ಬೆಂಗಳೂರು: ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಪದ್ಮನಾಭನಗರದಲ್ಲಿರುವ ಪ್ರಸಿದ್ಧ ಶ್ರೀ ವೈದ್ಯನಾಥೇಶ್ವರ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ, ಅಲಂಕಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನದವರೆಗೆ ಭಕ್ತರಿಗೆ ಸ್ವತಃ ಶಿವಲಿಂಗಕ್ಕೆ ಕ್ಷೀರಾಭಿಷೇಕ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಮಹಾ ಗಣಪತಿ ಪೂಜೆ, ಮಹಾನ್ಯಾಸಪೂರ್ವಕ ಶತರುದ್ರಾಭಿಷೇಕ, ಮಹಾ ಮಂಗಳಾರತಿ ಹಾಗೂ ತೀರ್ಥ-ಪ್ರಸಾದ ವಿನಿಯೋಗ ವಿಧಿವಿಧಾನಗಳೊಂದಿಗೆ ನೆರವೇರಿತು.
ಮಧ್ಯಾಹ್ನ 2 ಗಂಟೆಯಿಂದ ಪದ್ಮನಾಭನಗರದ ಸ್ಥಳೀಯ ಕಲಾವಿದರಿಂದ ಭಕ್ತಿ ಸಂಗೀತ, ಭರತನಾಟ್ಯ, ಭಜನೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸಂಜೆ 4.30ರಿಂದ ಸೋಮವಾರ ಬೆಳಗಿನ ಜಾವ 3.30ರವರೆಗೆ ನಾಲ್ಕು ಯಾಮಗಳ ಪೂಜೆ ಹಾಗೂ ಅಭಿಷೇಕಗಳು ಶಾಸ್ತ್ರೋಕ್ತವಾಗಿ ನಡೆಯಿತು. ಇದೇ ಸಂದರ್ಭದಲ್ಲಿ ಪದ್ಮನಾಭನಗರದ ಪ್ರಮುಖ ರಸ್ತೆಗಳಲ್ಲಿ ಶ್ರೀ ವೈದ್ಯನಾಥೇಶ್ವರ ದೇವರ ಉತ್ಸವ ಮೆರವಣಿಗೆ ಭಕ್ತಿಪೂರ್ವಕವಾಗಿ ನಡೆಯಿತು.
ಸುಮಾರು 5000 ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಶ್ರೀ ವೈದ್ಯನಾಥೇಶ್ವರನಿಗೆ ಅಭಿಷೇಕ ಸಲ್ಲಿಸಿ ತೀರ್ಥ-ಪ್ರಸಾದ ಸ್ವೀಕರಿಸಿದರು. ಹಬ್ಬದ ಅಂಗವಾಗಿ ದೇವಸ್ಥಾನದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿತ್ತು.


.jpg)
