ಬೆಂಗಳೂರು, ಅಕ್ಟೋಬರ್ 17, (ಕರ್ನಾಟಕ ವಾರ್ತೆ): ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಯರಿಗೆ ಸೀರೆ ಪೂರೈಕೆ ಮಾಡುವ ಆದೇಶವನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೀಡಬೇಕು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ತಲಾ ಎರಡು ಸೀರೆಗಳಂತೆ ಒಟ್ಟ 2,79,668 ಸೀರೆಗಳನ್ನು ಐಸಿಡಿಎಸ್ ಯೋಜನೆ ಅಡಿ ಕೆಟಿಪಿಪಿ ನಿಯಮಗಳ ಅನ್ವಯ ಖರೀದಿಸಲು ಉದ್ದೇಶಿಸಿರುವುದಾಗಿ ತಿಳಿದು ಬಂದಿದೆ.
ಈ ಸೀರೆಗಳ ಪೂರೈಕೆ ಆದೇಶವನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ನೀಡಿದರೆ ನೇಕಾರರಿಗೆ ಉದ್ಯೋಗ ದೊರಕಿಸುವುದರ ಜೊತೆಗೆ ನಷ್ಟದಲ್ಲಿರುವ ನಿಗಮದ ಪುನಶ್ಚೇತನಕ್ಕೂ ನೆರವಾಗಲಿದೆ ಎಂದು ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ವಿನಂತಿ ಮಾಡಿದ್ದಾರೆ.
ಸರ್ಕಾರದ ವಿವಿಧ ಇಲಾಖೆಗಳಿಗೆ ಅಗತ್ಯವಾದ ಬಟ್ಟೆ ಮತ್ತು ಸೀರೆಗಳನ್ನು ಕೈಮಗ್ಗ ಮತ್ತು ಜವಳಿ ಇಲಾಖೆ ಅಡಿಯಲ್ಲಿ ಕಾರ್ಯನಿರ್ವವಹಿಸುತ್ತಿರುವ ನಿಗಮಗಳಿಂದ ಖರೀದಿ ಮಾಡಲು ಈ ಹಿಂದೆ ಆದೇಶ ಮಾಡಲಾಗಿದೆ.
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ ಈಗಾಗಲೇ ವಿನಾಯಿತಿ ನೀಡಿ ಆದೇಶಿಸಿರುವುದರಿಂದ ಮತ್ತು ಕೆಎಚ್‍ಡಿಸಿ ಬಲವರ್ಧನೆ ಹಾಗೂ ನೇಕಾರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳಿಗೆ ಬೇಡಿಕೆಯ ಪ್ರತಿಶತ 75ರಷ್ಟು ಸಮವಸ್ತ್ರಗಳನ್ನು ಕಡ್ಡಾಯವಾಗಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದಿಂದ ಪೂರೈಕೆ ಮಾಡಲು ಆದೇಶ ಹೊರಡಿಸಿವೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.