ಬೆಂಗಳೂರು; ಹೆಗಡೆ ನಗರದ ಸಮರ್ ಇಂಟರ್ ನ್ಯಾಷನಲ್ ಇಸ್ಲಾಮಿಕ್ ಸ್ಕೂಲ್ ( ಜಮೀಯಾ ಮೊಹಮ್ಮದೀಯ ಎಜುಕೇಷನ್ ಸೊಸೈಟಿ – ಮುಂಬೈ) ಭಾರೀ ಅಕ್ರಮಗಳಲ್ಲಿ ತೊಡಗಿದ್ದು, ನೂರಾರು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಹಲವು ನೋಟಿಸ್ ಗಳನ್ನು ಈ ಸಂಸ್ಥೆಗೆ ನೀಡಿದ್ದು, ಈ ವರೆಗೆ ಪೂರಕ ದಾಖಲೆ ಮತ್ತು ಮಾಹಿತಿ ಒದಗಿಸಿಲ್ಲ. ಎಲ್ಲಾ ನೀತಿ, ನಿಯಮಗಳನ್ನು ಗಾಳಿಗೆ ತೂರಿದ್ದು, ಶಿಕ್ಷಣ ಇಲಾಖೆಗೆ ಸೆಡ್ಡು ಹೊಡೆದಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಕ್ಷಣಾ (ಶಿವರಾಮೇಗೌಡರ ಬಣ) ವೇದಿಕೆ ಚಾಮರಾಜಪೇಟೆ ಘಟಕದ ಅಧ್ಯಕ್ಷ ಚಾನ್ ಪಾಷ, ಈ ಸಂಸ್ಥೆ ನೆಲದ ಕಾನೂನು ಉಲ್ಲಂಘಿಸಿ ಹೆಜ್ಜೆ ಹೆಜ್ಜೆಗೂ ತಪ್ಪುಗಳನ್ನು ಮಾಡುತ್ತಿದೆ. ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಸೂಕ್ತ ಮಾಹಿತಿ ಒದಗಿಸುವಂತೆ ಶಿಕ್ಷಣ ಇಲಾಖೆ ಹಲವು ಬಾರಿ ನೀಡಿದ ನಿರ್ದೇಶನವನ್ನು ಗಣನೆಗೆ ತೆಗೆದುಕೊಂಡಿಲ್ಲ. ಈ ಸಂಸ್ಥೆ ಮಹಾರಾಷ್ಟ್ರ ಶಿಕ್ಷಣ ಇಲಾಖೆಯಿಂದಲೂ ಸಹ ನೋಂದಣಿಯಾಗಿಲ್ಲ ಎಂಬುದು ಮಾಹಿತಿ ಹಕ್ಕು ಕಾಯ್ದೆ ಮಾಹಿತಿಯಿಂದ ತಿಳಿದು ಬಂದಿದೆ.
ರಾಜ್ಯದಲ್ಲೂ ವಿವಿಧ ಇಲಾಖೆಗಳಿಗೆ ಸುಳ್ಳು ಮಾಹಿತಿ ನೀಡಿ, ಮೋಸ ವಂಚನೆ ಮಾಡುತ್ತಿದೆ. ಈ ಶಾಲೆಯನ್ನು “ಜಾಮಿಯಾ ಮೊಹಮ್ಮದೀಯ ಮಂನ್ಸೂರ” ಎಂಬ ಆಡಳಿತ ಮಂಡಳಿ ಹೆಸರಿನಿಂದ ನೋಂದಾಯಿಸಿದ್ದಾರೆ. ಶಿಕ್ಷಣ ಇಲಾಖೆಗೆ ಶಾಲಾ ಆಡಳಿತ ಮಂಡಳಿ ಹೆಸರನ್ನು ಜಾಮೀಯ ಮಹಮದೀಯ ಎಜಿಕೇಷನ್ ಸೊಸೈಟಿ ಎಂದು ವಿವರಗಳನ್ನು ಒದಗಿಸಿದ್ದಾರೆ ಎಂದರು.
ಒಂದು ಶಾಲೆ ನಡೆಸಲು ಮೂರು ಆಡಳಿತ ಮಂಡಳಿ ಹೆಸರಿನಿಂದ ನೋಂದಾಯಿಸಿರುವುದು ಭಾರೀ ಸಂಶಯಕ್ಕೆ ಕಾರಣವಾಗಿದೆ. ಈ ಶಾಲೆಯವರು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮದರಸಗಳಿಗೆ ಗುಣಮಟ್ಟದ ವಿಧ್ಯಾಭ್ಯಾಸ ನೀಡುವ ಯೋಜನೆಯಡಿ 2017-2018 ನೇ ಸಾಲಿನಲ್ಲಿ ಜಾಮೀಯ ಮಹಮದೀಯ ಮನ್ಸೂರ್ ಹೆಸರಿನಲ್ಲಿ ಮತ್ತು ಜಾಮೀಯ ಮಹಮ್ಮದೀಯ ಎಜುಕೇಷನ್ ಸೊಸೈಟಿ ಪರವಾಗಿ 10 ಲಕ್ಷ ರೂಗಳ ಅನುದಾನ ಪಡೆದಿದ್ದಾರೆ. ಅನುದಾನ ರಹಿತ ಶಾಲೆ ಎಂದು ನೋಂದಾಯಿಸಿದ್ದರೂ ಸರ್ಕಾರದಿಂದ ಅನುದಾನ ಪಡೆದಿರುವುದು ಭಾರೀ ವಂಚನೆಯಾಗಿದೆ ಎಂದರು.
ಶಿಕ್ಷಣ ಸಂಸ್ಥೆಯ ಕುರಿತು ಸೂಕ್ತ ಮಾಹಿತಿ ನೀಡುವಂತೆ ಜನವರಿ, ಫೆಬ್ರವರಿಯಲ್ಲಿ ಎರಡು ಬಾರಿ ನೋಟೀಸ್ ನೀಡಿದ್ದು, ಇದಕ್ಕೆ ಸಮರ್ಪಕ ಮಾಹಿತಿ ಒದಗಿಸಿಲ್ಲ. ಜೊತೆಗೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಶಾಲೆಯಲ್ಲಿ ಮಕ್ಕಳ ಮೇಲೆ ಹಲ್ಲೆ ಮತ್ತು ದೌರ್ಜನ್ಯ ಪ್ರಕರಣಗಳು ಸಹ ದಾಖಲಾಗಿವೆ. ಪ್ರತಿಯೊಂದು ಹಂತದಲ್ಲೂ ಈ ಶಾಲೆಯವರು ಅಕ್ರಮ ಚಟುವಟಿಕೆ, ವಂಚನೆ, ದಬ್ಬಾಳಿಕೆ, ದೌರ್ಜನ್ಯ, ಕಾನೂನು ಉಲ್ಲಂಘನೆ ಮತ್ತು ಭೂಕಬಳಿಕೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದ್ದರಿಂದ ಈ ಶಾಲೆಯ ಪರವಾನಗಿ ರದ್ದುಪಡಿಸಿ ಮಕ್ಕಳ ರಕ್ಷಣೆ, ಮತ್ತು ಸರ್ಕಾರಕ್ಕೆ ಆಗುತ್ತಿರುವ ಮೋಸವನ್ನು ತಡೆಯಬೇಕು ಎಂದು ಚಾನ್ ಪಾಷ ಆಗ್ರಹಿಸಿದ್ದಾರೆ.