ಕರ್ನಾಟಕ ರಾಜ್ಯ ಸರ್ಕಾರದ 2025-26ರ ಆಯವ್ಯಯ ಭಾಷಣದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಉನ್ನತ ಶಿಕ್ಷಣ ವಂಚಿತ ಅಲ್ಪಸಂಖ್ಯಾತ ವರ್ಗದ ಮುಸ್ಲಿಂ, ಕ್ರಿಶ್ಚಿಯನ್, ಸಿಕ್ಕರು, ಬುದ್ದಿಸ್ಟ್, ಜೈನರು ಮತ್ತು ಪಾರ್ಸಿ ಸಮುದಾಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರಿನ ಹಜ್ ಭವನದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ಸ್ಥಾಪನೆ ಮತ್ತು ದೂರ ಶಿಕ್ಷಣದ ಮೂಲಕ ಉನ್ನತ ಶಿಕ್ಷಣ ಯೋಜನೆಯನ್ನು ಪೆÇೀಷಿಸಿದ್ದರು. ಈ ಯೋಜನೆಯ ಅನುಷ್ಠಾನಕ್ಕಾಗಿ 2025-26ನೇ ಆರ್ಥಿಕ ವರ್ಷದಲ್ಲಿ ರೂ. 5.05 ಕೋಟಿ ಮೊತ್ತದ ಅನುದಾನವನ್ನು ಬಿಡುಗಡೆ ಮಾಡಿದ್ದರು.
ಅಲ್ಪಸಂಖ್ಯಾತ ವರ್ಗದ ಉಚಿತ ಉನ್ನತ ಶಿಕ್ಷಣ ಯೋಜನೆಯ ಅನುಷ್ಠಾನ ಕಾರ್ಯಕ್ರಮವು ಇತ್ತೀಚೆಗೆ ಬೆಂಗಳೂರಿನ ವಸಂತ ನಗರದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಮುಖ್ಯ ಆಡಳಿತ ಕಛೇರಿ ಅಜಾದ್ ಭವನದಲ್ಲಿ ಜರುಗಿತು. ವಸತಿ ಸಚಿವರಾದ ಬಿ.ಎಡ್. ಜಮೀರ್ ಅಹ್ಮದ್ ಖಾನ್‍ರವರ ಸಮ್ಮುಖದಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ನಿರ್ದೇಶಕರಾದ ಜಿಲಾನಿ ಹೆಚ್. ಮೊಕಾಶಿರವರು ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ನವೀನ್ ಕುಮಾರ್ ರವರು ಪರಸ್ಪರ ತಿಳುವಳಿಕೆ ಒಡಂಬಡಿಕೆ ಪತ್ರಕ್ಕೆ ಸಹಿ ಮಾಡಿದರು.
ಈ ಒಡಂಬಡಿಕೆ ಪ್ರಕಾರ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವಿವಿಧ ಕೋರ್ಸುಗಳಿಗೆ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿ ಅರ್ಹ ವಿದ್ಯಾರ್ಥಿಗಳ ಶೈಕ್ಷಣಿಕ ಕೋರ್ಸುಗಳ ಪ್ರವೇಶಾತಿ ಮತ್ತು ಪರ್ರೀಕ್ಷಾ ಶುಲ್ಕವನ್ನು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ನೇರವಾಗಿ ಪಾವತಿಸುತ್ತದೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ಕರ್ನಾಟಕ ಸರ್ಕಾರವು ಉಚಿತವಾಗಿ ಉನ್ನತ ಶಿಕ್ಷಣ ಒದಗಿಸಿ ಉತ್ತಮ ಬದುಕು ರೂಪಿಸಿಕೊಳ್ಳಲು ಅನುಕೂಲ ಮಾಡಿರುವುದಕ್ಕಾಗಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೊಳಿಸಿ ಅನುದಾನ ಬಿಡುಗಡೆ ಮಾಡಿರುವ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ವಸತಿ ಸಚಿವರು ಈ ಸಂದರ್ಭದಲ್ಲಿ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿಗಳಾದ Prof. ಶರಣಪ್ಪ ವಿ. ಹಲಸೆ, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳಾದ ಶ್ರೀಮತಿ ಸಲ್ಮಾ ಫಾಹಿಮ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿಗಳು, ಕುಲಸಚಿವರು (ಪರೀಕ್ಷಾಂಗ), ಡೀನ್ (ಶೈಕ್ಷಣಿಕ) ಮತ್ತು ಡೀನ್ (ಅಧ್ಯಯನ ಕೇಂದ್ರ) ಬೆಂಗಳೂರಿನ 07 ಮತ್ತು ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ, ತುಮಕೂರು ಪ್ರಾದೇಶಿಕ ಕೇಂದ್ರಗಳ ಪ್ರಾದೇಶಿಕ ನಿರ್ದೇಶಕರುಗಳು, ಅಧಿಕಾರಿ ವರ್ಗ, ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧಿಕಾರಿ ವರ್ಗದ ಸಿಬ್ಬಂದಿಗಳು ಹಾಜರಿದ್ದರು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಬೆಂಗಳೂರಿನ ಪ್ರಾದೇಶಿಕ ಕೇಂದ್ರ -01 ರ ನಿರ್ದೇಶಕರಾದ ರೋಹಿತ್ ಹೆಚ್.ಎಸ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.