ರಾಜ್ಯ ಮಟ್ಟದ ಪುರುಷರ ಮಟ್ಟಿ ಮಣ್ಣಿನ ಕಬಡ್ಡಿ ಪಂದ್ಯಾವಳಿಗೆ ಚಾಲನೆ- ಮೊಬೈಲ್ ಬಿಡಿ - ಪುಸ್ತಕ ಹಿಡಿ ಯೋಜನೆಯಡಿ, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಂಡು ಮಾನಸಿಕ, ದೃಹಿಕ ಆರೋಗ್ಯ ಕಾಪಾಡಿಕೊಳ್ಳಿ: ಹೆಚ್.ಎಂ.ರೇವಣ್ಣ
ಬೆಂಗಳೂರು,ಡಿ.12: ಕೋದಂಡರಾಮಪುರ ಕಬಡ್ಡಿ ಆಟದ ಮೈದಾನದಲ್ಲಿ ಅಂತರಾಷ್ಟ್ರೀಯ ಕಬಡ್ಡಿ ಪಟುಗಳಾದ ಎಸ್.ಬಿ.ಶಿವಲಿಂಗಯ್ಯ, ಚಿನ್ನಸ್ವಾಮಿರೆಡ್ಡಿ ಸ್ಮರಣಾರ್ಥ ರಾಜ್ಯಮಟ್ಟದ ಹೊನಲು-ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್.ಎಂ.ರೇವಣ್ಣ ಚಾಲನೆ ನೀಡಿದರು. ಧಾರ್ಮಿಕ ದತ್ತಿ ಇಲಾಖೆ ಸಮಿತಿ ಸದಸ್ಯ ಕೆ.ಎಂ.ನಾಗರಾಜ್, ಯಂಗ್ ಸ್ಟರ್ಸ್ ಕಬಡ್ಡಿ ಕ್ಲಬ್ ಅಧ್ಯಕ್ಷ ಬಿ.ಕೆ.ಶಿವರಾಂ, ಮಾಜಿ ಮಹಾಪೌರರಾದ ಜೆ.ಹುಚ್ಚಪ್ಪ, ಅಂತರಾಷ್ಟ್ರೀಯ ಕಬಡ್ಡಿ ಆಟಗಾರರಾದ ಹೊನ್ನಪ್ಪಗೌಡ, ವಸಂತ ಚಿನ್ನಸ್ವಾಮಿರೆಡ್ಡಿ, ಆಶಾ ಸೋಮಶೇಖರ್ ದೀಪ ಬೆಳಗಿಸಿ ಮಟ್ಟಿ ಮಣ್ಣಿನ ಕಬಡ್ಡಿ ಪಂದ್ಯಾವಳಿಗೆ ಶುಭಾರಂಭ ಮಾಡಿದರು. ಹೆಚ್.ಎಂ.ರೇವಣ್ಣ ಮಾತನಾಡಿ, ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಬೆಳೆಯಬೇಕು. ನಾನು ಸಹ ಗುಂಡೂರಾವ್ ಕಬಡ್ಡಿ ಕ್ಲಬ್ ನಲ್ಲಿ ಆಡುತ್ತಿದ್ದೆ. ನಾನು ಮತ್ತು ಕೆ.ಎಂ.ನಾಗರಾಜ ಸಹ ಆಟಗಾರರಾಗಿದ್ದೇವು ಎಂಬ ಹೆಮ್ಮೆ ಇದೆ. ಹಿಂದಿನ ಕಾಲದಲ್ಲಿ ಗ್ರಾಮೀಣ ಕ್ರೀಡೆಯಾದ ಕಬಡ್ಡಿಗೆ ಹೆಚ್ಚಿನ ಪ್ರೋತ್ಸಾಹ ಇರಲಿಲ್ಲ. ಅದರೆ ಇಂದು ದೇಶಾದ್ಯಂತ ಕಬಡ್ಡಿಗೆ ಪ್ರೋತ್ಸಾಹ, ಸಹಕಾರ ಸಿಗುತ್ತಿದೆ. ವಿದ್ಯಾರ್ಥಿಗಳಿಗಾಗಿ ಮೊಬೈಲ್ ಬಿಡಿ - ಪುಸ್ತಕ ಹಿಡಿ ಎಂಬ ಯೋಜನೆಯನ್ನು ಸರ್ಕಾರ ಜಾರಿಗೆ ತರುತ್ತಿದೆ.
ಕ್ರೀಡಾ ಚಟುವಟಿಕೆಗಳಿಗೆ ಪಾಲ್ಗೊಳ್ಳಲು ಮಕ್ಕಳಿಗೆ ಅವಕಾಶ ನೀಡುವ ಯೋಜನೆ ಇದಾಗಿದೆ ಎಂದರು. ಕೆ.ಎಂ.ನಾಗರಾಜು ಮಾತನಾಡಿ, ನಾನು 300ಕ್ಕೂ ಹೆಚ್ಚು ಕಬಡ್ಡಿ ಪಂದ್ಯಾವಳಿಗಳನ್ನು ಆಡಿದ್ದೇನೆ, ವಿಶ್ವವಿದ್ಯಾಲಯ ತಂಡವನ್ನು ಪ್ರತಿನಿಧಿಸಿದ್ದೇ. ರಾಜ್ಯ ಪೊಲೀಸ್ ತಂಡ, ಕೇಂದ್ರ ಅಬಕಾರಿ ತಂಡ, ಖಾಸಗಿ ಸಂಸ್ಥೆಗಳು ತಂಡಗಳ ನಡುವೆ ಅಂದಿನ ದಿನಗಳಲ್ಲಿ ಪಂದ್ಯಗಳು ಜರುಗುತ್ತಿತ್ತು. ಕಬಡ್ಡಿ ಕ್ರೀಡೆಯಲ್ಲಿ ಪ್ರಖ್ಯಾತ ಪಡೆದ ವ್ಯಕ್ತಿಗಳಿಗೆ ಸರ್ಕಾರಿ ಉದ್ಯೋಗ ಲಭಿಸುವಂತೆ ಶ್ರಮವಹಿಸಲಾಗುತ್ತಿತು ಎಂದು ಹೇಳಿದರು. ಬಿ.ಕೆ.ಶಿವರಾಂ ಮಾತನಾಡಿ, ಗ್ರಾಮೀಣ ಕ್ರೀಡೆಯಾದ ಕಬಡ್ಡಿಯನ್ನು ನಗರ ಪ್ರದೇಶದ ಯುವ ಸಮುದಾಯಕ್ಕೆ ಪರಿಚಯಿಸಲು ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಪಂದ್ಯಾವಳಿ ಆಯೋಜಿಸಲಾಗಿದೆ. ಈ ಮೈದಾನದಲ್ಲಿ ತರಬೇತಿ ಪಡೆದ ಆಟಗಾರರು ಅಂತರಾಷ್ಟ್ರೀಯ ಮಟ್ಟದ ಆಟಗಾರರಾಗಿ ಮಿಂಚಿದ್ದಾರೆ ಎಂದು ಹೇಳಿದರು. ಪುರುಷರ 32ತಂಡಗಳು ಭಾಗವಹಿಸಿದ್ದು, ಮೂರು ದಿನಗಳ ಕಾಲ ಪಂದ್ಯಗಳು ನಡೆಯಲಿವೆ. ಅಂತಿಮ ಪಂದ್ಯ ಪ್ರಥಮ ಬಹುಮಾನ 75ಸಾವಿರ, ದ್ವೀತಿಯ ಬಹುಮಾನ 50ಸಾವಿರ, ತೃತೀಯ ಬಹುಮಾನ 25 ಸಾವಿರ, ಅತ್ತುತ್ಯಮ ಆಟಗಾರ, ರೈಡರ್, ಅಲ್ ರೌಂಡರ್ ಗಳಿಗೆ 5 ಸಾವಿರ ಬಹುಮಾನ ಮತ್ತು ಪಾರಿತೋಷಕ ನೀಡಲಾಗುವುದು ಎಂದರು.