ಬೆಂಗಳೂರು, ಮೇ1: ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಶಿಕ್ಷರ ಮಾರ್ಗದರ್ಶನ ಪ್ರಮುಖ ಪಾತ್ರವಹಿಸುತ್ತದೆ. ಇಂದು ದೇಶದಲ್ಲಿ ಉನ್ನತ ಸ್ಥಾನದಲ್ಲಿರುವವರು ಸರ್ಕಾರಿ ಶಾಲೆಗಳಿಂದ ಬೆಳೆದು ಬಂದವರು ಎಂದು ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ ಹೇಳಿದರು.
ಪುಣ್ಯ ಫೌಂಡೇಶನ್ ಟ್ರಸ್ಟ್, ಮೀಡಿಯಾ ಕನೆಕ್ಟ್ ಸಂಸ್ಥೆ ವತಿಯಿಂದ ಇಡಗೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ (ಗುಬ್ಬಿ ತಾಲೂಕು, ತುಮಕೂರು ಜಿಲ್ಲೆ) 2000 ರಿಂದ 2001ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಳ್ಳಿಹಬ್ಬವನ್ನು ಆಚರಿಸಿಕೊಂಡರು. ಇದರ ನಿಮಿತ್ತ ಇಂದು ನಗರದ ಭಾರತೀಯ ವಿದ್ಯಾಭವನದಲ್ಲಿ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕೆ.ವಿ ಪ್ರಭಾಕರ್ ಅವರು, ಪುಣ್ಯ ಫೌಂಡೇಶನ್ ಪುಣ್ಯದ ಕೆಲಸ ಮಾಡ್ತಿದೆ. ನಮ್ಮ ಜೀವನದಲ್ಲಿ ಶಿಕ್ಷಕರ ಸ್ಥಾನ ದೊಡ್ಡದು. ನನ್ನನ್ನು ತಿದ್ದಿ ತೀಡಿದ ಶಿಕ್ಷಕರಿಂದ ಇವತ್ತು ನಾನಿಲ್ಲಿ ನಿಂತಿದ್ದೇನೆ. ಸಮಾಜದ ಮೇಲೆ ಹೆಚ್ಚು ಪ್ರಭಾವ ಬೀರುವವರು ಶಿಕ್ಷಕರು. ಇತ್ತೀಚೆಗೆ ನಾನು ನನ್ನ ಶಾಲೆಗೆ ಭೇಟಿ ನೀಡಿ ನನ್ನ ಶಾಲೆಯನ್ನು ಅದ್ದೂರಿಯಾಗಿ ನವೀಕರಣ ಮಾಡ್ಸಿದೆ. ನಾವು ಓದಿದ ಶಾಲೆಯನ್ನು ಮರೆತು ಬಿಡುತ್ತೀವಿ ಆದ್ರೆ ಮರೆಯಬಾರದು. ಸರ್ಕಾರಿ ಶಾಲೆಯಲ್ಲೇ ಓದಿದವರು ಇಂದು ಮಹನೀಯಾರಾಗಿದ್ದಾರೆ ಹಾಗೂ ಉನ್ನತ ಸ್ಥಾನದಲ್ಲಿದಾರೆ. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ನಮ್ಮನ್ನು ರೂಪಿಸುವವರು ಶಿಕ್ಷಕರು. ನಮ್ಮ ಜೀವನದ ಮಾರ್ಗದರ್ಶಕರು ಶಿಕ್ಷಕರು.
ಇದೇ ವೇಳೆ ಐತಿಹಾಸಿಕ ಘಟನೆಯೊಂದನ್ನು ನೆನೆಯುತ್ತಾ ಹಿಟ್ಲರ್ ನಮ್ಮ ದೇಶವನ್ನು ಆಕ್ರಮಿಸಿದಾಗ ಆತ ಮೊದಲು ಮಾಡಿದ ಕೆಲಸವೇ ಶಿಕ್ಷಕರನ್ನು ಬಂಧಿಸುವುದು. ಏಕೆಂದ್ರೆ
ಶಿಕ್ಷಕರಿಗೆ ಸಮಾಜದ ಮೇಲೆ ಪ್ರಭಾವ ಬೀರುವ ಮತ್ತು ಜಾಗೃತಗೊಳಿಸುವ ಶಕ್ತಿ ಇದೆ ಎಂದು ಅವರಿಗೆ ತಿಳಿದಿತ್ತು. ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿಯೂ ಸಹ ಅನೇಕ ಶಿಕ್ಷಕರು ಮುಂಚೂಣಿಯಲ್ಲಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ʼನನ್ನ ಶಾಲೆ, ನನ್ನ ಜವಾಬ್ದಾರಿʼ ಉಪಕ್ರಮವನ್ನು ಶ್ಲಾಘಿಸಿದ ಅವರು, ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸುವ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದರು. ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರಿಂದ ಹಿಡಿದು ನಮ್ಮ ಸಿಎಂ ಸಿದ್ದರಾಮಯ್ಯನವರೆಗೆ ಅನೇಕ ಮಹನೀಯರು ಸರ್ಕಾರಿ ಶಾಲೆಗಳಲ್ಲಿ ಕಲಿತವರು. ಸರ್ಕಾರಿ ಶಾಲೆಗಳು ಸಾಮಾಜಿಕವಾಗಿ ಪರಿವರ್ತನೆಯ ಬೇರುಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯವಹಿಸಿದ್ದ ಬೆಂಗಳೂರಿನ ಕೆಂಗೇರಿ ಶಾಖೆಯ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು, ನಮ್ಮ ಕನ್ನಡ ಉಪನ್ಯಾಸಕರು ಶಿಸ್ತಿನಿಂದ ಪಾಠವನ್ನು ಹೇಳಿಕೊಡುತ್ತಿದ್ದರು. ಅದು ನಮ್ಮ ಜೀವನದುದ್ದಕ್ಕೂ ನೆನಪಿಡುವಂತದ್ದಾಗಿತ್ತು. ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಬೈಯುವ, ಹೊಡೆಯುವ ಹಾಗಿಲ್ಲ, ಅದಕ್ಕೆ ಸಮಾಜ ಬೆಂಬಲ ನೀಡ್ತಿರುವುದು ವಿಶಾದ. ಇಂತಹ ಸಂಧರ್ಭಗಳನ್ನು ನೋಡಿದಾಗ ಯಾವ ರೀತಿಯ ಗುರುವಂದನೆ ಸಿಗ್ತದೆ? ಏಕೆಂದ್ರೆ ಆ ರೀತಿಯ ಒಂದು ಭಯದ ವಾತಾವರಣ ನಿರ್ಮಾಣವಾಗಿದೆ. ಆಗ ಶಿಕ್ಷಕರೊಂದಿಗೆ ಕುಳಿತು ಊಟ ಮಾಡ್ತಿದ್ವಿ, ಶಿಕ್ಷಕ ವಿದ್ಯಾರ್ಥಿ ಬಾಂಧವ್ಯ ಈಗಿನ ಬದಲಾವಣೆಯ ಔಪಚಾರಿಕ ಶಿಕ್ಷಕರಿಗೆ ಈ ಸಂದೇಶ ತಲುಪಬೇಕು. ಮಕ್ಕಳು ಬಿದ್ದಾಗಲೇ ಎದ್ದೇಳುವುದನ್ನು ಕಲಿಯಲು ಸಾಧ್ಯ. ಶಿಕ್ಷಕರು ನಮಗೆ ಒಳ್ಳೆಯ ಮೌಲ್ಯಗಳನ್ನು ತುಂಬಿದ್ದರಿಂದ ಇವತ್ತು ನಾವು ಸಮಾಜಕ್ಕೆ ಸೇವೆ ನೀಡುವುದರಲ್ಲಿ ತೊಡಗಿದ್ದೇವೆ. ಈ ರೀತಿಯ ಭಾವನೆ ಎಲ್ಲಾ ವಿದ್ಯಾರ್ಥಿಗಳು ಬರುವಂತಾಗಬೇಕು. ಗುರುಗಳ ಸಂದೇಶವೇ ಸಮಾಜಕ್ಕೆ ಒಳಿತು ಮಾಡುವ ವಿದ್ಯಾರ್ಥಿಗಳನ್ನು ರೂಪಿಸುವುದು ಎಂದು ಸ್ವಾಮೀಜಿಗಳು ಹೇಳಿದರು.
ಶಿಕ್ಷಕರಿಗೆ ವಂದನೆ ಸಲ್ಲಿಸುವ ಕಾರ್ಯಕ್ರಮ ಅರ್ಥಪೂರ್ಣ ಕಾರ್ಯಕ್ರಮ. ಗುರುಗಳ ಮೇಲಿರುವ ನಂಬಿಕೆ ಹೆಚ್ಚು. ಅವರೇ ನಮ್ಮ ಮಾರ್ಗದರ್ಶಕರು. ಅವರು ನಮ್ಮ ಜೀವನದಲ್ಲಿ ಪ್ರಮುಖ ಪತ್ರವಾಹಿಸುತ್ತಾರೆ. ನಾನೂ ಕೂಡ ಆಗ ಅಧ್ಯಯನ ಮುಂದುವರೆಸಬೇಕಿತ್ತು ವೃತ್ತಿಜೀವನ ಆರಂಭಿಸಿದರಿಂದ ಅದು ಅರ್ಧಕ್ಕೆ ನಿಂತುಹೋಯಿತು. ಸ್ನೇಹಿತರ ಜೊತೆ ಸೇರಿದಾಗ ಅವ್ರೆಲ್ಲ ಒಳ್ಳೆ ಶಿಕ್ಷಣ ಪಡೆದಿರುವುದು ನೋಡಿ ನಂತರ ಅಧ್ಯಯನ ಮಾಡಿದೆ. ಅದೆಲ್ಲದಕ್ಕೂ ಮಾದರಿ ನನ್ನ ಶಿಕ್ಷಕರೇ. ಶಿಕ್ಷಕರಿಗೆ ಸಿಗುವ ಗೌರವ ಬೇರೆ ಯಾವುದೇ ಕ್ಷೇತ್ರದಲ್ಲೂ ಸಿಗಲ್ಲ. ಎಂದು ಚಲನಚಿತ್ರ ನಟಿ ಅನುಪ್ರಭಾಕರ್ ಹೇಳಿದರು.
ಈ ವೇಳೆ ವಸತಿ ಸಚಿವರ ಮಾಧ್ಯಮ ಸಲಹೆಗಾರರಾದ ಲಕ್ಷ್ಮೀ ನಾರಾಯಣ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಉತ್ತಮವಾದ ಸೌಲಭ್ಯಗಳು ಇವೆ. ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಇಂದು ಉನ್ನತ ಸ್ಥಾನಕ್ಕೆ ತಲುಪಿದ್ದಾರೆ. ಶಿಕ್ಷಕರಿಂದ ಮಾತ್ರ ವಿದ್ಯಾರ್ಥಿಗಳು ಶಿಸ್ತುಬದ್ಧ ಜೀವನವನ್ನು ಕಲಿಯಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮೀಡಿಯಾ ಕನೆಕ್ಟ್ ಸಂಸ್ಥಾಪಕರು ಹಾಗೂ ಸಿಇಓ ದಿವ್ಯಾ ರಂಗೇನಹಳ್ಳಿ ಮಾತನಾಡಿ, ಸರ್ಕಾರಿ ಶಾಲೆಗಳು ಕೊಡುವ ಅನುಭವ ಬೇರೆ ಎಲ್ಲೂ ಸಿಗುವುದಿಲ್ಲ. ಮಾಧ್ಯಮ ಕ್ಷೇತ್ರದಲ್ಲಿ ಕೆಲ್ಸ ಮಾಡುವಾಗ ಅನೇಕರೊಂದಿಗೆ ಕೆಲ್ಸ ಮಾಡಿದ್ದೇನೆ ಆಗ ಗುರುಗಳಾಗಿ ನಂಗೆ ಲಕ್ಷ್ಮೀ ನಾರಾಯಣ ಸರ್ ಮಾರ್ಗದರ್ಶನ ನೀಡಿದ್ದಾರೆ ಜೊತೆಗೆ ಗುರುಗಳ ಸ್ಥಾನದಲ್ಲಿ ನಿಂತಿದ್ದಾರೆ. ನಮಗೆ ಮಾರ್ಗದರ್ಶನ ನೀಡಿದವರನ್ನು ಗುರುಗಳಾಗಿ ನೋಡುತ್ತೇವೆ. ಪತ್ರಿಕೆಗಳನ್ನು ವಿತರಿಸುವುದರಿಂದ ಹಿಡಿದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾಗುವವರೆಗಿನ ಕೆ.ವಿ. ಪ್ರಭಾಕರ್ ಅವರ ಪ್ರಯಾಣವು ಸ್ಪೂರ್ತಿದಾಯಕವಾಗಿದೆ. ನಮ್ಮ ಬೇರುಗಳನ್ನು ಯಾವತ್ತಿಗೂ ಮರೀಬಾರ್ದು ಎನ್ನುವುದನ್ನು ನನ್ನ ಗುರುಗಳಿಂದ ಕಲಿತಿದ್ದೇನೆ. ನಾವು ಮಾತ್ರ ಮುಂದೆ ಹೋದ್ರೆ ಸಾಲದು ನಮ್ಮೊಡನೆ ಉಳಿದವರನ್ನು ಕರೆದು ಮುಂದೆ ಸಾಗಬೇಕು ಎಂಬುದು ನಮ್ಮೆಲ್ಲರ ಆಶಯವಾಗಬೇಕು ಎಂದರು.
ಗುರುವಂದನಾ ಕಾರ್ಯಕ್ರಮದ ಭಾಗವಾಗಿ 2000-2001ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಸನ್ಮಾನ ಮಾಡುವ ಮೂಲಕ ಗೌರವ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಇಡಗೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು, ಕುಟುಂಬಸ್ಥರು ಉಪಸ್ಥಿತರಿದ್ದರು.