ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರು ಮುಖ್ಯಮಂತ್ರಿಗಳು ತಂದಿರುವ ನಿರ್ಣಯಕ್ಕೆ ಎಲ್ಲಾ ಸದಸ್ಯರ ಪರವಾಗಿ ಬೆಂಬಲ ಸೂಚಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ 'ವಿಬಿ-ಗ್ರಾಮ್ ಜಿ' ಕಾಯ್ದೆಯು ಸಾರ್ವಜನಿಕ ವಿರೋಧಿ ಕಾಯ್ದೆಯಾಗಿದೆ. ಈ ಕಾಯ್ದೆಯು ಸಂವಿಧಾನ ವಿರೋಧಿಯಾಗಿದೆ. ದೇಶದ ಒಕ್ಕೂಟದ ವ್ಯವಸ್ಥೆಯ ಮೂಲಕ ಆಶಯಗಳಿಗೆ ಮತ್ತು ಗ್ರಾಮೀಣ ಜನರ ಜೀವನೋಪಾಯದ ಹಕ್ಕಿಗೆ ಮಾರಕವಾಗಿದೆ ಎಂದು ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಅವರು ಮುಖ್ಯಮಂತ್ರಿಗಳ ನಿರ್ಣಯಕ್ಕೆ ಬೆಂಬಲ ಸೂಚಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾಯ್ದೆಯು ಸಂವಿಧಾನದ 21ನೇ ಅನುಚ್ಛೇದದಡಿ ಸಿಗುವ ಜೀವಿಸುವ ಹಕ್ಕನ್ನು ಮತ್ತು ಜೀವನೋಪಾಯದ ಹಕ್ಕನ್ನು ಉಲ್ಲಂಘಿಸುತ್ತದೆ ಹಾಗೂ ಸಂವಿಧಾನದ 73ನೇ ತಿದ್ದುಪಡಿಯ ಮೂಲಕ ಗ್ರಾಮ ಪಂಚಾಯಿತಿಗಳಿಗೆ ನೀಡಲಾದ ಅಧಿಕಾರವನ್ನು ಮತ್ತು ಸ್ವಾಯತ್ತತೆಯನ್ನು ಕಸಿದುಕೊಳ್ಳುವ ಮೂಲಕ ಸಂವಿಧಾನದ 73ನೇ ತಿದ್ದುಪಡಿಯ ಆಶಯಕ್ಕೆ ವಿರುದ್ಧವಾಗಿದೆ ಎಂದರು. ವಿಬಿ-ಗ್ರಾಮ್-ಜಿ ಯೋಜನೆಯಡಿ ಎಲ್ಲಾ ಗ್ರಾಮ ಪಂಚಾಯಿತಿಗಳು ಸೇರ್ಪಡೆಗೊಳ್ಳುವ ಖಚಿತತೆ ಇಲ್ಲ ಹಾಗೂ ಕಾರ್ಮಿಕರಿಗೆ ನೀಡಲಾಗುವ ಕೂಲಿ ದರದ ಬಗ್ಗೆ ಖಚಿತತೆ/ಖಾತ್ರಿ ಇಲ್ಲ. ಕೂಲಿ ಕಾರ್ಮಿಕರು, ವಿಶೇಷವಾಗಿ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾರ್ಮಿಕರು, ಆದಿವಾಸಿಗಳು, ರೈತಾಪಿ ಜನರ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರನ್ನು ಆಧುನಿಕ ಗುಲಾಮಗಿರಿಗೆ ತಳ್ಳುವ ಪ್ರಯತ್ನವಾಗಿದೆ ಎಂದರು.
ಮನರೇಗ ಕಾಯ್ದೆಯಲ್ಲಿ ಕೇಂದ್ರ ಸರ್ಕಾರವೇ 100 ಮಾನವ ದಿನಗಳ ಕೂಲಿ ಹಣವನ್ನು ಶೇ 100 ರಷ್ಟು ಸಂಪೂರ್ಣವಾಗಿ ಭರಿಸುತ್ತಿತ್ತು. ರಾಜ್ಯಗಳ ಜೊತೆ ಸಮಾಲೋಚಿಸದೇ, ಕೇಂದ್ರವು ಏಕಾಏಕಿ ರಾಜ್ಯ ಸರ್ಕಾರಗಳು ಶೇ 40 ರಷ್ಟು ಅನುದಾನವನ್ನು ಭರಿಸಬೇಕೆಂದು ನಿಯಮವನ್ನು ಹೇರಿದೆ. ಇದರಿಂದ 125 ಮಾನವ ದಿನಗಳ ಕೆಲಸ ಒದಗಿಸುವುದಾಗಿ ಹೊಸ ಕಾಯ್ದೆಯಲ್ಲಿ ಹೇಳಲಾಗಿದ್ದರೂ, ವಾಸ್ತವವಾಗಿ 50 ಮಾನವ ದಿನಗಳ ವೆಚ್ಚನ್ನು ರಾಜ್ಯ ಸರ್ಕಾರವು ಭರಿಸಬೇಕಾಗುತ್ತದೆ. ಇದು ಒಕ್ಕೂಟ ವ್ಯವಸ್ಥೆಯ ರಚನೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಮತ್ತು ಸಂವಿಧಾನದ ಅನುಚ್ಛೇದ 258 ಮತ್ತು ಅನುಚ್ಛೇದ 280ಗಳನ್ನು ಸ್ಪಷ್ಟ ಉಲ್ಲಂಘನೆ ಮಾಡಿದೆ.. ಕೇಂದ್ರ ಸರ್ಕಾರ ಜಾರಿಗೆ ತಂದಿರುವ 'ವಿಬಿ-ಗ್ರಾಮ್ ಜಿ' ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು ಎಂದರು.