ಬೆಂಗಳೂರು: ಸದ್ದುಗುಂಟೆಪಾಳ್ಯ ವ್ಯಾಪ್ತಿಯಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಅಂತಹದೆ ಮತ್ತೊಂದು ಪ್ರಕರಣ ವರದಿಯಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಸಾಗುತ್ತಿದ್ದ ಯುವತಿಯನ್ನು ಹಿಂದಿನಿಂದ ಸ್ಪರ್ಶಿಸಿ ಪರಾರಿಯಾಗಿರುವ ಘಟನೆ ಮಾರತ್ ಹಳ್ಳಿ ಠಾಣೆ ವ್ಯಾಪ್ತಿಯ ಇಕೋ ವರ್ಲ್ಡ್ ಬಳಿ ನಡೆದಿದೆ.
23 ವರ್ಷದ ಯುವತಿ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಮಾರತ್ ಹಳ್ಳಿ ಠಾಣೆ ಪೊಲೀಸರು, ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಏಪ್ರಿಲ್ 30ರಂದು ರಾತ್ರಿ 11.30ರ ಸುಮಾರಿಗೆ ಇಕೋ ವರ್ಲ್ಡ್ ಮೈನ್ ಗೇಟ್ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ ಹಿಂಭಾಗ ಸ್ಪರ್ಶಿಸಿ ಹೋಗಿದ್ದಾನೆ. ಕೆಲವೇ ನಿಮಿಷಗಳಲ್ಲಿ ಅದೇ ವ್ಯಕ್ತಿ ಪುನಃ ಹಿಂದಿನಿಂದ ಬಂದು ಮತ್ತದೇ ಅನುಚಿತ ವರ್ತನೆ ತೋರಿದ್ದಾನೆ. ಈ ಸಂದರ್ಭದಲ್ಲಿ ಸಮೀಪದಲ್ಲಿದ್ದ ಕೆಲವರ ಸಹಾಯ ಕೇಳಿದರೂ ಯಾರೂ ನೆರವಿಗೆ ಬರಲಿಲ್ಲ ಎಂದು ನೊಂದ ಯುವತಿ ದೂರಿನಲ್ಲಿ ವಿವರಿಸಿದ್ದಾರೆ.