ಮೊಧೇರಾ ಸೂರ್ಯ ದೇವಾಲಯ ಮತ್ತು ರಾಣಿ ಕಿ ವಾವ್

varthajala
0

  ನಾವು ಹೊರಟಿದ್ದ ಇಂಡಿಗೋ ವಿಮಾನ ಬೆಳಿಗ್ಗೆ ಆರು ಹತ್ತಕ್ಕೆ ಬೆಂಗಳೂರು ಬಿಟ್ಟು ಎಂಟು ಗಂಟೆ ಹೊತ್ತಿಗೆ ಅಹಮದಾಬಾದ್ ತಲುಪಿತು. ಅಲ್ಲಿ ನಮಗಾಗಿ ಕಾಯ್ದಿದ್ದ ಖಾಸಗಿ ಬಸ್ಸು ಹತ್ತಿ ಹೋಟೆಲ್ ರೂಂಗೆ ಬಂದೆವು. ಸ್ನಾನ ಮಾಡಿ ಪ್ರೆಶ್ ಆಗಿ ತಿಂಡಿ ತಿಂದು ನಮ್ಮ ಲಗೇಜ್‌ಗಳನ್ನು ಹೋಟೆಲ್‌ನಲ್ಲೇ ಇರಿಸಿ ಮೊಧೇರಾದ ಸೂರ್ಯ ದೇವಸ್ಥಾನ ನೋಡಲು ಹೊರಟವು. ಇದು ಅಹಮದಾಬಾದ್‌ನಿಂದ 100 ಕಿ.ಮೀ. ಮತ್ತು ಮೆಹ್ಸಾನಾದಿಂದ 25 ಕಿ.ಮೀ. ದೂರದಲ್ಲಿದೆ. ಮೆಹ್ಸಾನಾ ಜಿಲ್ಲೆಯ ಮೊಧೇರಾ ಗ್ರಾಮದಲ್ಲಿ ಪುಷ್ಪಾವತಿ ನದಿ ದಂಡೆಯಲ್ಲಿದೆ. ಇದನ್ನು ಕ್ರಿ.ಶ.1026ರಲ್ಲಿ ಸೋಲಂಕಿ ರಾಜ 1ನೇ ಭೀಮದೇವ ನಿರ್ಮಿಸಿದನೆಂದು ಹೇಳಲಾಗಿದೆ. ಇದು ಸೌರ ದೇವತೆಗೆ ಸಮರ್ಪಿತ ಸೂರ್ಯಕುಂಡ ಮತ್ತು ಕಲಾತ್ಮಕ ಕೆತ್ತನೆಗೆ ಹೆಸರುವಾಸಿಯಾಗಿದೆ. ಇದು ಆರ್ಕಿಯಾಲಜಿ ಇಲಾಖೆಯ ಸಂರಕ್ಷಣೆಯಲ್ಲಿದೆ. ಈ ದೇವಾಲಯದಲ್ಲಿ ನಾವು ದೊಡ್ಡ ಗರ್ಭಗುಡಿಯನ್ನು ಸಭಾಮಂಟಪವನ್ನು ನೋಡಬಹುದು. 

ದೇವಾಲಯವು 52 ಸುಂದರ ಸ್ಥಂಭಗಳನ್ನು ಹೊಂದಿದೆ. ಕಂಬಗಳ ಕೆಳಭಾಗವು ಅಷ್ಟಭುಜಾ ಕೃತಿಯಲ್ಲಿ ಮೇಲ್ಭಾಗವು ದುಂಡಾಗಿದೆ. ದೇವಾಲಯದ ಕಂಬ ಗೋಡೆಯ ಮೇಲೆ ವಿವಿಧ ದೇವತೆಗಳು ರಾಮಾಯಣ ಮಹಾಬಾರತದ ದೃಶ್ಯಗಳನ್ನು ಕೆತ್ತಲಾಗಿದೆ. ಸಭಾಮಂಟಪದ ಮುಂದೆ ದೊಡ್ಡ ಕುಂಡವಿದೆ. ಇದನ್ನು ಸೂರ್ಯಕುಂಡ ಅಥವಾ ರಾವiಕುಂಡ ಎನ್ನುವರು. ಶ್ರೀರಾಮನು ರಾವಣನನ್ನು ಕೊಂದ ಪಾಪ ಪರಿಹಾರಕ್ಕೆ ತನ್ನ ಗುರು ವಶಿಷ್ಠರ ಸಲಹೆಯಂತೆ ಧರ್ಮಾರಣ್ಯಕ್ಕೆ ಹೋಗಿ ಈ ಸೂರ್ಯ ದೇವಾಲಯದ ಸ್ಥಳದಲ್ಲಿ ಯಜ್ಞ ಮಾಡಿದನೆಂದೂ ಶ್ರೀರಾಮ ಅಂದು ಭೇಟಿ ನೀಡಿದ ಧರ್ಮಾರಣ್ಯವೇ ಇಂದು ಮೋಧೇರಾ ಎಂಬ ಕಥೆಯಿದೆ. 

ನಾವು ದೇವಾಲಯ ವೀಕ್ಷಿಸಿ ಹೋಟೆಲ್‌ನಲ್ಲಿ ಊಟ ಮಾಡಿ ಮುಂದೆ ರಾಣಿ ಕಿ ವಾಹ್ ನೋಡಲು ಪ್ರಯಣಿಸಿದವು. ಇದು ಅಹಮದಾಬಾದ್‌ನಿಂದ ಸುಮಾರು 125 ಕಿ.ಮೀ.ದೂರ ಪಟಾನ್ ಎಂಬ ಪಟ್ಟಣದಲ್ಲಿದೆ. 40 ರೂ.ಗೆ ಟಿಕೇಟ್ ಖರೀದಿಸಿ ಹಸಿರು ಹುಲ್ಲಿನ ಉದ್ಯಾನದ ಹಾದಿಯಲ್ಲಿ ಸ್ವಲ್ಪ ದೂರ ನಡೆದವು. ಇದನ್ನು ಸೋಲಂಕಿ ರಾಜವಂಶದ ರಾಣಿ ಉದಯಮತಿಯು 1063ರಲ್ಲಿ ತನ್ನ ಪತಿ ರಾಜ ಭೀಮರಾವ್ 1 ಸ್ಮರಣಾರ್ಥ ಮೆಟ್ಟಿಲು ಬಾವಿ ನಿರ್ಮಾಣ ಮಾಡಿದ್ದಾಗಿ ಉಲ್ಲೇಖವಿದೆ. ಇದು ಪೂರ್ಣಗೊಳ್ಳಲು 20 ವರ್ಷ ಸಮಯ ತೆಗೆದುಕೊಂಡಿತೆAದು ಹೇಳಿದೆ. ಈ ಐತಿಹಾಸಿಕ ಸ್ಮಾರಕವು 2014ರಲ್ಲಿ ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ಹೊಸ ನೂರು ರೂ. ನೋಟಿನ ಮೇಲೆ ಈ ರಾಣಿ ಕಿ ವಾವ್‌ನ ಚಿತ್ರವಿದೆ. ಇದು ತಲೆಕೆಳಗಾದ ದೇವಾಲಯದಂತೆ ಕಾಣುವ ಅಮೋಘ ಗುರ್ಜರಾ ವಾಸ್ತು ಶಿಲ್ಪ ಶೈಲಿಯ ನಿರ್ಮಾಣವಾಗಿದೆ. ಏಳು ಹಂತದ ಮೆಟ್ಟಿಲುಗಳನ್ನು ಹೊಂದಿದೆ. ಸಾವಿರಕ್ಕೂ ಹೆಚ್ಚು ಸಣ್ಣ ಸಣ್ಣ ಶಿಲ್ಪಗಳನ್ನು ಹೊಂದಿದೆ. ವಿಷ್ಣವಿನ ಅವತಾರಗಳಾದ ರಾಮ ಶ್ರೀಕೃಷ್ಣ ನರಸಿಂಹ ವಾಮನ ವಿವಿಧ ರೂಪಗಳನ್ನು ನೋಡಬಹುದು. ಸರಸ್ವತಿ ನದಿಯ ಪ್ರವಾಹದಿಂದಾಗಿ ಇದು ಭೂಗರ್ಭದಲ್ಲಿ ಕಣ್ಮರೆಯಾಗಿತ್ತು. 1890ರಲ್ಲಿ ಸಂಪೂರ್ಣ ಹೂಳಿದ ಸ್ಥಿತಿಯಲ್ಲಿದ್ದು ಕೇವಲ ಕಂಬಗಳು ಮಾತ್ರ ಗೋಚರಿಸಿದವು. 1940ರಲ್ಲಿ ಮೆಟ್ಟಿಲು ಬಾವಿಯನ್ನು ಮರುಶೋಧಿಸಿ 1980ರಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಪುನರುತ್ಥಾನಗೊಳಿಸಿತು. ಇಲ್ಲಿ 30 ಕಿ.ಮೀ. ಸುರಂಗವಿದೆಯೆAದು ಶತ್ರುಗಳಿಂದ ಪಾರಾಗಲು ಇದು ಬಳಕೆಯಾಗುತ್ತಿತ್ತೆಂದು ಹೇಳಲಾಗಿದೆ. ನಾವು ರಾಣಿ ಕಿ ವಾಹ್ ನೋಡಿ ಪುನ: ಅಹಮದಾಬಾದ್‌ನತ್ತ ಹೊರಟೆವು. ಬಸ್ಸಿನಲ್ಲಿ ಕುಳಿತ್ತಾಗ ನನ್ನ ಕಣ್ಣ ಮುಂದೆ ಬೇಲೂರು ಹಳೇಬೀಡು ಶಿಲ್ಪ ಕಲೆಗಳು ಮೂಡಿ ಬಂದವು. 

ಗೊರೂರು ಅನಂತರಾಜು, ಹಾಸನ.

ಮೊ: 9449462879

ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, 3ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

Post a Comment

0Comments

Post a Comment (0)