ಬಡತನ ಮೆಟ್ಟಿ ನಿಂತು ಸಾಧನೆಗೆ ಮುಂದಾಗಿ : ಅಮ್ಮ ರಾಮಚಂದ್ರ ಜೀ

varthajala
0

ವಾರ್ತಾ ಜಾಲ ಸುದ್ದಿ ಮಧುಗಿರಿ: ಬಡತನ, ಹಸಿವು ಕಲಿಸುವ ಪಾಠವು ಯಾವುದೇ ವಿಶ್ವವಿದ್ಯಾಲಯವೂ ಕಲಿಸುವುದಿಲ್ಲ. ಹುಟ್ಟು ಬಡತನದಲ್ಲಿದ್ದರೂ, ಸಾವು ಚರಿತ್ರೆಯಾಗಬೇಕು. ಬಡತನವನ್ನು ಸವಾಲಾಗಿ ಸ್ವೀಕರಿಸಿ, ಅಂಕಪಟ್ಟಿಯಲ್ಲಿ ಫೇಲಾದರೂ, ಜೀವನದಲ್ಲಿ ಯಶಸ್ಸಿನ ತುತ್ತತುದಿಗೇರಬೇಕು. ಜೀವನದಲ್ಲಿ ಬರುವ ಭಯವನ್ನು ದಿಟ್ಟತನದಿಂದ ಎದುರಿಸಿ, ಬಡತನವನ್ನು ಮೆಟ್ಟಿನಿಂತು ಸಾಧನೆಗೆ ಮುಂದಾಗಬೇಕು, ಯುವಜನರು ತಮ್ಮ ಭವಿಷ್ಯವನ್ನು ತಾವೇ ನಿರ್ಮಿಸಿಕೊಳ್ಳಬೇಕು ಎಂದು ಅಂತರಾಷ್ಟ್ರೀಯ ಗಾಯಕರು, ರಾಷ್ಟ್ರ ಪ್ರಶಸ್ತಿ ಚಿನ್ನದಪದಕ ವಿಜೇತರಾದ ಅಮ್ಮ ರಾಮಚಂದ್ರ ಜೀ ಕರೆ ನೀಡಿದರು.   



ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಾ ಅವರು ಕುಗ್ರಾಮದಲ್ಲಿ ಜನಿಸಿದ ನಾನು ಎಸ್.ಎಸ್.ಎಲ್,ಸಿ ಯಲ್ಲಿ ಅನುತ್ತೀರ್ಣನಾದಾಗ ನನ್ನ ತಾಯಿ ತಂದೆ ನೀಡಿದ ಪ್ರೇರಣೆಯಿಂದ ಮರುಜನ್ಮ ಪಡೆದು, ಕ್ರೀಡಾಪಟುವಾಗಿ, ರೈತನಾಗಿ, ಜನಪದ ಗಾಯಕನಾಗಿ, ಸಂಶೋಧಕನಾಗಿ ಹಲವಾರು ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಪಡೆದು, ಇಂದು ಅಂತರಾಷ್ಟ್ರೀಯ ಮಟ್ಟದ ಗಾಯಕನಾಗಿ ಹೊರಹೊಮ್ಮಲು ಸಾಧ್ಯವಾಯಿತು. ಇದುವರೆಗೆ ಅಮೇರಿಕಾ, ಚೀನಾ, ಇಂಗ್ಲೆಂಡ್, ನೇಪಾಳ, ಚೀನಾ ಮತ್ತಿತರ ದೇಶಗಳಲ್ಲಿ ಕನ್ನಡದ ಗೀತೆಗಳನ್ನು ಹಾಡಿ ಕನ್ನಡದ ಕಂಪನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಾಯಿತು. ಕೊಟ್ಯಾಂತರ ಕನ್ನಡಿಗರ ಮನಸ್ಸು ಗೆಲ್ಲುವ ಶಕ್ತಿ ನನ್ನಲ್ಲಿ ಉದಯಿಸಿತು. ನನ್ನೊಳಗಿನ ಭಯ ದೂರವಾಗಿ, ಸಾಧಿಸುವ ಛಲ ಮೂಡಿ, ವಿಶ್ವ ಅಕ್ಕ ಸಮ್ಮೇಳನದಲ್ಲಿಯೂ ಕಾರ್ಯಕ್ರಮ ನೀಡಿರುತ್ತೇನೆ. ವಿದ್ಯಾಭ್ಯಾಸದ ಜೊತೆಗೆ ಪ್ರತಿದಿನ ದಿನಪತ್ರಿಕೆ ಹಂಚುತ್ತಾ, ಪತ್ರಿಕೆಗಳ ವಿಚಾರಗಳನ್ನು ಮನನ ಮಾಡಿಕೊಂಡಿದ್ದು, ನನ್ನನ್ನು ಈ ಮಟ್ಟಕ್ಕೆ ಬೆಳೆಸಲು ಸಾಧ್ಯವಾಯಿತು. ಆದುದರಿಂದ ಇಂದಿನ ಯುವಜನರು ಮಧ್ಯಪಾನ, ಧೂಮಪಾನ, ಮೊಬೈಲ್‍ಗಳಲ್ಲಿ ಕಾಲಹರಣ ಮಾಡದೇ ಜೀವನ ಕಟ್ಟಿಕೊಳ್ಳುವ ಕಲೆಗಳನ್ನು ಕರಗತ ಮಾಡಿಕೊಳ್ಳಬೇಕು. ಆದುದರಿಂದ ಸಾಧನೆಗೆ ಪೂರಕವಾದ ಪ್ರೇರಣೆಯನ್ನು ತಂದೆತಾಯಿಗಳು, ಗುರುಗಳಿಂದ ಪಡೆಯಿರಿ. ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ಶ್ರೇಷ್ಟ ಎಂದು ತಿಳಿಸಿದರು. 

ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ಎಂ.ಆರ್.ಜಗನ್ನಾಥ್ ಮಾತನಾಡಿ ಸ್ನೇಹಿತರ ಸಹವಾಸದಿಂದ ಕೆಟ್ಟಚಟಗಳನ್ನು ಕಲಿತು ದಾಸರಾಗುವ ಬದಲು, ಸಾಧಕರ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡಿ ಅವರಂತೆ ಸನ್ಮಾರ್ಗದಲ್ಲಿ ನಡೆದು ಜೀವನ ಕಟ್ಟಿಕೊಳ್ಳಬೇಕು. ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ಅಪ್ಪಅಮ್ಮನ ಋಣ ತೀರಿಸಲು ಸಾಧ್ಯವಿಲ್ಲ. ಆದುದರಿಂದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು, ಸತ್ಪ್ರಜೆಗಳಾಗಬೇಕು. ಕಷ್ಟಗಳನ್ನು ಎದುರಿಸಿ ತಂದೆತಾಯಿಯ ಆಸೆಯಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಅಮ್ಮ ರಾಮಚಂದ್ರ ಜೀ ರವರನ್ನು ವಿದ್ಯಾರ್ಥಿಗಳು ಮಾದರಿಯಾಗಿ ತೆಗೆದುಕೊಳ್ಳಬೇಕೆಂದರು. 

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಪ್ರೊ.ಡಿ.ಎಸ್.ಮುನೀಂದ್ರಕುಮಾರ್ ಮಾತನಾಡಿ ವಿದ್ಯಾರ್ಥಿದೆಸೆಯಲ್ಲಿ ಶಿಸ್ತುಬದ್ದ ಜೀವನ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಮಹತ್ವಾಕಾಂಕ್ಷೆಯುಳ್ಳ ಯಾವುದೇ ಕ್ಷೇತ್ರವನ್ನು ಆರಿಸಿಕೊಂಡರೂ ಕಠಿಣ ಪರಿಶ್ರಮ, ಶ್ರದ್ದೆಯಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಬಡತನವೇ ಸಾಧನೆಯ ಮೆಟ್ಟಿಲು, ಸಾಧನೆಗಾಗಿ ಹಾತೊರೆಯುವ ಮನಸ್ಸು ನಿಮ್ಮದಾಗಬೇಕು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಸಮಾನ ಆದ್ಯತೆ ನೀಡಿ, ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ತಂದೆತಾಯಿಗಳ ಮೆಚ್ಚಿನ ಮಕ್ಕಳಾಗಿ ರೂಪುಗೊಳ್ಳಬೇಕು. ದುಶ್ಚಟಗಳ ದಾಸರಾಗುವ ಬದಲು ಸಚ್ಚಾರಿತ್ರ್ಯ ರೂಪಿಸಿಕೊಳ್ಳಬೇಕು ಎಂದರು. 

ಕಾರ್ಯಕ್ರಮದಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.  ಪುರಸಭಾ ಸದಸ್ಯ ನರಸಿಂಹಮೂರ್ತಿ, ಸಾಂಸ್ಕೃತಿಕ ಸಂಚಾಲಕ ಪ್ರೊ.ದಿವಾಕರ ಕೆ, ಪ್ರಾಧ್ಯಾಪಕರಾದ ಟಿ.ಎನ್.ನರಸಿಂಹಮೂರ್ತಿ, ಡಾ.ಅಶೋಕ್, ಡಾ.ಶ್ರೀನಿವಾಸ್.ಎನ್.ಟಿ. ಪುರುಷೋತ್ತಮ್, ಡಾ.ಎಸ್.ಆರ್.ಹನುಮಂತರಾಯ, ಲಕ್ಷ್ಮೀಪತಯ್ಯ, ಡಾ.ನಾಗಭೂಷಣ, ಡಾ.ಮಂಜುಭಾರ್ಗವಿ, ಮಂಜುನಾಥ್.ಬಿ ಶ್ರೀಹರಿ, ಲಾಲಿತ್ಯ ಕಲಾ ಮಂಡಲಿಯ ಲಲಿತಾಂಬ ಲಕ್ಷ್ಮೀನರಸಯ್ಯ ಮತ್ತಿತರರು ಭಾಗವಹಿಸಿದ್ದರು. ಡಾ.ವಿಜಯಲಕ್ಷ್ಮೀ ಎನ್. ಕಾರ್ಯಕ್ರಮ ನಿರೂಪಿಸಿ, ಪ್ರೊ.ದಿವಾಕರ ಸ್ವಾಗತಿಸಿ, ಪ್ರೊ.ಪುರುಷೋತ್ತಮ್ ವಂದಿಸಿದರು.

ವರದಿ:ನಾಗೇಶ್ ಜೀವಾ ಮಧುಗಿರಿ.

Post a Comment

0Comments

Post a Comment (0)