ಪಿಡಿಪಿಎಸ್ ಅಡಿ ಈರುಳ್ಳಿ ಖರೀದಿ ಪ್ರಯತ್ನ: ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ

varthajala
0

 ಬೆಂಗಳೂರು, ಅಕ್ಟೋಬರ್ 24 (ಕರ್ನಾಟಕ ವಾರ್ತೆ): ಈರುಳ್ಳಿ ಬೆಲೆ ಕುಸಿತ ಹಿನ್ನೆಲೆಯಲ್ಲಿ ಪಿಡಿಪಿಎಸ್ (ಪ್ರೈಸ್ ಡಿಪಿಷಿಯನ್ಸಿ ಪ್ರೊಕ್ಯೂರ್‍ಮೆಂಟ್ ಸ್ಕೀಂ) ಅಡಿಯಲ್ಲಿ ಖರೀದಿಸುವ ಪ್ರಯತ್ನ ನಡೆದಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಸುರಿದ ಭಾರೀ ಮಳೆಗೆ ಕಟಾವಿಗೆ ಬಂದಿರುವ ಈರುಳ್ಳಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಕಳೆದ ಸಾಲಿನ ಸರಾಸರಿ ಈರುಳ್ಳಿ ಮಾರುಕಟ್ಟೆ ಬೆಲೆಗೆ ಹೋಲಿಕೆ ಮಾಡಿದರೆ ಪ್ರಸಕ್ತ ಸಾಲಿನಲ್ಲಿ ಮಾರಾಟ ದರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಇದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಪಿಡಿಪಿಎಸ್ ಅಡಿಯಲ್ಲಿ ಈರುಳ್ಳಿ ಖರೀದಿ ಮಾಡಲು ಅನುಮತಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಸೇರಿ ಒಟ್ಟು 2.05 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದ್ದು, ವಾರ್ಷೀಕ ಉತ್ಪನ್ನ 27.00 ಲಕ್ಷ ಮೆಟ್ರಿಕ್ ಟನ್‍ಗಳಾಗಿದೆ. ಪ್ರಮುಖವಾಗಿ ವಿಜಯಪುರ, ಚಿತ್ರದುರ್ಗ, ಬಾಗಲಕೋಟೆ, ವಿಜಯ ನಗರ, ಬೆಳಗಾವಿ, ಧಾರವಾಡ, ಕೊಪ್ಪಳ, ಗದಗ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತಿದೆ.
ಅತಿಯಾದ ಮಳೆಗೆ ಕಟಾವಿಗೆ ಬಂದ ಈರುಳ್ಳಿ ಬೆಳೆ ಹಾನಿಯಾಗಿ, ದಿಡೀರ್ ಬೆಲೆ ಕುಸಿತಗೊಂಡಿದ್ದು, ಜಮೀನಿನಲ್ಲೇ ಈರುಳ್ಳಿ ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸಭೆ ಸೇರಿ ಚರ್ಚೆ ಮಾಡಿದ್ದು, ಎಂಐಎಸ್ (ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ) ಅಡಿಯಲ್ಲಿ ಖರೀದಿಸಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಶಿಫಾರಸ್ಸು ಮಾಡಿದ್ದರು.

ಆದರೆ ಪಿಡಿಪಿಎಸ್‍ಅಡಿ ಈರುಳ್ಳಿ ಖರೀದಿ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ  ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

Post a Comment

0Comments

Post a Comment (0)