800 ಸಂಘಟನೆಗಳಿಂದ ಸನಾತನ ಸಂಸ್ಕೃತಿ ರಕ್ಷಣೆಯ ದೃಢ ನಿರ್ಧಾರ !

varthajala
0

 ನವ ದೆಹಲಿ - ದೇಶದ ರಾಜಧಾನಿಯ ಭಾರತ್ ಮಂಡಪಮ್ ನಲ್ಲಿ  ನಡೆದ ಎರಡು ದಿನಗಳ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ಕ್ಕೆ ದೇಶದಾದ್ಯಂತ 3 ಸಾವಿರಕ್ಕೂ ಹೆಚ್ಚು ಹಿಂದೂಗಳು ಹಾಗೂ 8೦೦ಕ್ಕೂ ಹೆಚ್ಚು ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಮಸ್ತ ಸಂತರು-ಮಹಂತರು, ಗಣ್ಯರು, ಮಂತ್ರಿಗಳು, ಉದ್ಯಮಿಗಳು, ನ್ಯಾಯವಾದಿಗಳು, ಚಿಂತಕರು, ರಕ್ಷಣಾ ತಜ್ಞರು ಮುಂತಾದವರು ಸನಾತನ ರಾಷ್ಟ್ರ ಸ್ಥಾಪನೆಗಾಗಿ ಸಂಸ್ಕೃತಿ ರಕ್ಷಣೆಯ ದೃಢ ನಿರ್ಧಾರ ವ್ಯಕ್ತಪಡಿಸಿದರು, ಜೊತೆಗೆ ‘ಸುರಕ್ಷೆ, ಸಂಸ್ಕೃತಿ ಮತ್ತು ಶೌರ್ಯ’ ಈ ವಿಷಯಗಳ ಕುರಿತಾದ ಉಪದೇಶ ಮತ್ತು ಶಸ್ತ್ರಾಸ್ತ್ರ ಪ್ರದರ್ಶನವು ಎಲ್ಲರಲ್ಲಿ ಶೌರ್ಯದ ಸ್ಫೂರ್ತಿಯನ್ನು ಮೂಡಿಸಿತು.

ನಮ್ಮ ಭಾರತವು ‘ಹಿಂದೂ  ರಾಷ್ಟ್ರ’ವಲ್ಲ, ‘ಪ್ರಜಾಸತ್ತಾತ್ಮಕ ಹಿಂದೂ ರಾಷ್ಟ್ರ’ ಆಗಲಿದೆ! - ಸ್ವಾಮಿ ವಿಜ್ಞಾನಾನಂದಜಿ
ಈ ಮಹೋತ್ಸವದ ಸಮಾರೋಪದ ಸಮಯದಲ್ಲಿ ನಡೆದ ಸನಾತನ ರಾಷ್ಟ್ರ ಸಂಕಲ್ಪ ಸಂತಸಭೆಯಲ್ಲಿ ‘ಹಿಂದೂಗಳ ಸಾಂಸ್ಕೃತಿಕ ಘೋಷಣಾ ಪತ್ರ’ ಎಂಬ ವಿಷಯದ ಬಗ್ಗೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ತಿನ ಸಹ ಕಾರ್ಯದರ್ಶಿ ಸ್ವಾಮಿ ವಿಜ್ಞಾನಾನಂದಜಿ ಅವರು, ಯಾವ ರಾಷ್ಟ್ರವು ಹಿಂದೂ ಜೀವನ ಪದ್ಧತಿಯನ್ನು ಸ್ವೀಕರಿಸುತ್ತದೆಯೋ, ಅದು ಹಿಂದೂ ರಾಷ್ಟ್ರವಾಗುತ್ತದೆ. ಸ್ವಾತಂತ್ರ್ಯಪೂರ್ವ ಭಾರತವು ಸಮೃದ್ಧವಾಗಿತ್ತು. ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತದ ವರೆಗಿನ ಸಂಪೂರ್ಣ ಭೂಪ್ರದೇಶವು ಹಿಂದುಗಳ ಅಧೀನದಲ್ಲಿತ್ತು. ಹಿಂದಿನ ಕಾಲದಲ್ಲಿ ಈ ಎಲ್ಲಾ ಪ್ರದೇಶವನ್ನು ನಾವು ಕಳೆದುಕೊಂಡಿದ್ದೇವೆ. ಇಂದು ಹಿಂದೂಗಳ ಆಡಳಿತ ಕೇವಲ ಭಾರತದ ಕೆಲವು ರಾಜ್ಯಗಳಲ್ಲಿ ಮಾತ್ರ ಇದೆ. ಆದ್ದರಿಂದ ಅವರು ಕೇವಲ ದಾಂಡಿಯಾ, ಹೋಳಿ ಅಥವಾ ದೀಪಾವಳಿಯಂತಹ ಹಬ್ಬಗಳಲ್ಲಿ ತೃಪ್ತರಾಗದೇ ಉಳಿದ ಪ್ರದೇಶಗಳನ್ನು ಗೆಲ್ಲಲು ಪ್ರಯತ್ನಿಸಬೇಕು. ಇದರಿಂದ ನಮ್ಮ ದೇಶವು ಕೇವಲ ಹಿಂದೂ ರಾಷ್ಟ್ರ ಮಾತ್ರವಲ್ಲ, ‘ಪ್ರಜಾಸತ್ತಾತ್ಮಕ ಹಿಂದೂ ರಾಷ್ಟ್ರ’ವಾಗಲಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ಚಾರಿತ್ರ್ಯ ರೂಪಿಸುವ ಶೈಕ್ಷಣಿಕ ನೀತಿಯನ್ನು ಜಾರಿಗೊಳಿಸಬೇಕು! - ಪೂ. ಪವನ್ ಸಿನ್ಹಾ ಗುರೂಜಿ
ಚಾರಿತ್ರ್ಯವಂತ ಜನರು ಮಾತ್ರ ಧರ್ಮಯುದ್ಧ ಮಾಡಬಹುದು. ಯಾರಲ್ಲಿ ಚಾರಿತ್ರ್ಯವಿಲ್ಲವೋ ಅವರು ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ. ಭಾರತವು ಚಾರಿತ್ರ್ಯವನ್ನು ಹೊಂದಿರುವುದರಿಂದ ಪಾಕಿಸ್ತಾನದ ವಿರುದ್ಧದ ಅನೇಕ ಸಣ್ಣ-ದೊಡ್ಡ ಯುದ್ಧಗಳಲ್ಲಿ ಭಾರತಕ್ಕೆ ಯಶಸ್ಸು ಸಿಕ್ಕಿತು. ಚಾರಿತ್ರ್ಯ ರೂಪಿಸುವುದು ಸುಲಭವಲ್ಲ ಮತ್ತು ಚಾರಿತ್ರ್ಯಕ್ಕೂ ಶಿಕ್ಷಣಕ್ಕೂ ಯಾವುದೇ ಸಂಬಂಧವಿಲ್ಲ. ಅನೇಕ ಉನ್ನತ ವಿದ್ಯಾಭ್ಯಾಸ ಮಾಡಿದವರು ಭ್ರಷ್ಟಾಚಾರಿಗಳಾಗಿದ್ದಾರೆ. ಪ್ರಸ್ತುತ ಶಿಕ್ಷಣವು ಯುವಕರಲ್ಲಿ ಚಾರಿತ್ರ್ಯವನ್ನು ಮೂಡಿಸಲು ಸಾಧ್ಯವಿಲ್ಲ, ಆದ್ದರಿಂದ ಕೇಂದ್ರ ಸರ್ಕಾರವು ಚಾರಿತ್ರ್ಯ ರೂಪಿಸುವ ಶೈಕ್ಷಣಿಕ ನೀತಿಯನ್ನು ಜಾರಿಗೆ ತರಬೇಕು ಎಂದು ‘ಪಾವನ ಚಿಂತನಧಾರ ಆಶ್ರಮ’ದ ಸಂಸ್ಥಾಪಕರಾದ ಪೂ. ಪವನ್ ಸಿನ್ಹಾ ಗುರೂಜಿ ಅವರು ಕರೆ ನೀಡಿದರು.

ಸಂವಿಧಾನದಲ್ಲಿ ಈ ತಾರತಮ್ಯವೇಕೆ ? - ಹಿಂದು ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ
ಇಂದು ಭಾರತೀಯ ಸಂವಿಧಾನದ ಪ್ರಸ್ತಾವನೆಯಲ್ಲಿ ‘ಈ ದೇಶವು ಸೆಕ್ಯುಲರ್ ಆಗಿದೆ’ ಎಂದು ಉಲ್ಲೇಖಿಸಲಾಗಿದೆ; ಆದರೆ ಸಂವಿಧಾನದ 25 ನೇ ಕಲಮಿನಿಂದ ಪಂಥದ ಆಧಾರದ ಮೇಲೆ ತಾರತಮ್ಯ ಮಾಡಲಾಗಿದೆ. ಅಂದರೆ ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕ ನಿಯಮಗಳು, ಪ್ರತ್ಯೇಕ ಅನುಬಂಧಗಳು ಇತ್ಯಾದಿಗಳನ್ನು ಮಾಡಲಾಗಿದೆ. ಸೆಕ್ಯುಲರ್ ದೇಶದಲ್ಲಿ ಇಂತಹ ತಾರತಮ್ಯದ ಅಗತ್ಯವೇನು?
ಶಂಖನಾದ ಮಹೋತ್ಸವಕ್ಕೆ ಬಂದವರು ಇಂದಿನಿಂದ ತಮ್ಮ ತಮ್ಮ ಕ್ಷೇತ್ರದಲ್ಲಿ ಸನಾತನ ರಾಷ್ಟ್ರದ ಸ್ಥಾಪನೆಯ ಕಾರ್ಯವನ್ನು ಮಾಡುವ ಸುಸಂಕಲ್ಪ ಮಾಡಬೇಕು ಎಂದು ಛತ್ತೀಸ್‌ಗಢದ ‘ಶದಾಣಿ ದರಬಾರ’ದ ಪೀಠಾಧೀಶ್ವರರಾದ ಪ.ಪೂ. ಯುಧಿಷ್ಠಿರಲಾಲ್ ಮಹಾರಾಜರು ಕರೆ ನೀಡಿದರು.

 ಹಾಗೆಯೇ, ಹಿಂದೂ ಜನಜಾಗೃತಿ ಸಮಿತಿಯ ಧರ್ಮಪ್ರಚಾರಕ ಸದ್ಗುರು ನೀಲೇಶ ಸಿಂಗಬಾಳ ಅವರು, ‘ನ ಮೇ ಭಕ್ತಃ ಪ್ರಣಶ್ಯತಿ ।’ ಅಂದರೆ ‘ನನ್ನ ಭಕ್ತನ ನಾಶ ಆಗುವುದಿಲ್ಲ’ ಎಂದು ಭಗವಂತನ ವಚನವಿದೆ. ಆದ್ದರಿಂದ ಆಪತ್ಕಾಲದಿಂದ ರಕ್ಷಣೆಗಾಗಿ ವಿವಿಧ ಸುರಕ್ಷಾತ್ಮಕ ಉಪಾಯಗಳೊಂದಿಗೆ ಈಶ್ವರನ ಭಕ್ತರಾಗುವುದು ಅವಶ್ಯಕ ಎಂದು ಹೇಳಿದರು. ಈ ಮಹೋತ್ಸವವು ‘ವಂದೇ ಮಾತರಂ’ ಗೀತೆಯೊಂದಿಗೆ ಸಂಪನ್ನವಾಯಿತು. ಈ ಮಹೋತ್ಸವಕ್ಕೆ ಭಾರತ ಸರ್ಕಾರದ ಕಲೆ, ಸಂಸ್ಕೃತಿ ಮತ್ತು ಭಾಷಾ ವಿಭಾಗ, ಸಾಂಸ್ಕೃತಿಕ ಸಚಿವಾಲಯ ಹಾಗೂ ದೆಹಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಕರಿಸಿದೆ.

Post a Comment

0Comments

Post a Comment (0)