ಜಯನಗರ: ಬಿ. ಸೋಮಶೇಖರ್ ಅಭಿಮಾನಿ ಬಳಗದ ವತಿಯಿಂದ ಸಾರ್ವಜನಿಕ ಹಿತದೃಷ್ಟಿಯಿಂದ ವಿವಿಧ ಕಾರ್ಯಕ್ರಮಗಳನ್ನು ಜಯನಗರದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಪೌರ ಕಾರ್ಮಿಕರಿಗೆ ಬೆಡ್‌ಶೀಟ್‌ಗಳು, ಮಹಿಳೆಯರಿಗೆ ಸೀರೆಗಳು, ಶಾಲಾ ಮಕ್ಕಳಿಗೆ ಸ್ಕೂಲ್ ಬ್ಯಾಗ್‌ಗಳು ಮತ್ತು ಆಟೋ ಚಾಲಕರಿಗೆ ಸಮವಸ್ತ್ರಗಳನ್ನು ರಾಜ್ಯ ಬಿಜೆಪಿ ಒಬಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಮಾಜಿ ಸದಸ್ಯರಾದ ಬಿ. ಸೋಮಶೇಖರ್ ಹಾಗೂ ಶ್ರೀಮತಿ ಮಾಲತಿ ಸೋಮಶೇಖರ್ ಅವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಮಹಾಪೌರರಾದ ಎಸ್.ಕೆ. ನಟರಾಜ್, ಮಾಜಿ ಪಾಲಿಕೆ ಸದಸ್ಯರಾದ ಶ್ರೀಮತಿ ಲಕ್ಷ್ಮಿನಟರಾಜ್, ಲಕ್ಷ್ಮಿಕಾಂತ್, ಕಬ್ಬಾಳ್ ಉಮೇಶ್, ಜಯ ಕರ್ನಾಟಕ ಸಂಘಟನೆಯ ದೀಪುಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಿ. ಸೋಮಶೇಖರ್ ಅವರು, “ಕಾಯಕ ಯೋಗಿ ಶ್ರೀ ಬಸವೇಶ್ವರರು ಹಾಗೂ ದಾಸಶ್ರೇಷ್ಠ ಕನಕದಾಸರ ಚಿಂತನೆ ಮತ್ತು ಆದರ್ಶಗಳನ್ನು ಅಳವಡಿಸಿಕೊಂಡಿರುವ ಬಿಜೆಪಿ ಪಕ್ಷವು ಎಲ್ಲ ವರ್ಗ ಮತ್ತು ಸಮುದಾಯಗಳಿಗೆ ಸಮಾನ ಅವಕಾಶಗಳನ್ನು ನೀಡುತ್ತಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ ನನಗೆ ಶಿಸ್ತು, ಸಂಘಟನೆ ಹಾಗೂ ಜನಸೇವೆ ಮಾಡುವ ಪ್ರೇರಣೆಯನ್ನು ನೀಡಿದೆ” ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷವು ಹಿಂದುಳಿದ ವರ್ಗಗಳಿಗೆ ಆಡಳಿತ ಹಾಗೂ ಪಕ್ಷ ಸಂಘಟನೆಯಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡುತ್ತಿದೆ. ಮುಂಬರುವ ಜಿಬಿಎ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಪಂಚ ಪಾಲಿಕೆಗಳಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.