ರಾಜ್ಯದ ಪರಿವರ್ತನೆಗೆ ಮೂಲ ಸೌಕರ್ಯ, ಮಾನವ ಸಂಪನ್ಮೂಲವೇ ಕಾರಣ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಬೆಂಗಳೂರು, ಮೇ, 9; ರಾಜ್ಯದ ಪರಿವರ್ತನೆಗೆ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲಗಳ ಬಲವೇ ಕಾರಣ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುರಾನ ಸಮೂಹ ಶಿಕ್ಷಣ ಸಂಸ್ಥೆಯಿಂದ ಪೀಣ್ಯಾ ಕ್ಯಾಂಪಸ್‌ನಲ್ಲಿ "ಬದಲಾವಣೆಗಾಗಿ ಒಗ್ಗಟ್ಟು: ಶಿಕ್ಷಣ ಮತ್ತು ಕೈಗಾರಿಕೆ - ಸುಸ್ಥಿರ ಅಭಿವೃದ್ಧಿಗೆ ಚಾಲನೆ" ಎಂಬ ವಿಷಯದ ಜಿಸಿಎಸ್ ಕಾನ್ಕ್ಲೇವ್ 2025 ರಲ್ಲಿ ಸುರಾನ ಸಂಸ್ಥೆಯ ಜಿ.ಸಿ. ಸುರಾನ ಜೀವಮಾನ ಸಾಧನೆ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, "ನನಗೆ ದೊರೆತಿರುವ ಶ್ರೇಷ್ಠ ಪ್ರಶಸ್ತಿ ಎಂದರೆ ಜನರ ಪ್ರೀತಿ. ಹುಟ್ಟಿನಿಂದ ನಾನು ಕೃಷಿಕ, ಉತ್ಸಾಹದಿಂದ ರಾಜಕಾರಣಿ ಮತ್ತು ಆಯ್ಕೆಯಿಂದ ಶಿಕ್ಷಣ ತಜ್ಞ. ಶಿಕ್ಷಣ ಎಂಬುದು ನನಗೆ ಪ್ಯಾಷನ್. ಸುರಾನ ಸಂಸ್ಥೆ ಲಾಭದ ಆಸೆಯಿಲ್ಲದೇ ರಾಜ್ಯದಲ್ಲಿ ಶಿಕ್ಷಣ ನೀಡುತ್ತಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬದಲಾವಣೆಗೆ ನಮ್ಮ ಪ್ರಬಲವಾದ ಸಂಪನ್ಮೂಲವೇ ಕಾರಣವಾಗಿದ್ದು, ಕರ್ನಾಟಕ ಮಾನವ ಸಂಪನ್ಮೂಲಗಳ ಕೇಂದ್ರವಾಗಿದೆ. ಜಗತ್ತು ಈಗ ಬೆಂಗಳೂರಿನತ್ತ ನೋಡುತ್ತಿದೆ. ಮೂರು ದಶಕಗಳ ಹಿಂದೆ, ಜಾಗತಿಕ ನಾಯಕರು ಇತರ ಭಾರತೀಯ ನಗರಗಳಿಗೆ ಭೇಟಿ ನೀಡಿ ಬೆಂಗಳೂರನ್ನು ಒಂದು ಆಯ್ಕೆಯಾಗಿ ಇಟ್ಟುಕೊಳ್ಳುತ್ತಿದ್ದರು. ಆದರೆ ಇಂದು ಅದು ಬದಲಾಗಿದೆ. ಇದೀಗ ಎಲ್ಲಾ ಜಾಗತಿಕ ನಾಯಕರು ಮೊದಲು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಜಗತ್ತಿನ ಯಾವುದೇ ದೇಶಕ್ಕೆ ಭೇಟಿ ನೀಡಿದರೂ ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ. ಬೆಂಗಳೂರು ದೇಶಕ್ಕೆ ಬಹುದೊಡ್ಡ ಶಕ್ತಿ ಎಂದು ಹೇಳಿದರು.
ಕರ್ನಾಟಕದಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ ಶಿಕ್ಷಣ ವ್ಯವಸ್ಥೆಯು ಪ್ರಮುಖ ಆಕರ್ಷಣೆಯಾಗಿದೆ. ಈ ಗುಣಮಟ್ಟದ ಶಿಕ್ಷಣವು ಬಲವಾದ ನೈತಿಕ ಮೌಲ್ಯಗಳೊಂದಿಗೆ ಸಂಯೋಜಿಸಲ್ಪಟ್ಟಿದೆ, ಇದು ನಮ್ಮ ರಾಜ್ಯವನ್ನು ಬಲಪಡಿಸಿದೆ. ರಾಜ್ಯದಲ್ಲಿ 70 ವೈದ್ಯಕೀಯ ಕಾಲೇಜುಗಳಿವೆ. ನರ್ಸಿಂಗ್ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ನುರಿತ ಮಾನವ ಶಕ್ತಿಯನ್ನು ರೂಪಿಸುತ್ತಿದ್ದೇವೆ " ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಶಾಂತಿ, ನೆಮ್ಮದಿಗಾಗಿ ಯಾಕೆ ದೇವಸ್ಥಾನಕ್ಕೆ ಹೋಗುತ್ತೇವೆ. ಧರ್ಮ ನಮಗೆ ಅತಿ ದೊಡ್ಡ ಬಲವಾಗಿದೆ. ಭಾರತ ಧಾರ್ಮಿಕವಾಗಿ ಅತ್ಯಂತ ಶ್ರೀಮಂತವಾಗಿದ್ದು, ಈ ಪರಂಪರೆಯನ್ನು ಮುಂದುವರೆಸಬೇಕು ಎಂದು ಕಿವಿ ಮಾತು ಹೇಳಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಜಿ.ಸಿ. ಸುರಾನ ಅವರು ಅರ್ಥಪೂರ್ಣ ಜೀವನ ನಡೆಸಿದ ಸಾಧಕರಾಗಿದ್ದು, ಅವರ ಸಂಸ್ಥೆ ಸಮಾಜ ಕಟ್ಟುವ ಕಾರ್ಯದಲ್ಲಿ ನಿರತವಾಗಿದೆ. ಶಿಕ್ಷಣ ಜ್ಞಾನ ನೀಡಿದರೆ, ಕೈಗಾರಿಕಾ ವಲಯ ಉದ್ಯೋಗ ನೀಡುತ್ತದೆ. ಈ ಎರಡೂ ವಲಯಗಳು ಸೂಕ್ತ ರೀತಿಯಲ್ಲಿ ಸಾಗಿದಾಗ ಬಹುದೊಡ್ಡ ಬದಲಾವಣೆ ಸಾಧ್ಯವಾಗಲಿದೆ ಎಂದರು.
ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಮ್ಮುಖದಲ್ಲಿ ಡಾ. ಮಂಜಮ್ಮ ಜೋಗತಿ (ಕರ್ನಾಟಕ ಜಾನಪದ ಅಕಾಡೆಮಿ), ಡಾ. ಕೆ. ಗಾಯತ್ರಿ ರೆಡ್ಡಿ (ಎಂಜಿಐಆರ್‌ಇಡಿ), ಕಮಲ್ ಸಾಗರ್ (ಪರಿಸರ), ಜವಾಹರ್ ಗೋವಿಂದರಾಜ್ (ಪೆಂಟಗನ್ ಗಾರ್ಮೆಂಟ್ಸ್), ಡಾ. ಕಾನ್ರಾಡ್ ಅಟಾರ್ಡ್ (ಮಾಲ್ಟಾ ವಿಶ್ವವಿದ್ಯಾಲಯ), ತರುಣ್ ಮೆಹ್ತಾ (ಅಥರ್ ಎನರ್ಜಿ) ಮತ್ತು ಆದಿತ್ಯ ಸಿರೋಯಾ (ರಿಪರ್ಪಸ್ ಗ್ಲೋಬಲ್) ಅವರಿಗೆ ಜಿ.ಸಿ. ಸುರಾನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸೇಂಟ್ ಜಾನ್ಸ್ ರಾಷ್ಟ್ರೀಯ ಆರೋಗ್ಯ ವಿಜ್ಞಾನ ಅಕಾಡೆಮಿಯ ನಿರ್ದೇಶಕ ರೆವರೆಂಡ್ ಫಾದರ್ ಜೇಸುದಾಸ್ ರಾಜಮಾಣಿಕ್ಕಂ, ಸುರಾನ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ಟ್ರಸ್ಟಿ ಡಾ. ಅರ್ಚನಾ ಸುರಾನ ಮತ್ತು ಮೈಕ್ರೋ ಲ್ಯಾಬ್ಸ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ದಿಲೀಪ್ ಸುರಾನ ಉಪಸ್ಥಿತರಿದ್ದರು.