Breaking News: ಸೋಂಕಿತರ ಚಿಕಿತ್ಸೆಗಾಗಿ ಹಾಸಿಗೆಗಳು ಮೀಸಲು: ಆಯುಕ್ತ ಗೌರವ್ ಗುಪ್ತ

varthajala
0

ಬೆಂಗಳೂರು, ಜ 06: ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಹಾಸಿಗೆಗಳನ್ನು ಮೀಸಲಿಡುವ ಸಂಬಂಧ ಕೂಡಲೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ: ಮುಖ್ಯ ಆಯುಕ್ತರಾದ ಶ್ರೀ ಗೌರವ್ ಗುಪ್ತ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಪ್ರಕರಣಗಳು ತ್ವರಿತಗತಿಯಲ್ಲಿ ಏರಿಕೆಯಾಗುತ್ತಿದ್ದು, ಸರ್ಕಾರದ ಆದೇಶದನ್ವಯ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಹಾಸಿಗೆಗಳನ್ನು ಮೀಸಲಿಡುವ ಸಂಬಂಧ ಕೂಡಲೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಖ್ಯ ಆಯುಕ್ತ ಶ್ರೀ ಗೌರವ್ ಗುಪ್ತ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಆಸ್ಪತ್ರೆ ಹಾಸಿಗೆ ನಿರ್ವಹಣಾ ವ್ಯವಸ್ಥೆ(CHBMS)ಗೆ ಸಂಬಂಧಿಸಿದಂತೆ ಇಂದು ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯ ಹೆಚ್ಚಳವು ಜನರಲ್ಲಿ ಭೀತಿಯನ್ನುಂಟು ಮಾಡಬಹುದು. ಆದರೆ, ಯಾರೊಬ್ಬರೂ ಭಯಪಡುವ ಅವಶ್ಯಕತೆಯಿಲ್ಲ. ಸರ್ಕಾರದ ಆದೇಶದನ್ವಯ ಖಾಸಗಿ ಆಸ್ಪತ್ರೆಗಳಲ್ಲಿ ಸೂಕ್ತ ರೀತಿಯಲ್ಲಿ ಹಾಸಿಗೆ ವ್ಯವಸ್ಥೆ ಮಾಡಿಕೊಂಡಲ್ಲಿ ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿರುತ್ತದೆ ಎಂದು ತಿಳಿಸಿದರು. 

ನಗರದಲ್ಲಿ ಪ್ರತಿನಿತ್ಯ ಸುಮಾರು 60,000 ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಆಸ್ಪತ್ರೆಗಳಿಗೆ ದಾಖಲಾಗುವ ಪ್ರಮಾಣ ಪ್ರತಿನಿತ್ಯ 20 ರಿಂದ 60ಕ್ಕೆ ಏರಿಕೆಯಾಗಿದ್ದು, ಸೋಂಕಿತ ವ್ಯಕ್ತಿ ಯಾವುದೇ ಭಯಪಡುವ ಅವಶ್ಯಕತೆಯಿಲ್ಲ. ಪಾಲಿಕೆಯ ಟೆಲಿ ಟ್ರಯಾಜಿಂಗ್ ತಂಡ ಹಾಗೂ ಆಯಾ ವಾರ್ಡ್ ವ್ಯಾಪ್ತಿಯಲ್ಲಿರುವ ಮೊಬೈಲ್ ಟ್ರಯಾಜಿಂಗ್ ತಂಡವು ಸೋಂಕಿತ ವ್ಯಕ್ತಿಯ ಆರೋಗ್ಯ ಪರಿಸ್ಥಿತಿ ಅವಲೋಕಿಸಲಿದ್ದು, ಆಸ್ಪತ್ರೆಯ ಅವಶ್ಯಕತೆ ಇರುವವರಿಗೆ ಮಾತ್ರ ದಾಖಲಿಸಿ, ಉಳಿದವರಿಗೆ ಮನೆಯಲ್ಲೇ ಪ್ರತ್ಯೇಕವಾಗಿರುವ ಮೂಲಕ ಚಿಕಿತ್ಸೆ ಪಡೆಯಲು ತಿಳಿಸಬೇಕು.

ಹೆಚ್ಚಿನ ಕೋವಿಡ್ ಪ್ರಕರಣಗಳಲ್ಲಿ ಎಸಿಮ್ಟಮೇಟಿಕ್ ಆಗರಲಿದ್ದು, ಮನೆಯಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗಬಹುದಾಗಿರುತ್ತದೆ. ಈ ಬಗ್ಗೆ ನಾಗರೀಕರಲ್ಲಿ ಮನವರಿಕೆ ಮಾಡಬೇಕು. ಆಸ್ಪತ್ರೆಗೆ ದಾಖಲಿಸುವಂತಹ ಪ್ರಕರಣಗಳನ್ನಷ್ಟೇ ಆಸ್ಪತ್ರೆಗೆ ರವಾನಿಸಬೇಕು. ಇದಕ್ಕಾಗಿ ಟ್ರಯಾಜಿಂಗ್ ಸರಿಯಾಗಿ ನಡೆಯಬೇಕಿದ್ದು, ಟ್ರಯಾಜಿಂಗ್ ಮಾಡಲು ಬೇಕಾದ ಹೆಚ್ಚುವರಿ ಸಿಬ್ಬಂದಿಯನ್ನು ವಲಯವಾರು ನಿಯೋಜನೆ ಮಾಡಿಕೊಳ್ಳಬೇಕು. ಜೊತೆಗೆ ವಲಯ ಸಂಯೋಜಕರು ಇದರ ಬಗ್ಗೆ ನಿಗಾ ಇಡಬೇಕು ಎಂದು ಅಧಿಕಾರಿಳಿಗೆ ಸೂಚನೆ ನೀಡಿದರು. 

ನಗರದಲ್ಲಿ ಕೋವಿಡ್ ಚಿಕಿತ್ಸೆಗಾಗಿ ಪ್ರತ್ಯೇಕವಾಗಿ ಸಿ.ವಿ.ರಾಮನ್ ನಗರ ಜನರಲ್ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಆಸ್ಪತ್ರೆ ಹಾಗೂ ಬೌರಿಂಗ್ ಆಸ್ಪತ್ರೆಯನ್ನು ಮೀಸಲಿಡಲಾಗಿದ್ದು, ಖಾಸಗಿ ಆಸ್ಪತ್ರೆಗಳು ಸೇರಿದಂತೆ ಸಾಕಷ್ಟು ಹಾಸಿಗೆಗಳ ಲಭ್ಯತೆ ಇದೆ. ಯಾರೊಬ್ಬರೂ ಗಾಬರಿಪಡುವ ಅಗತ್ಯವಿಲ್ಲ. ಪಾಲಿಕೆಯ ವ್ಯಾಪ್ತಿಯ ಎಲ್ಲಾ ವಾರ್ ರೂಂಗಳು ಕೂಡಲೆ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಜೊತೆಗೆ ಆಯಾ ವಾರ್ಡ್ ವ್ಯಾಪ್ತಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ನಗರದಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಗಳು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಗಾಗಿ ಅಲೆದಾಡುವುದಾಗಲಿ, ಆಕ್ಸಿಜನ್, ಐಸಿಯುಗಾಗಿ ಅಲೆದಾಡುವುದಾಗಲಿ ಆಗಬಾರದು. ಯಾವುದೇ ರೀತಿಯ ಹಾಸಿಗೆ ಸಮಸ್ಯೆ ಉದ್ಭವವಾಗದಂತೆ ಹಾಸಿಗೆ ಹಂಚಿಕೆ ವ್ಯವಸ್ಥೆ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಜನವರಿ 16ರ ವೇಳೆಗೆ 10,000 ರಿಂದ 12,000 ಹಾಸಿಗೆ ಲಭ್ಯವಿರಬೇಕು:

ಬಿಬಿಎಂಪಿ ವ್ಯಾಪ್ತಿಯಲ್ಲಿ ಸರ್ಕಾರಿ ಆದೇಶದನ್ವಯ ಖಾಸಗಿ ಆಸ್ಪತ್ರೆಗಳಲ್ಲಿ ಜನವರಿ 16ರ ವೇಳೆಗೆ 10,000 ರಿಂದ 12,000 ಹಾಸಿಗೆಗಳು ಲಭ್ಯವಿರಬೇಕು. ಈ ಸಂಬಂಧ ನೋಡಲ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಹಾಸಿಗೆಗಳನ್ನು ಮೀಸಲಿಡಲು ಆಸ್ಪತ್ರೆಗಳಿಗೆ ಸೂಚನೆ ನೀಡಬೇಕು. ಜೊತೆಗೆ ಆಸ್ಪತ್ರೆಗಳಲ್ಲಿ ಎಷ್ಟು ಹಾಸಿಗಗಳು ಲಭ್ಯ ಇವೆ, ಎಷ್ಟು ಹಾಸಿಗೆಗಳು ಭರ್ತಿಯಾಗಿವೆ, ಎಷ್ಟು ಖಾಲಿಯಿವೆ ಎಂಬುದರ ನಿಖರ ಮಾಹಿತಿಯನ್ನು ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

100ಕ್ಕೂ ಹೆಚ್ಚು ಹಾಸಿಗೆಗಳಿರುವ ಆಸ್ಪತ್ರೆಗಳಲ್ಲಿ ಹೆಲ್ಪ್ ಡೆಸ್ಕ್ ಪ್ರಾರಂಭಿಸಿ:

ನಗರದಲ್ಲಿ 100ಕ್ಕೂ ಹೆಚ್ಚು ಹಾಸಿಗೆಗಳಿರುವ ಆಸ್ಪತ್ರೆಗಳಲ್ಲಿ ಕೂಡಲೆ ಹೆಲ್ಪ್ ಡೆಸ್ಕ್ ಗಳನ್ನು ಪ್ರಾರಂಭಿಸಬೇಕು. ನಗರದ ನಾಗರೀಕರು ಆಸ್ಪತ್ರೆಗೆ ಬಂದವೇಳೆ ಅಗತ್ಯ ಮಾಹಿತಿಯನ್ನು ಒದಗಿಸುವ ಕೆಲಸ ಮಾಡಬೇಕು. ಅದಕ್ಕಾಗಿ ಅಗತ್ಯ ಸಿಬ್ಬಂದಿ/ಸ್ವಯಂ ಸೇವಕರನ್ನು ನಿಯೋಜನೆ ಮಾಡಿಕೊಳ್ಳಿ. ಜೊತೆಗೆ ಎಲ್ಲಾ ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರರಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ತಿಳಿಸಿದರು. 

ಸಭೆಯಲ್ಲಿ ಸಿ.ಹೆಚ್.ಬಿ.ಎಂ.ಎಸ್ ತಂಡ ನಾಯಕರು ಶ್ರೀ ಕುಮಾರ್ ಪುಷ್ಕರ್, ಸಿ.ಹೆಚ್.ಬಿ.ಎಂ.ಎಸ್ ತಂಡದ ಸದಸ್ಯರಾದ ಬಿಶ್ವಜಿತ್ ಮಿಶ್ರ, ವಿಶೇಷ ಆಯುಕ್ತರು (ಆರೋಗ್ಯ) ಡಾ. ತ್ರಿಲೋಕ್ ಚಂದ್ರ, ಎಲ್ಲಾ ವಲಯ ಆಯುಕ್ತರುಗಳು, ವಲಯ ಸಂಯೋಜಕರು, ಆಸ್ಪತ್ರೆ ನೋಡಲ್ ಅಧಿಕಾರಿಗಳು, ಮುಖ್ಯ ಆರೋಗ್ಯಾಧಿಕಾರಿ, ವಲಯ ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು, ವಾರ್ ರೂಂ ಸಿಬ್ಬಂದಿ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Shikshanaratna, Bengaluru

Tags

Post a Comment

0Comments

Post a Comment (0)