"ಗ್ರಾಮೀಣ ಭಾಗದಲ್ಲೂ ವೈದ್ಯಕೀಯೇ ಸೇವೆಗೆ ಆದ್ಯತೆ ನೀಡಿ": ವೈದ್ಯ ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಸಲಹೆ"

varthajala
0

 ಬೆಂಗಳೂರು 06.05.2025: "ಪ್ರತಿಯೊಬ್ಬರೂ ಸಂತೋಷವಾಗಿರಬೇಕು, ಎಲ್ಲರೂ ಆರೋಗ್ಯವಾಗಿರಬೇಕು - ಇದು ವೈದ್ಯಕೀಯ ಸೇವೆಗಳ ಮುಖ್ಯ ಉದ್ದೇಶವಾಗಿದೆ. ವೈದ್ಯಕೀಯ ಸೇವೆಯನ್ನು ಮಾನವೀಯ ದೃಷ್ಠಿಯಿಂದ ಅಳವಡಿಸಿಕೊಂಡು ಪ್ರಾಮಾಣಿಕವಾಗಿ ಜನರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು" ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಕರ್ನಾಟಕದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 27 ನೇ ಘಟಿಕೋತ್ಸವದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. " ವೈದ್ಯಕೀಯ ಸೇವೆಯೇ ಶ್ರೇಷ್ಠ ಮಾನವ ಮತ್ತು ದೈವಿಕ ಸೇವೆ, ವೈದ್ಯರನ್ನು ದೇವರ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ವೈದ್ಯಕೀಯ ಪದವಿ ಪಡೆದು ವಿದ್ಯಾರ್ಥಿಗಳು ವೈದ್ಯರಾಗಿ ಸೇವೆಗಳನ್ನು ಒದಗಿಸಿದಾಗ ಮತ್ತು ಅದನ್ನು ಮಾನವೀಯ ಸೇವೆಯಾಗಿ ಮಾಡಿದಾಗ, ಖಂಡಿತವಾಗಿಯೂ ಯಶಸ್ವಿ ವೈದ್ಯರಾಗುತ್ತೀರಿ ಮತ್ತು ಭವಿಷ್ಯದಲ್ಲಿ ಶ್ರೇಷ್ಠತೆಯನ್ನು ಸಾಧಿಸುವಿರಿ" ಎಂದರು.
"ಪ್ರಾಚೀನ ಭಾರತವು ವೈದ್ಯಕೀಯ ವಿಜ್ಞಾನದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದು ನೀವು ತಿಳಿದಿರಲೇಬೇಕು, ಮಹರ್ಷಿ ಚರಕನನ್ನು ಭಾರತದಲ್ಲಿ ಆಯುರ್ವೇದ ಮತ್ತು ಔಷಧದ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ಮಹರ್ಷಿ ಸುಶ್ರುತನನ್ನು ಶಸ್ತ್ರಚಿಕಿತ್ಸೆಯ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ಸ್ವಾತಂತ್ರ್ಯದ ನಂತರ, ದೇಶವು ವೈದ್ಯಕೀಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಅಭೂತಪೂರ್ವ ಪ್ರಗತಿಯನ್ನು ಸಾಧಿಸಿದೆ, ಇದು ಭಾರತೀಯರ ಕಠಿಣ ಪರಿಶ್ರಮ, ನಾವೀನ್ಯತೆ ಮತ್ತು ಉದ್ಯಮಶೀಲತೆಯ ಪ್ರತಿಬಿಂಬವಾಗಿದೆ" ಎಂದು ತಿಳಿಸಿದರು.  
"ಪ್ರಸ್ತುತ ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನವು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಟೆಲಿಮೆಡಿಸಿನ್, ರೋಬೋಟಿಕ್ ಸರ್ಜರಿಯಂತಹ ಆವಿಷ್ಕಾರಗಳು ನಿರಂತರವಾಗಿ ಔಷಧದ ಸ್ವರೂಪವನ್ನು ಬದಲಾಯಿಸುತ್ತಿವೆ. ಹಾಗಾಗಿ, ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಡುತ್ತಿರುವ ವಿದ್ಯಾರ್ಥಿಗಳು ನಿರಂತರವಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಅಲ್ಲದೆ, ಗ್ರಾಮೀಣ ಭಾರತದ ಆರೋಗ್ಯ ವ್ಯವಸ್ಥೆಯು ಇನ್ನೂ ಬಲವಾದ ವೈದ್ಯರಿಗಾಗಿ ಕಾಯುತ್ತಿದೆ. ಇಂದು ನಮ್ಮ ಯುವ ವೈದ್ಯರು ಹಳ್ಳಿಗಳತ್ತ ಮುಖ ಮಾಡುವ ಅವಶ್ಯಕತೆ ಇದೆ. ಹಳ್ಳಿಗಳಲ್ಲಿ ವಾಸಿಸುತ್ತಿರುವ ಜನರ ಸೇವೆ ಮಾಡಲು ಯುವ ವೈದ್ಯರು ಮುಂದಾಗಬೇಕು ಎಂದು ಕರೆ ನೀಡಿದರು.
ಸಮಾಜದ ಬಗ್ಗೆ ನಿಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳಿ, ಆರೋಗ್ಯ ಜಾಗೃತಿಯನ್ನು ಹರಡಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಭಾಗವಹಿಸಿ. ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಃ ಎಂಬುದನ್ನು ಪಾಲಿಸಿ ಎಂದ ಅವರು, ಪದವಿ ಪಡೆದ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವಾಗಲಿ ಎಂದು ಹಾರೈಸಿದರು.
ಕರ್ನಾಟಕ ರಾಜ್ಯದಲ್ಲಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಪ್ರಪಂಚದಾದ್ಯಂತ ವೈದ್ಯಕೀಯ ಶಿಕ್ಷಣದಲ್ಲಿ ಗುಣಮಟ್ಟ ಮತ್ತು ಬದ್ಧತೆಗೆ ಹೆಸರುವಾಸಿಯಾಗಿದೆ.  ಡಾ.ಹೊಂಬೇಗೌಡ ಶರತ್ ಚಂದ್ರ, ಡಾ.ಗಿರೀಶ್ ರಾವ್, ಮತ್ತು ಡಾ.ಜಿ.ಟಿ.ಸುಭಾಷ್ ಅವರಿಗೆ ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಅವರ ಅತ್ಯುತ್ತಮ ಮತ್ತು ಅನುಪಮ ಕಾರ್ಯಕ್ಕಾಗಿ ಗೌರವ ಪದವಿ ನೀಡಲಾಗಿದೆ. ವೈದ್ಯಕೀಯ ಕ್ಷೇತ್ರಕ್ಕೆ ಅವರ ಸೇವೆ ನಿರಂತರವಾಗಿರಲಿ ಎಂದು ಆಶೀಸುತ್ತೇನೆಂದರು.

ಸಮಾರಂಭದಲ್ಲಿ ಸಚಿವರಾದ ಡಾ.ಶರಣ್ ಪ್ರಕಾಶ್ ಪಾಟೀಲ್, ವಿಪ್ರೋ ಲಿಮಿಟೆಡ್ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ಜಿ, ಕುಲಪತಿ ಡಾ.ಭಗವಾನ್.ಬಿ.ಸಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

Post a Comment

0Comments

Post a Comment (0)