ಬೆಂಗಳೂರು, ನವಂಬರ್ 7 (ಕರ್ನಾಟಕ ವಾರ್ತೆ): ಬ್ರಾಹ್ಮಣ ಸಮುದಾಯದವರು ಸ್ವಯಂ ಉದ್ಯೋಗ ಕೈಗೊಳ್ಳಲು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಮೂಲಕ “ವಿಪ್ರ ಸ್ವ ಉದ್ಯಮ ನೇರ ಸಾಲ” ಯೋಜನೆಯಲ್ಲಿ ರೂ. 2 ಲಕ್ಷದ ವರೆಗೆ ಸಾಲ ನೀಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಕರ್ನಾಟಕ ರಾಜ್ಯ ಅಭಿವೃದ್ಧಿ ಮಂಡಳಿ ವತಿಯಿಂದ ಇಂದು ಬಬ್ಬೂರುಕಮ್ಮೆ ಸೇವಾ ಸಮಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತತ್ವಜ್ಞಾನಿಗಳ ದಿನಾಚರಣೆ “ಆಚಾರ್ಯತ್ರಯರ ಜಯಂತ್ಯುತ್ಸವ” ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ 12 ಸಾಧಕರಿಗೆ ಪ್ರಶಸ್ತಿ ನೀಡಿ ಮಾತನಾಡಿದ ಸಚಿವರು, ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಯ ಫಲಾನುವಿಗಳಿಗೆ ಇಂದು ಸಾಂಕೇತಿಕವಾಗಿ ಮಂಜೂರಾತಿ ಪತ್ರ ವಿತರಣೆ ಮಾಡಲಾಗಿದೆ. ಈ ಯೋಜನೆಯಡಿ ಸಾಲ ಪಡೆದವರಿಗೆ ಶೇ.20ರಷ್ಟು ಸಹಾಯಧನ ಸಿಗಲಿದೆ. ಉಳಿದ ಮೊತ್ತವನ್ನು ಶೇ.4ರ ಬಡ್ಡಿ ದರದಲ್ಲಿ 34 ಕಂತುಗಳಲ್ಲಿ ಕಟ್ಟಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಸರ್ಕಾರವು ಪ್ರತಿ ವರ್ಷ ಅನುದಾನ ಬಿಡುಗಡೆ ಮಾಡುತ್ತಿದೆ. ಸರ್ಕಾರ ಬ್ರಾಹ್ಮಣರ ಪರವಾಗಿಯೂ ಕೆಲಸ ಮಾಡುತ್ತಿದೆ. ಬ್ರಾಹ್ಮಣ ಸಮುದಾಯ ಸಮಾಜದ ಪ್ರತಿಯೊಬ್ಬರಿಗೂ ಒಳ್ಳೆಯದಾಗಬೇಕು. ಯಾವುದೇ ಸಮುದಾಯ, ಜಾತಿ, ಜನಾಂಗ, ಭಾಷೆ ಇರಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಬ್ರಾಹ್ಮಣರ ಸಮುದಾಯದಲ್ಲಿಯೂ ಸಹ ಆರ್ಥಿಕವಾಗಿ ಹಿಂದುಳಿದವರು ಇದ್ದಾರೆ. ಇದನ್ನು ಸರ್ಕಾರ ಗುರುತಿಸಿರುವುದರಿಂದ ಸರ್ಕಾರದ ದೃಷ್ಟಿಕೋನದಲ್ಲಿ ಇದ್ದೇವೆ ಎಂದು ಬ್ರಾಹ್ಮಣ ಸಮಾಜಕ್ಕೆ ಆತ್ಮಸ್ಥೈರ್ಯ ಸಿಗುತ್ತಿದೆ ಎಂದರು.
ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಸಗೋಡು ಜಯರಾಮ ಅವರು ಸರ್ಕಾರ ರೂಪಿಸುವ ಯೋಜನೆಗಳ ಬಗ್ಗೆ ರಾಜ್ಯಾದ್ಯಂತ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದ್ದಾರೆ ಎಂದರು.
ಜಾತಿಗಣತಿಯ ಬಗ್ಗೆ ತಪ್ಪು ಗ್ರಹಿಕೆ ಬೇಡ. ಪ್ರತಿ ಸಮಾಜ ಹೇಗಿದೆ ಎಂಬ ವೈಜ್ಞಾನಿಕ ಮಾಹಿತಿ ಪಡೆಯಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಯೋಜನೆ ಮಾಡಲು ಹಾಗೂ ಕಾರ್ಯಕ್ರಮ ರೂಪಿಸಲು ವೈಜ್ಞಾನಿಕ ಮಾನದಂಡ ಸಿಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಅವರು ಚಾಣಕ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡುತ್ತಾ, ಬ್ರಾಹ್ಮಣ ಸಮುದಾಯದ ಪ್ರತಿಭಾವಂತ ಪದವೀಧರರು ನಾಗರಿಕ ಸೇವೆಗಳಾದ ಐಎಎಸ್/ಕೆಎಎಸ್ ಪರೀಕ್ಷೆಗಳನ್ನು ಬರೆದು ಆಡಳಿತಾತ್ಮಕ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಉತ್ತೇಜನ ನೀಡುವ ಸಲುವಾಗಿ “ಚಾಣಕ್ಯ ಆಡಳಿತ” ತರಬೇತಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.
ಈ ಯೋಜನೆಯಲ್ಲಿ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಲು 2025-26ನೇ ಸಾಲಿನಲ್ಲಿ ಪ್ರವೇಶಾತಿ ಪಡೆದು, ಪಾವತಿಸಲಾದ ತರಬೇತಿ ಶುಲ್ಕದ ಮೊತ್ತದಲ್ಲಿ ಗರಿಷ್ಠ ಒಂದು ಲಕ್ಷ ರೂ.ಗಳಿಗೆ ಮಿತಿಗೊಳಿಸಿ ಡಿಬಿಟಿ ಮೂಲಕ ನೇರವಾಗಿ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಆದಿಗುರು ಶ್ರೀ ಶಂಕರಾಚಾರ್ಯರ ಕುರಿತು ಸಾಹಿತಿಗಳಾದ ಡಾ. ಬೆಳವಾಡಿ ಮಂಜುನಾಥ ರವರು, ಭಕ್ತಿ ಮಾರ್ಗದ ಪ್ರವರ್ತಕರಾದ ಶ್ರೀ ರಾಮಾನುಜಾಚಾರ್ಯರ ಕುರಿತು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಪ್ರಾಚೀನ ಇತಿಹಾಸ ಮುಖ್ಯಸ್ಥರಾದ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್ ಹಾಗೂ ಸಂಗೀತ ಮತ್ತು ಭಕ್ತಿಮಾರ್ಗದ ಪ್ರವರ್ತಕರಾದ ಶ್ರೀ ಮಧ್ವಾಚಾರ್ಯರ ಕುರಿತು ನಿವೃತ್ತ ಪಾಂಶುಪಾಲರು ಹಾಗೂ ಪ್ರಸಿದ್ಧ ವಿದ್ವಾಂಸರಾದ ಡಾ.ವ್ಯಾಸನಕೆರೆ ಪ್ರಭಂಜನಾಚಾರ್ಯ ರವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಅಸಗೋಡು ಜಯರಾಮ ಹಾಗೂ ಮಂಡಳಿಯ ನಿರ್ದೇಶಕರು, ಪ್ರಶಸ್ತಿಗೆ ಭಾಜನರಾದ ಸಾಧಕರು, ಬ್ರಾಹ್ಮಣ ಸಮುದಾಯದವರು ಉಪಸ್ಥಿತರಿದ್ದರು.