ಬೆಂಗಳೂರು: ಜಿಬಿಎ ಉತ್ತರ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಬಿಬಿಎಂಪಿ ಸಂಯುಕ್ತ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ವತಿಯಿಂದ ವಿಜ್ಞಾನ ವಿಷಯದ ಅರಿವು ಹಾಗೂ ನವೀನ ಚಿಂತನೆಗೆ ಉತ್ತೇಜನ ನೀಡುವ ಉದ್ದೇಶದಿಂದ ವಿಜ್ಞಾನ ಮೇಳವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ಸಮಾಜ ಸೇವಕರಾದ ಎ.ಜಿ. ಆಂಟನಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷರಾದ ಡಾ. ವೈ. ಮರಿಸ್ವಾಮಿ, ಹಿರಿಯ ಸಹಾಯಕ ನಿರ್ದೇಶಕರಾದ ಮುನಿಸ್ವಾಮಪ್ಪ, ಶಿಕ್ಷಣ ಹಾಗೂ ವಿಷಯ ಪರೀಕ್ಷಕರಾದ ಹೆಚ್.ಜೆ. ಕುಮಾರ್, ಬಾಳಪ್ಪ ವೈ., ಶ್ರೀಮತಿ ಭುವನೇಶ್ವರಿ, ಕ್ರೈ ಸಂಸ್ಥೆಯ ಶ್ರೀಮತಿ ಶರಣ್ಯ, ಸತೀಶ್, ವ್ಯವಸ್ಥಾಪಕರಾದ ಸೋಮಶೇಖರ್ ಎನ್.ಎಸ್. ಅವರುಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ವಿಜ್ಞಾನ ಮೇಳಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅತಿಥಿಗಳು, ಜ್ಞಾನ ಮತ್ತು ವಿಜ್ಞಾನ ಒಂದಾಗಿ ಸೇರುವಾಗ ನೂತನ ಆವಿಷ್ಕಾರಗಳು ಸಾಧ್ಯವಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಕೈಗಾರಿಕೆ, ವೈದ್ಯಕೀಯ ಹಾಗೂ ಕೃಷಿ ಕ್ಷೇತ್ರಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆಯಿಂದ ಆಗುವ ಮಹತ್ವದ ಪ್ರಯೋಜನಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಅಗತ್ಯವೆಂದು ಹೇಳಿದರು.
ಯುವ ಪೀಳಿಗೆಯಲ್ಲಿ ವಿಜ್ಞಾನ ವಿಷಯದ ಮೇಲಿನ ಆಸಕ್ತಿಯನ್ನು ಬೆಳೆಸಲು ಹಾಗೂ ಅವರಲ್ಲಿರುವ ಸೃಜನಶೀಲ ಪ್ರತಿಭೆಯನ್ನು ಗುರುತಿಸಿ ಉತ್ತೇಜಿಸುವ ನಿಟ್ಟಿನಲ್ಲಿ ಇಂತಹ ವಿಜ್ಞಾನ ಮೇಳಗಳು ಅತ್ಯಂತ ಉಪಯುಕ್ತವಾಗಿವೆ. ದೇಶದ ಅಭಿವೃದ್ಧಿಗೆ ಯುವ ವಿಜ್ಞಾನಿಗಳ ಅಗತ್ಯವಿದ್ದು, ಪಾಲಿಕೆ ಶಾಲೆಗಳಲ್ಲಿ ಈ ರೀತಿಯ ವೇದಿಕೆಗಳನ್ನು ಹೆಚ್ಚಾಗಿ ಆಯೋಜಿಸುವ ಮೂಲಕ ಮಕ್ಕಳಿಗೆ ಪ್ರೋತ್ಸಾಹ ಮತ್ತು ಸಹಕಾರ ನೀಡಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಜ್ಞಾನ ಮೇಳದಲ್ಲಿ ನೂರಾರು ವಿದ್ಯಾರ್ಥಿಗಳು ತಮ್ಮ ವಿಜ್ಞಾನ ಮಾದರಿ, ಪ್ರದರ್ಶನ ಹಾಗೂ ಪ್ರಾಯೋಗಿಕ ಆವಿಷ್ಕಾರಗಳೊಂದಿಗೆ ಭಾಗವಹಿಸಿ ಮೆಚ್ಚುಗೆಗೆ ಪಾತ್ರರಾದರು.