ಬೆಂಗಳೂರು, ಅಕ್ಟೋಬರ್ 10, (ಕರ್ನಾಟಕ ವಾರ್ತೆ) : ಮೇಲ್ದಂಡೆ ಯೋಜನೆಯ ಮೂರನೇ ಹಂತದ ಭೂಸ್ವಾಧೀನ ಪರಿಹಾರ ದರ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆ, ಸಚಿವ ಆರ್ ಬಿ ತಿಮ್ಮಾಪೂರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಕೃತಜ್ಞತೆ ಸಲ್ಲಿಸಿರುವ ಸಚಿವ ಆರ್.ಬಿ.ತಿಮ್ಮಾಪುರ ಅವರು ಕೃμÁ್ಣ ಮೇಲ್ದಂಡೆ ಯೋಜನೆ ಹಂತ-3 ಮತ್ತು ನ್ಯಾಯಾಧೀಕರಣದ ತೀರ್ಪಿನಂತೆ ಆಲಮಟ್ಟಿ ಜಲಾಶಯದ ಎತ್ತರವನ್ನು 519.6 ಮೀ. ನಿಂದ 524.256 ಮೀ. ಗೆ ಏರಿಸಲು ಅನುಮತಿ ನೀಡಲಾಗಿದೆ. ಜಲಾಶಯದ ಎತ್ತರವನ್ನು ಹೆಚ್ಚಿಸುವುದರಿಂದ ಆಲಮಟ್ಟಿಯ ಹಿನ್ನೀರಿನಿಂದ ಸುಮಾರು 75000 ಎಕರೆಗೂ ಹೆಚ್ಚು ಜಮೀನು ಮುಳುಗಡೆಯಾಗುವ ಸಂಭವವಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಒಂದೇ ಹಂತದಲ್ಲಿ ಪೂರ್ಣಗೊಳಿಸಲು, ಒಪ್ಪಿತ ಐತೀರ್ಪಿನ ಮೂಲಕ ಭೂಸ್ವಾಧೀನದ ದರವನ್ನು ಸೆಪ್ಟೆಂಬರ್ 16 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ತಿಳಿಸಿದ್ದಾರೆ.
ಯೋಜನೆಗೆ ಮುಳುಗಡೆಯಾಗುವ ಭೂಮಿ ವ್ಯಾಪ್ತಿಯ ನೀರಾವರಿ ಜಮೀನಿಗೆ ಎಕರೆಯೊಂದಕ್ಕೆ ರೂ 40 ಲಕ್ಷ, ಒಣಭೂಮಿಯ ಎಕರೆಯೊಂದಕ್ಕೆ ರೂ 30 ಲಕ್ಷ ಪರಿಹಾರ ಒದಗಿಸಲು ತೀರ್ಮಾನಿಸಲಾಗಿದ್ದು, ಅದರಂತೆ ಇದೀಗ ಅಧಿಕೃತ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿರುವ ಸಚಿವರು ಭೂಸ್ವಾಧೀನ, ಪುನರ್‍ನಿರ್ಮಾಣ, ಪುನರ್ವಸತಿ ಕಾರ್ಯಕ್ರಮಗಳಿಗೆ ಅಗತ್ಯವಿರುವ ಹೆಚ್ಚುವರಿ ಸುಮಾರು 75 ಸಾವಿರ ಕೋಟಿ ಮೊತ್ತವನ್ನು ನಾಲ್ಕು ಆರ್ಥಿಕ ವರ್ಷದೊಳಗೆ ಭರಿಸಲು ವಾರ್ಷಿಕವಾಗಿ ಸುಮಾರು 18 ಸಾವಿರ ಕೋಟಿ ವಾರ್ಷಿಕ ಅನುದಾನವನ್ನು ಜಲಸಂಪನ್ಮೂಲ ಇಲಾಖೆಗೆ ಬಜೆಟ್‍ನಲ್ಲಿ ಒದಗಿಸುವುದಾಗಿ ಎಂದು ಆದೇಶದಲ್ಲಿ ತಿಳಿಸಲಾಗಿದೆ.
2023ರಲ್ಲಿ ಹಿಂದಿನ ಸರ್ಕಾರದಲ್ಲಿ ಪರಿಹಾರದ ಮೊತ್ತ ಒಣಭೂಮಿಗೆ ರೂ 20 ಲಕ್ಷ, ನೀರಾವರಿಗೆ ರೂ 24 ಲಕ್ಷ ತೀರ್ಮಾನ ಮಾಡಿತ್ತು. ಆದರೆ ರೈತರು ಒಪ್ಪಿರಲಿಲ್ಲ. ಹಾಗಾಗಿ, ನಮ್ಮ ಸರ್ಕಾರ ಬಂದ ಬಳಿಕ ರೈತ ಸಂಘಟನೆಗಳು, ಎಲ್ಲಾ ಪಕ್ಷದ ಶಾಸಕರೊಂದಿಗೆ ಉಪ ಮುಖ್ಯಮಂತ್ರಿಗಳು, ಮುಖ್ಯಮಂತ್ರಿಗಳು ಹಲವು ಸಭೆ ನಡೆಸಿ, ಅಭಿಪ್ರಾಯ ಕ್ರೋಢೀಕರಿಸಲಾಗಿತ್ತು. ಎಲ್ಲರ ಅಭಿಪ್ರಾಯದಂತೆ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ತೀರ್ಮಾನ ಮಾಡಲಾಗಿತ್ತು. ಅದರಂತೆ 9-10-2025 ರಂದು ಅಧಿಕೃತ ಆದೇಶ ಹೊರಡಿಸುವ ಮೂಲಕ ನೀಡಿದ ಭರವಸೆ ಈಡೇರಿಸಲಾಗಿದೆ.
ನುಡಿದಂತೆ ನಡೆಯೋದು ನಮ್ಮ ಸಿದ್ದರಾಮಯ್ಯರ ನೇತೃತ್ವದ ಸರ್ಕಾರ. ಇದೊಂದು ಐತಿಹಾಸಿಕ ತೀರ್ಮಾನವಾಗಿದೆ. ಜನರಿಗೆ ನೀಡಿದ್ದ ಭರವಸೆಯಂತೆ ಈಡೇರಿಸಲಾಗುತ್ತಿದೆ. ಯುಕೆಪಿಯಿಂದ ಸಂತ್ರಸ್ತರಾಗಲಿರುವ ಜನತೆ ತಮ್ಮ ಪರಿಕಲ್ಪನೆಯ ಜೀವನವನ್ನು ಕಟ್ಟಿಕೊಳ್ಳಲು ಪಕ್ಷಿಯಂತೆ ಕಾಯುತ್ತಿದ್ದರು. ಅವರ ಹಲವು ವರ್ಷಗಳ ಹೋರಾಟ ಸಾಕಾರಗೊಳಿಸಿದ್ದು ನಮ್ಮ ಸರ್ಕಾರ. ಅತ್ಯಂತ ಮಾನವೀಯತೆಯ ದೃಷ್ಟಿಯಿಂದ ಜನಪರ ನಿರ್ಣಯ ಕೈಗೊಂಡಿರುವುದು ನಮ್ಮ ರೈತ ಬಾಂಧವರಿಗೆ ಸಂತಸ ತಂದಿದೆ. ಈ ಚಾರಿತ್ರಿಕ ತೀರ್ಮಾನ ಕೈಗೊಂಡ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು, ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರೂ ಆದ ಡಿಕೆ ಶಿವಕುಮಾರ್, ಸಚಿವ ಸಂಪುಟದ ಎಲ್ಲಾ ಸಚಿವರು ಸೇರಿದಂತೆ ಇದಕ್ಕೆ ಕಾರಣಿಕೃತರಾದ ಎಲ್ಲರಿಗೂ ಧನ್ಯವಾದಗಳನ್ನು ಅಬಕಾರಿ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಅರ್ಪಿಸಿದ್ದಾರೆ.