ಬೆಂಗಳೂರು : ವಯ್ಯಾಲಿಕಾವಲ್ ನ 16ನೇ ಅಡ್ಡರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಶನಿವಾರ ಸಂಜೆ ಕು|| ರಚನಾ ಶರ್ಮಾ ಇವರಿಂದ ಊಂಜಲ್ ಸಂಗೀತ ಕಾರ್ಯಕ್ರಮ ಜರುಗಿತು.
"ಬ್ರಹ್ಮ ಕಡಿಕಿನ ಪಾದಮು" ಎಂಬ ಅನ್ನಮಾಚಾರ್ಯರ ಕೀರ್ತನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದ ರಚನಾ ಇನ್ನೆರಡು ಅನ್ನಮಾಚಾರ್ಯರ ರಚನೆಗಳಾದ "ನಾರಾಯಣ ತೇ ನಮೋ" ಮತ್ತು "ಉಯ್ಯಾಲ ಬಾಲುಡು" ಎಂಬ ಹಾಡುಗಳನ್ನು ಪ್ರಸ್ತುತ ಪಡಿಸಿ, ನಂತರ ಶ್ರೀ ರಾಘವೇಂದ್ರ ಸ್ವಾಮಿಗಳ ರಚನೆಯಾದ "ಇಂದು ಎನಗೆ ಗೋವಿಂದ" ಶ್ರೀ ವಾದಿರಾಜರ "ಎಣೆ ಯಾರೋ ನಿನಗೆ ಹನುಮಂತ ರಾಯ", "ಕಂಡೆ ಕಂಡೆನೋ ಕೃಷ್ಣ ", ಶ್ರೀ ಪುರಂದರದಾಸರ "ವೆಂಕಟರಮಣನೇ ಬಾರೋ", ಶ್ರೀ ಭದ್ರಾಚಲಂ ರಾಮದಾಸರ "ಪಲುಕೇ ಬಂಗಾರಮಾಯೆನ" ಇನ್ನೂ ಹಲವಾರು ಅಪರೂಪದ ರಚನೆಗಳನ್ನು ಪ್ರಸ್ತುತಪಡಿಸಿ, ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.
ಇವರ ಗಾಯನಕ್ಕೆ ಪಿಟೀಲು ವಾದನದಲ್ಲಿ ಶ್ರೀ ಸೀತಾರಾಮ್ ಗೋಪಿನಾಥ್, ಮೃದಂಗ ವಾದನದಲ್ಲಿ ಶ್ರೀ ಜಿ. ಲೋಕಪ್ರಿಯ ಸಾಥ್ ನೀಡಿದರು. ಟಿಟಿಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ವಂದನಾರ್ಪಣೆ ಮಾಡಿದರು.