ಶಾರದಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ವಿಜ್ಞಾನ ವಸ್ತು ಪ್ರದರ್ಶನ

varthajala
0

ವಾರ್ತಾಜಾಲ,ಶಿಡ್ಲಘಟ್ಟ 

ವರದಿ : ಚಿಕ್ಕತೇಕಹಳ್ಳಿ ಡಿ ಶಿವಕುಮಾರ್

 ವಿದ್ಯಾರ್ಥಿಗಳ ಜ್ಞಾನಾರ್ಜನೆಯೊಂದಿಗೆ ವೈಜ್ಞಾನಿಕ ಮನೋಭಾವನೆ, ಅನ್ವೇಷಣೆಗೆ ಪ್ರೇರಣೆ ನೀಡಲು ವಿಜ್ಞಾನ ವಸ್ತುಪ್ರದರ್ಶನಗಳು ಸಹಕಾರಿಯಾಗಿವೆ ಎಂದು ಶ್ರೀ ಶಾರದಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಶ್ರೀಕಾಂತ್ ಅಭಿಪ್ರಾಯಪಟ್ಟರು.

ನಗರದ ಶ್ರೀ ಶಾರದಾ ವಿದ್ಯಾ ಸಂಸ್ಥೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

 ಶಾಲೆಯಲ್ಲಿ ಆಯೋಜಿಸುವ ವಸ್ತು ಪ್ರದರ್ಶನಗಳು ಮಕ್ಕಳಲ್ಲಿ ವಿಜ್ಞಾನದ ಬಗೆಗಿನ ಆಸಕ್ತಿ ಹೆಚ್ಚುಸುವುದಲ್ಲದೇ ಹೊಸಹೊಸ ವಿಜ್ಞಾನದ ಸಂಶೋಧನೆಗಳಿಗೆ ವಿದ್ಯಾರ್ಥಿಗಳನ್ನು ದೂಡಬಲ್ಲದು ಎಂದರು. ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುಗಳಾಗದೇ, ತಮ್ಮ ಪ್ರತಿಭೆಯನ್ನು ಬಳಸಿಕೊಂಡು ಚಟುವಟಿಕಾಶೀಲರಾಗಿ ಕಲಿಯುವಂತಾಗಬೇಕು. ವಸ್ತುಪ್ರದರ್ಶನಗಳಲ್ಲಿ ಹಿಂಜರಿಕೆ, ಕೀಳಿರಿಮೆಗಳು ಸಲ್ಲದು. ಮಕ್ಕಳಲ್ಲಿ ಸೃಜನಶೀಲತೆಯನ್ನು ಜಾಗೃತಗೊಳಿಸುವ ಪೂರಕವಾದ ವಾತಾವರಣವನ್ನು ಸೃಷ್ಟಿಸುವ ಕಾರ್ಯವು ಶಿಕ್ಷಕರಿಂದಾಗಬೇಕು ಎಂದರು.

 ಶಾಲೆಯ ಎಲ್‌ಕೆಜಿ ಯಿಂದ ೧೦ ನೇ ತರಗತಿವರೆಗಿನ ಸುಮಾರು ನೂರು ಮಕ್ಕಳು ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದು, ಸುಮಾರು ೬೦ ಕ್ಕೂ ಹೆಚ್ಚು ವಿವಿಧ ರೀತಿಯ ಮಾದರಿಗಳನ್ನು ಸಿದ್ದಪಡಿಸಿದ್ದರು. ಜ್ವಾಲಾಮುಖಿ, ಲೇಸರ್ ತಂತ್ರಜ್ಞಾನ ಬಳಸಿ ಕಳವು ತಡೆಯುವ ವಿಧಾನ, ಆಹಾರ ಸರಪಣಿ, ದೇಹದ ವಿವಿಧ ಅಂಗಗಳ ರಚನೆಗಳು, ತ್ಯಾಜ್ಯ ನಿರ್ವಹಣೆ, ಭೂಮಿಯ ಪದರಗಳು, ಮಳೆ ಕೊಯ್ಲು, ಮಿದುಳು, ಪ್ರಾಣಿ, ಪಕ್ಷಿ, ಸಸ್ಯಗಳ ವೈವಿಧ್ಯ ಮುಂತಾದ ವೈಜ್ಞಾನಿಕ ಸಂಗತಿಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿ, ಅವುಗಳನ್ನು ವಿವರಿಸಿದರು.

 ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎ.ಆರ್.ಮುನಿರತ್ನಂ, ಮುಖ್ಯ ಶಿಕ್ಷಕರಾದ ಬಿ.ಎಂ.ವಿಜಯಾ, ರಾಜೇಶ್, ಶಿಕ್ಷಕ ನರಸಿಂಹಮೂರ್ತಿ ಮತ್ತಿತರರು ಹಾಜರಿದ್ದರು.

Post a Comment

0Comments

Post a Comment (0)