ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆಯ ಪ್ರವೇಶ ಹಾಗೂ ಇನ್ನಿತರೆ ಟಿಕೆಟ್ ದರಗಳನ್ನು ಪರಿಷ್ಕರಿಸಲಾಗಿದೆ.
ಮೈಸೂರಿನ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿಗಳ ಅಧಿಕೃತ ಜ್ಞಾಪನಾ ಪತ್ರದ ಪ್ರಕಾರ ಕರ್ನಾಟಕ ಮೃಗಾಲಯ ಪ್ರಾಧಿಕಾರದ 159ನೇ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯಿಸಿರುವಂತೆ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನದ ಪ್ರವೇಶ ಶುಲ್ಕ / ಇನ್ನಿತರೆ ದರಗಳನ್ನು 2025ರ ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ದರಗಳನ್ನು ಪರಿಷ್ಕರಿಸಿ ಆದೇಶಿಸಲಾಗಿರುತ್ತದೆ.
ಮೃಗಾಲಯದಲ್ಲಿ ವಯಸ್ಕರರಿಗೆ ಅನುಮೋದಿತ ಪರಿಷ್ಕøತ ದರ ರೂ.120, ಮೃಗಾಲಯದಲ್ಲಿ 5 ರಿಂದ 12 ವಯಸ್ಸು ಮಕ್ಕಳಿಗೆ ರೂ.60, ಕಾರಂಜಿಕೆರೆಯಲ್ಲಿ ವಯಸ್ಕರರಿಗೆ 60, ಕಾರಂಜಿಕೆರೆಯಲ್ಲಿ 5 ರಿಂದ 12 ವಯಸ್ಸು ಮಕ್ಕಳಿಗೆ ರೂ.30, ಮೃಗಾಲಯ-ಕಾರಂಜಿ ಕಾಂಭೋ ವಯಸ್ಕರಿಗೆ 150, ಮೃಗಾಲಯ-ಕಾರಂಜಿ ಕಾಂಬೋ ಮಕ್ಕಳಿಗೆ ರೂ.80 ನಿಗಧಿಪಡಿಸಲಾಗಿದೆ.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿನಾಯಿತಿ ದರದಲ್ಲಿ ಪ್ರವೇಶ ಟಿಕೆಟ್, ಎಲ್.ಕೆ.ಜಿ/ಯು.ಕೆ.ಜಿ ವಿದ್ಯಾರ್ಥಿಗಳಿಗೆ ಉಚಿತವಾಗಿದ್ದು, 1 ರಿಂದ 7 ತರಗತಿ ವಿದ್ಯಾರ್ಥಿಗಳಿಗೆ ತಲಾ ರೂ. 40, 8 ರಿಂದ 12 ತರಗತಿ ವಿದ್ಯಾರ್ಥಿಗಳಿಗೆ ತಲಾ ರೂ. 50, 50 ವಿದ್ಯಾರ್ಥಿಗಳ ತಂಡಕ್ಕೆ ಇಬ್ಬರು ಶಿಕ್ಷಕರಿಗೆ ತಲಾ ರೂ. 50,
ಬ್ಯಾಟರಿ ಚಾಲಿತ ವಾಹನದ ಟಿಕೆಟ್ ವಯಸ್ಕರಿಗೆ ರೂ. 240, 5 ರಿಂದ 12 ವಯಸ್ಸು ಮಕ್ಕಳಿಗೆ ಹಾಗೂ ಹಿರಿಯ ನಾಗರೀಕರಿಗೆ ರೂ. 180 ನಿಗದಿಪಡಿಸಿದ್ದು, ಸಾರ್ವಜನಿಕರು, ಪ್ರವಾಸಿಗರು ಹಾಗೂ ಮೃಗಾಲಯ ವೀಕ್ಷಕರಿಗೆ ಈ ಮೂಲಕ ತಿಳಿಸಲಾಗಿದೆ
ಪ್ರವೇಶ ಮತ್ತು ಇನ್ನಿತರ ಟಿಕೆಟ್ ದರಗಳನ್ನು ಸರಾಸರಿ 3 ರಿಂದ 4 ವರ್ಷಗಳ ಹಿಂದೆ ನಿಗದಿಪಡಿಸಿದ ದರಗಳಾಗಿದ್ದು, ಪ್ರಸ್ತುತ ಮೃಗಾಲಯದ ದೈನಂದಿನ ನಿರ್ವಹಣೆಯ ವೆಚ್ಚಗಳು ಹೆಚ್ಚಾಗಿರುವ ಕಾರಣ ಹಾಗೂ ಇತ್ತೀಚಿನ ದಿನಗಳಲ್ಲಿ ವಿದೇಶಿ ಮೃಗಾಲಯದಿಂದ ವಿದೇಶಿ ಪ್ರಾಣಿಗಳಾದ ಗೊರಿಲ್ಲಾ, ಜಾಗ್ವಾರ್, ಆಫ್ರಿಕಾದ ಬೇಟೆ ಚಿರತೆ. ಇತ್ಯಾದಿ ಪ್ರಾಣಿಗಳು ಮೃಗಾಲಯದ ಪ್ರಾಣಿ ಸಂಗ್ರಹಣೆಗೆ ಸೇರ್ಪಡೆಗೊಂಡಿರುವುದರಿಂದ ಈ ಎಲ್ಲಾ ಪ್ರಾಣಿಗಳ ನಿರ್ವಹಣೆ ವೆಚ್ಚವು ಸಹ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮೃಗಾಲಯ ಹಾಗೂ ಕಾರಂಜಿಕೆರೆಯ ಪ್ರವೇಶ ಶುಲ್ಕದ ದರಗಳನ್ನು ಪರಿಷ್ಕರಣೆ ಮಾಡುವುದು ಸೂಕ್ತವೆಂಬ ಅಭಿಪ್ರಾಯವು ವ್ಯಕ್ತವಾಗಿರುವುದರಿಂದ 2025 ರ ಜುಲೈ 10 ರಂದು ನಡೆದ ಕರ್ನಾಟಕ ಮೃಗಾಲಯ ಪ್ರಾಧಿಕಾರದ 109ನೇ ಆಡಳಿತ ಮಂಡಳಿ ಸಭೆಯಲ್ಲಿ ಶೇ.20% ರಷ್ಟು ಹೆಚ್ಚಳ ಮಾಡಿ ದರಗಳನ್ನು ಪರಿಷ್ಕರಣೆ ಮಾಡಲು ಅನುಮೋದನೆ ನೀಡಲಾಗಿರುತ್ತದೆ ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.