ರೈತರ ಆದಾಯ ಹೆಚ್ಚಳ ಮತ್ತು ಕೃಷಿಯಲ್ಲಿ ಮೌಲ್ಯವರ್ಧನೆಯ ಅಗತ್ಯದ ಬಗ್ಗೆ ವಿಶೇಷವಾಗಿ ಒತ್ತು ನೀಡಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು. ನಮ್ಮ ದೇಶ ಅಕ್ಕಿ ಮತ್ತು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿದೆ. ಆದರೆ ರೈತರ ಸಂಕಷ್ಟಗಳು ಇನ್ನೂ ಮುಗಿದಿಲ್ಲ. ಇದಕ್ಕೆ ಕಾರಣ ನಾವು ಕೇವಲ ಉತ್ಪಾದನೆಗೆ ಸೀಮಿತವಾಗಿರುವುದು. ಈ ಮೇಳದ ಮೂಲಕ ನಾವು ರೈತರಿಗೆ ಸಂಸ್ಕರಣೆ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಕೌಶಲ್ಯಗಳನ್ನು ಪರಿಚಯಿಸುತ್ತಿದ್ದೇವೆ ಎಂದು ಹೇಳಿದರು.
ರೈತನೇ ಉದ್ಯಮಿ: ರೈತರು ಕೇವಲ ಬೆಳೆಗಾರರಾಗಿ ಉಳಿಯಬಾರದು, ಅವರು ಕೃಷಿ ಉದ್ಯಮಿಗಳಾಗಬೇಕು. ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡಿದರೆ ರೈತರು 4 ರಿಂದ 5 ಪಟ್ಟು ಹೆಚ್ಚಿನ ಲಾಭ ಗಳಿಸಲು ಸಾಧ್ಯವಿದೆ. ಇದಕ್ಕಾಗಿ ಸರ್ಕಾರವು ರೈತ ಉತ್ಪಾದಕ ಸಂಸ್ಥೆಗಳಿಗೆ ಸಂಪೂರ್ಣ ಬೆಂಬಲ ನೀಡುತ್ತಿದೆ.
ಸಾವಯವ ಮತ್ತು ಸಿರಿಧಾನ್ಯದ ಕ್ರಾಂತಿ: ಕರ್ನಾಟಕವು ಸಿರಿಧಾನ್ಯಗಳ ರಾಜಧಾನಿಯಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿ ಸಾವಯವ ಕೃಷಿಯನ್ನು 55 ಸಾವಿರ ಹೆಕ್ಟೇರ್‍ನಿಂದ 1.25 ಲಕ್ಷ ಹೆಕ್ಟೇರ್‍ಗೆ ವಿಸ್ತರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಇದಕ್ಕಾಗಿ ಪ್ರತಿ ಹೆಕ್ಟೇರ್‍ಗೆ ರೂ.10,000 ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು.
ಯುವಜನತೆ ಮತ್ತು ತಂತ್ರಜ್ಞಾನ: ಕೃಷಿಯಲ್ಲಿ ಸುಧಾರಿತ ತಂತ್ರಜ್ಞಾನ ಬಳಕೆಯಾಗಬೇಕು. ವಿದ್ಯಾವಂತ ಯುವಕರು ಕೃಷಿಯತ್ತ ಆಕರ್ಷಿತರಾಗಲು ಇದು ಸಕಾಲ. ಆಧುನಿಕ ಯಂತ್ರೋಪಕರಣಗಳು ಮತ್ತು ಡಿಜಿಟಲ್ ಮಾರುಕಟ್ಟೆ ರೈತರ ಬದುಕನ್ನು ಬದಲಿಸಬಲ್ಲವು.
ಸಾಧಕರಿಗೆ ಗೌರವ: ಈ ಮೇಳದಲ್ಲಿ ನಾವು ಕೇವಲ ವ್ಯಾಪಾರವನ್ನμÉ್ಟೀ ಮಾಡುತ್ತಿಲ್ಲ, ಮಣ್ಣಿನ ಮಕ್ಕಳ ಸಾಧನೆಯನ್ನು ಗುರುತಿಸುತ್ತಿದ್ದೇವೆ. ಈ ಬಾರಿ 122 ರೈತರಿಗೆ 'ಕೃಷಿ ಪಂಡಿತ' ಮತ್ತು 'ಕೃಷಿ ಪ್ರಶಸ್ತಿ' ನೀಡಿ ಗೌರವಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ.
ಮಾರುಕಟ್ಟೆ ಸಂಪರ್ಕ: ಕಳೆದ ವರ್ಷದ ಮೇಳದಲ್ಲಿ ರೂ.185 ಕೋಟಿ ಮೊತ್ತದ ಒಪ್ಪಂದಗಳು ನಡೆದಿದ್ದವು. ಈ ವರ್ಷ ದೇಶ-ವಿದೇಶಗಳ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದು, ರೈತರಿಗೆ ಅಂತರಾಷ್ಟ್ರೀಯ ಮಟ್ಟದ ಮಾರುಕಟ್ಟೆ ಸಿಗಲಿದೆ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.
ಸಚಿವರ ಪ್ರಮುಖ ಘೋಷಣೆ: ರೈತರ ಆದಾಯ ಹೆಚ್ಚಿಸಲು ಸರ್ಕಾರವು 'ದ್ವಿತೀಯ ಕೃಷಿ ನಿರ್ದೇಶನಾಲಯ'ದ ಮೂಲಕ ಹೆಚ್ಚಿನ ಸವಲತ್ತುಗಳನ್ನು ನೀಡುತ್ತಿದ್ದು, ಈ ಮೇಳವು ರೈತರು ಮತ್ತು ಗ್ರಾಹಕರ ನಡುವಿನ ಕೊಂಡಿಯಾಗಲಿದೆ ಎಂದು ಅವರು ತಿಳಿಸಿದರು.
ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಮಾತನಾಡುತ್ತಾ, ಕೃಷಿ ಕೇವಲ ಆಹಾರ ಬೆಳೆಯುವುದಕ್ಕೆ ಸೀಮಿತವಾಗಬಾರದು. ರೈತರು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗಬೇಕಾದರೆ, ಅವರು ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಮೌಲ್ಯವರ್ಧನೆ ಮಾಡಬೇಕು. ಈ ಮೇಳವು ರೈತರು ಮತ್ತು ಅಂತರಾಷ್ಟ್ರೀಯ ಖರೀದಿದಾರರ ನಡುವೆ ನೇರ ಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು.
ಸಿರಿಧಾನ್ಯಗಳ ಜಾಗತಿಕ ಮಾರುಕಟ್ಟೆ: ಕರ್ನಾಟಕವು 'ಸಿರಿಧಾನ್ಯಗಳ ಹಬ್' ಆಗಿ ಬೆಳೆದಿದೆ. ಇಂದು ವಿಶ್ವದಾದ್ಯಂತ ಆರೋಗ್ಯದ ಬಗ್ಗೆ ಅರಿವು ಹೆಚ್ಚುತ್ತಿದೆ, ಈ ಸಂದರ್ಭದಲ್ಲಿ ನಮ್ಮ ರಾಜ್ಯದ ಸಿರಿಧಾನ್ಯಗಳಿಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಬೇಡಿಕೆಯಿದೆ. ಇದನ್ನು ಬಳಸಿಕೊಂಡು ನಮ್ಮ ರೈತರು ರಫ್ತುದಾರರಾಗಬೇಕು ಎಂಬುದು ಸರ್ಕಾರದ ಆಶಯ ಎಂದರು.
ತಂತ್ರಜ್ಞಾನ ಮತ್ತು ನಾವೀನ್ಯತೆ: ಇಂದಿನ ಯುಗದಲ್ಲಿ ಕೃಷಿಯು ಡಿಜಿಟಲ್ ತಂತ್ರಜ್ಞಾನದೊಂದಿಗೆ ಬೆರೆಯಬೇಕು. ಕೃಷಿ ಉದ್ಯಮಗಳಲ್ಲಿ ಸ್ಟಾರ್ಟ್‍ಅಪ್‍ಗಳ ಪಾತ್ರ ದೊಡ್ಡದಿದೆ. ಯುವ ಸಮೂಹವು ಕೃಷಿ ತಂತ್ರಜ್ಞಾನದಲ್ಲಿ ನಾವೀನ್ಯತೆಯನ್ನು ತರುವ ಮೂಲಕ ರೈತರ ಶ್ರಮವನ್ನು ಕಡಿಮೆ ಮಾಡಬೇಕು ಮತ್ತು ಉತ್ಪಾದಕತೆಯನ್ನು ಹೆಚ್ಚಿಸಬೇಕು.
ಆಡಳಿತಾತ್ಮಕ ಬೆಂಬಲ: ರೈತರು ಉದ್ಯಮಿಗಳಾಗಿ ಬದಲಾಗಲು ಬೇಕಾದ ಪೂರಕ ವಾತಾವರಣವನ್ನು ಸರ್ಕಾರ ಸೃಷ್ಟಿಸುತ್ತಿದೆ. ಪರವಾನಗಿ, ಪ್ರಮಾಣೀಕರಣ ಮತ್ತು ಆರ್ಥಿಕ ನೆರವು ಸುಲಭವಾಗಿ ಸಿಗುವಂತೆ ಆಡಳಿತ ವ್ಯವಸ್ಥೆಯನ್ನು ಸರಳಗೊಳಿಸಲಾಗುತ್ತಿದೆ. ರೈತ ಉತ್ಪಾದಕ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.
ಪರಿಸರ ಪೂರಕ ಕೃಷಿ : ಸಾವಯವ ಕೃಷಿಯು ಕೇವಲ ಲಾಭಕ್ಕಾಗಿ ಮಾತ್ರವಲ್ಲ, ನಮ್ಮ ಮಣ್ಣಿನ ಆರೋಗ್ಯ ಮತ್ತು ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದಲೂ ಅನಿವಾರ್ಯವಾಗಿದೆ. ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಬೇಕಿದೆ ಎಂದು ತಿಳಿಸಿದರು.