಿಹಾಸದಿಂದ ಹಿಡಿದು ಕನ್ನಡಿಗರ ಉದ್ಯಮಶೀಲತೆ, ಮಹಿಷಿ ವರದಿ, ನಂಜುಂಡಪ್ಪ ವರದಿ ಮತ್ತು ಗಾಡ್ಗೀಳ್ ವರದಿಯವರೆಗೆ ಸಮಗ್ರ ಮಾಹಿತಿ ಮತ್ತು ಅಂಕಿಅಂಶಗಳನ್ನು ಕ್ರೋಡೀಕರಿಸಲಾಗಿದೆ. ಇಂತಹ ಪರಿಕಲ್ಪನೆಯ ಒಂದು ಪುಸ್ತಕ ದೇಶದ ಬೇರಾವ ರಾಜ್ಯದಲ್ಲೂ ಇಲ್ಲ ಎಂದರು.
ಅನುವಾದಕ ಬಿ ಎಸ್ ಜಯಪ್ರಕಾಶ ನಾರಾಯಣ ಅವರು 'ಎಸ್ ಎಲ್ ಭೈರಪ್ಪನವರು ಅನುದಿನದ ಸಂಗತಿ, ನಂಬಿಕೆ, ಸಂಘರ್ಷ, ಮಿಥ್ ಗಳ ಮೂಲಕವೇ ತಮ್ಮ ಕೃತಿಗಳಲ್ಲಿ ಒಂದು ಗಂಭೀರ ತಾತ್ವಿಕತೆಯನ್ನು ಕಟ್ಟಿಕೊಡುತ್ತಿದ್ದರು. ಅವರು ಗ್ರಾಮೀಣ ಭಾಷೆಯ ಮೂಲಕವೇ ಅಖಿಲ ಭಾರತೀಯ ಸ್ತರದ ಪ್ರಜ್ಞೆಯನ್ನು ಸೃಷ್ಟಿಸಿದರು. ಹುಟ್ಟು, ಸಾವು ಮತ್ತು ಕಾಮದ ನಿರ್ವಹಣೆಯಲ್ಲಿ ಅವರೊಬ್ಬ ಆಸಾಧಾರಣ ಲೇಖಕರಾಗಿದ್ದರು. ಲೇಖಕರನ್ನು ಎಡ- ಬಲ ತರಹದ ಐಡಿಯಾಲಜಿಗಳ ಮೂಲಕ ನೋಡುವುದು ಸರಿಯಲ್ಲ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಕನ್ನಡ ಹೋರಾಟಗಾರರಾದ ಮ.ಚಂದ್ರಶೇಖರ್, ಲೇಖಕ ಕೆ ಎನ್ ಭಗವಾನ್, ಬೆ.ರಾ.ನಾಗರಾಜ್, ಎಚ್.ಎನ್.ರಮೇಶ್ ಬಾಬು, ಸುರೇಶ್, ಸಪ್ನಾ ಪುಸ್ತಕ ಮಳಿಗೆಯ ಕನ್ನಡ ವಿಭಾಗದ ಮುಖ್ಯಸ್ಥ ಆರ್.ದೊಡ್ಡೇಗೌಡ ಉಪಸ್ಥಿತರಿದ್ದರು.