ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಶ್ರೀಮತಿ ಎಂ ಲೀಲಾವತಿಯವರ ಪ್ರೋತ್ಸಾಹದಿಂದ ಶ್ರೀ ಸಿದ್ದಪ್ಪ ಅಗರಖೇಡ್ ರವರ ಮಾರ್ಗದರ್ಶನದಲ್ಲಿ 2000 ಇಸವಿಯಲ್ಲಿ ನೋಂದಣಿಯಾದ ಈ ಕ್ರಿಯಾಶೀಲ ಸಂಸ್ಥೆ, ಹೆಸರಿಗಷ್ಟೇ ಸಂಭ್ರಮವಲ್ಲ. ಇಡೀ ಸಾಂಸ್ಕೃತಿಕ ಲೋಕವನ್ನೇ ಸಂಭ್ರಮದ ಸಿಂಚನದಲ್ಲಿ ತೋಯಿಸಿದ ಕೀರ್ತಿ ಈ "ಸಂಭ್ರಮ" ಎಂಬ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಗೆ ಸಲ್ಲಬೇಕು. ಸದಾ ಕ್ರಿಯಾಶೀಲತೆಯೇ ಉಸಿರಾಗಿರುವ ಈ ವೇದಿಕೆ 25 ವರ್ಷಗಳಿಂದ ನಿರಂತರವಾಗಿ ಕಲಾ ಕೈಂಕರ್ಯವನ್ನು ಮಾಡುತ್ತಾ, ಗಸ್ತಿ ಮೇಳ, ಕರ್ನಾಟಕ ಕಲಾ ಸಂಭ್ರಮ, ಸಾಂಸ್ಕೃತಿಕ ವೈಭವ, ರಂಗ ಸಂಭ್ರಮ, ನೃತ್ಯ ಸಂಭ್ರಮ, ರಾಷ್ಟ್ರೀಯ ಜಾನಪದ ಉತ್ಸವ, ಗಡಿನಾಡ ಉತ್ಸವ, ಕಾರ್ತಿಕ ರಂಗೋತ್ಸವ, ನೃತ್ಯ ವೈಭವ - ಮುಂತಾದ ಕಾರ್ಯಕ್ರಮಗಳ ಮೂಲಕ ಅನೇಕ ಕಲಾವಿದರಿಗೆ ವೇದಿಕೆಯನ್ನು ಕಲ್ಪಿಸಿಕೊಟ್ಟು ಸಾಂಸ್ಕೃತಿಕ ಲೋಕವನ್ನು ಶ್ರೀಮಂತ ಗೊಳಿಸಿದೆ . ರಾಜ್ಯ ಮಟ್ಟದ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಿ ಜನ ಮನ್ನಣೆ ಗಳಿಸಿದೆ. ಬ್ಯಾಂಕಾಕ್ ಮತ್ತು ಕಟ್ಮoಡುವಿನಲ್ಲಿ ಕನ್ನಡ - ತುಳು ಸ್ನೇಹ ಸಮ್ಮೇಳನವನ್ನು ಆಯೋಜಿಸಿದ ಹೆಗ್ಗಳಿಕೆ ಸಂಭ್ರಮ ಸಂಸ್ಥೆಯದು.
ದೇಶದ ರಾಜಧಾನಿ ದೆಹಲಿಯಲ್ಲಿ ಲೋಕಕಲಾ ಮಹೋತ್ಸವವನ್ನು ಆಯೋಜಿಸಿ ದೇಶದ 13 ರಾಜ್ಯಗಳಿಂದ ಜಾನಪದ ಮತ್ತು ಬುಡಕಟ್ಟು ಕಲಾತಂಡಗಳ ಪ್ರದರ್ಶನವನ್ನು ಹಮ್ಮಿಕೊಂಡಿದ್ದು ಇದರ ಕೀರ್ತಿಗೆ ಮತ್ತೊಂದು ಗರಿ ಅಷ್ಟೇ.
ರಂಗಭೂಮಿ, ನೃತ್ಯ, ಸಂಗೀತ, ಜಾನಪದ, ಲಲಿತಕಲೆಗೆ ಸಂಬಂಧಿಸಿದಂತೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ, ನಿರಂತರವಾಗಿ ಬೇಸಿಗೆ ಶಿಬಿರ, ಚಿಣ್ಣರ ಮೇಳವನ್ನು ಆಯೋಜಿಸಿ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸುವ ಮೂಲಕ ಮಕ್ಕಳ ರಂಗಭೂಮಿಯನ್ನು ಕೂಡ ಸದೃಢಗೊಳಿಸಿದೆ.ಸಾಂಸ್ಕೃತಿಕ ಕ್ಷೇತ್ರವಲ್ಲದೆ,ಸಂಭ್ರಮ ಸಂಸ್ಥೆಯು ಸಾಮಾಜಿಕವಾಗಿಯೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೆರೆಗಳ ಹೂಳನ್ನು ಎತ್ತುವ ಕಾರ್ಯದಲ್ಲಿ ಸುಮಾರು 35 ಕೆರೆಗಳ ಹೂಳನ್ನು ಎತ್ತಿಸಿ ಆ ಕೆರೆಗಳಿಗೆ ಮಳೆಯ ನೀರು ನೆಲೆ ನಿಲ್ಲುವಂತೆ ಮಾಡಿದ್ದು ಈ ಸಂಸ್ಥೆಯ ಸಾಧನೆಗಳಲ್ಲಿ ಒಂದು. ಸಾಮಾಜಿಕ ಅರಣ್ಯ ಯೋಜನೆಯಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳ ಹಾಗೂ ಎನ್. ಎಸ್. ಎಸ್. ವಿದ್ಯಾರ್ಥಿಗಳ ಸಹಾಯದಿಂದ ಸಾವಿರಾರು ಗಿಡಗಳನ್ನು ನೆಟ್ಟು ಅವುಗಳನ್ನು ಪಾಲನೆ ಮಾಡಿದ ಹೆಮ್ಮೆ ಸಂಭ್ರಮ ಸಂಸ್ಥೆಯದ್ದು. ಹೀಗೆ ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಕಳೆದ 25 ವರ್ಷಗಳಿಂದ ಸಕ್ರಿಯವಾಗಿರುವ ಸಂಸ್ಥೆಯು ಪ್ರಸ್ತುತ ತನ್ನ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ದಿನಾಂಕ 15.05.2025ರ ಗುರುವಾರ ಸಂಜೆ 6-00 ಗಂಟೆಗೆ ಕಲಾಗ್ರಾಮದಲ್ಲಿ ಈ ರಂಗ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಈ ಕಾರ್ಯಕ್ರಮವನ್ನು ನಾಡಿನ ಹೆಸರಾಂತ ಸಾಹಿತಿ ಡಾ. ಸಿ ಸೋಮಶೇಖರ್ ರವರು ಉದ್ಘಾಟಿಸಲಿದ್ದಾರೆ ಖ್ಯಾತ ರಂಗಸಂಘಟಕರಾದ ಶ್ರೀನಿವಾಸ್ ಜಿ ಕಪ್ಪಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ ರವೀಂದ್ರನಾಥ್ ಸಿರಿವರ,ವಿದುಷಿ ಉಷಾ ಬಸಪ್ಪ, ವಿದುಷಿ ಡಾಕ್ಟರ್ ದರ್ಶನಿ ಮಂಜುನಾಥ್, ಶ್ರೀ ವಿ ಶಿವಣ್ಣಗೌಡ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಕಾರ್ಯಕ್ರಮದ ನಂತರ ರೂಪಾಂತರ ತಂಡ ಅಭಿನಯಿಸುವ ಪರಸಂಗದ ಗೆಂಡೆತಿಮ್ಮ ನಾಟಕ ಪ್ರದರ್ಶನಗೊಳ್ಳಲಿದೆ.