ಖ್ಯಾತ ‘ಶ್ರದ್ಧಾ ಡ್ಯಾನ್ಸ್ ಸೆಂಟರ್’ ನೃತ್ಯಸಂಸ್ಥೆಯ ಬದ್ಧತೆಯ ನೃತ್ಯಗುರು ಮತ್ತು ಉತ್ತಮ ನೃತ್ಯಪಟುವೆಂದು ಹೆಸರಾದ ವಿದುಷಿ ಶಮಾ ಕೃಷ್ಣ ಅವರ ನುರಿತ ಗರಡಿಯಲ್ಲಿ ರೂಪುಗೊಂಡಿರುವ ಕಲಾಶಿಲ್ಪ ಕು. ಎನ್. ವಿದಿತಾ. ಕಳೆದ 6 ವರ್ಷಗಳಿಂದ ಅತ್ಯಾಸಕ್ತಿಯಿಂದ ಅವರಲ್ಲಿ ಭರತನಾಟ್ಯ ಕಲಿಯುತ್ತಿರುವ ವಿದಿತಾ ಬೆಂಗಳೂರಿನ ಶ್ರೀ ನವೀನ್ ಮತ್ತು ಪುಷ್ಪಾ ಅವರ ಸುಪುತ್ರಿ. ಎಂಟನೆಯ ತರಗತಿಯಲ್ಲಿ ಓದುತ್ತಿರುವ ಹದಿಮೂರು ವರ್ಷದ ಈ ಬಾಲಪ್ರತಿಭೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತ ಈಗಾಗಲೇ ಕರ್ನಾಟಕ ಸರ್ಕಾರದ ‘ಜ್ಯೂನಿಯರ್’ ನೃತ್ಯಪರೀಕ್ಷೆಯನ್ನು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾಳೆ.
ವಯಸ್ಸಿಗೆ ಮೀರಿದ ಪ್ರತಿಭಾನ್ವಿತಳಾದ ವಿದಿತಾ ನಾಟ್ಯಶಾಸ್ತ್ರದ 108 ‘ಕರಣ’ಗಳನ್ನು ಕಲಿಯುತ್ತಿರುವುದು ನಿಜಕ್ಕೂ ಇವಳ ಅಗ್ಗಳಿಕೆ. ನಾಡಿನಾದ್ಯಂತ ಅನೇಕ ಪ್ರತಿಷ್ಠಿತ ನೃತ್ಯೋತ್ಸವಗಳಲ್ಲಿ, ದೇವಾಲಯಗಳಲ್ಲಿ ನರ್ತಿಸಿರುವ ಇವಳು, ಪಾಶಾತ್ಯ, ಫ್ರೀ ಸ್ಟೈಲ್, ಮತ್ತು ಇನ್ನಿತರ ನೃತ್ಯ ಪ್ರಕಾರಗಳಲ್ಲೂ ಪರಿಶ್ರಮಿಸುತ್ತಿದ್ದಾಳೆ.
ಜೀ ಕನ್ನಡ ವಾಹಿನಿಯ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಮತ್ತು ತೆಲುಗು ಈ ಟಿವಿಯ ‘ಧೀ’ ಡ್ಯಾನ್ಸ್ ಷೋ ನಲ್ಲಿ ಭಾಗವಹಿಸಿರುವ ವಿದಿತಾ, ಕ್ರೀಡಾಪಟು ಕೂಡ. ಥ್ರೋ ಬಾಲ್, ವಾಲಿ ಬಾಲ್, ಶಾಟ್ ಪುಟ್ ಸ್ಕೇಟಿಂಗ್ ಮತ್ತು ಈಜುಗಾರಿಕೆ ಮುಂತಾದ ಕ್ರೀಡೆಗಳಲ್ಲಿ ತೊಡಗಿಕೊಂಡಿರುವ ವೈಶಿಷ್ಟ್ಯ ಇವಳದು. ಇದೀಗ ವಿದಿತಾ, ತಾನು ಅರ್ಜಿಸಿರುವ ನೃತ್ಯದ ಆಯಾಮಗಳನ್ನು ಪ್ರದರ್ಶಿಸಲು ಇದೇ ತಿಂಗಳ 20 ಶನಿವಾರದಂದು ಸಂಜೆ 6 ಗಂಟೆಗೆ ನಗರದ ಚೌಡಯ್ಯ ಮೆಮೋರಿಯಲ್ ಭವನದಲ್ಲಿ ವಿದ್ಯುಕ್ತವಾಗಿ ‘ರಂಗಪ್ರವೇಶ’ ಮಾಡುತ್ತಿದ್ದಾಳೆ. ಕು. ವಿದಿತಳ ಕಲಾತ್ಮಕ ನೃತ್ಯ ಸೌದರ್ಯವನ್ನು ಕಣ್ತುಂಬಿಕೊಳ್ಳಲು ಸರ್ವರಿಗೂ ಆದರದ ಸ್ವಾಗತ.
ಬೆಂಗಳೂರಿನಲ್ಲಿ ಜನಿಸಿದ ವಿದಿತಾ ಶ್ರೀ ನವೀನ್ – ಪುಷ್ಪಾ ಅವರ ಮುದ್ದಿನ ಮಗಳು. ನೃತ್ಯ ವಿದಿತಳ ಬಾಲ್ಯದ ಒಲವು. ಸಾಂಸ್ಕೃತಿಕ ಹಿನ್ನಲೆಯುಳ್ಳ ಕುಟುಂಬದ ಪೋಷಕರಿಗೆ ಕಳೆಯ ಬಗ್ಗೆ ಅತ್ಯಾಸಕ್ತಿ. ಮಗಳ ನೃತ್ಯ ಪ್ರತಿಭೆಯನ್ನು ಗುರುತಿಸಿದ ಅವರು ಪುಟ್ಟ ಬಾಲಕಿ 7 ವರ್ಷದ ವಿದಿತಳನ್ನು ಭರತನಾಟ್ಯ ಕಲಿಯಲು ಖ್ಯಾತ ನೃತ್ಯ ಕಲಾವಿದೆ ಮತ್ತು ಗುರು ವಿ. ಶಮಾ ಕೃಷ್ಣ ಅವರ ಬಳಿ ನೃತ್ಯ ಕಲಿಯಲು ಸೇರ್ಪಡೆಗೊಳಿಸಿದರು. ಚುರುಕುಮತಿಯಾದ ವಿದಿತಾ ಬಹು ಬೇಗ ನೃತ್ಯ ಕಲಿಯುತ್ತ ಅನೇಕ ನೃತ್ಯ ಪ್ರದರ್ಶನಗಳಿಗೂ ಸಜ್ಜಾದಳು.
ಓದಿನಲ್ಲೂ ಮುಂದಿದ್ದ ವಿದಿತಾ ಶಾಲೆಯ ಎಲ್ಲ ಸಾಂಸ್ಕೃತಿಕ ಸ್ಪರ್ಧೆಗಳಲ್ಲೂ ಬಹುಮಾನಗಳನ್ನು ಗಳಿಸಿದ್ದಲ್ಲದೆ, ಅಂತರ್ಶಾಲಾ ಕ್ರೀಡೆಗಳಲ್ಲೂ ಶಾಲೆಯ ತಂಡವನ್ನು ಪ್ರತಿನಿಧಿಸಿ ಬಹುಮಾನಗಳನ್ನು ಪಡೆದ ಹಿರಿಮೆ ಅವಳದು. ಯಾವುದೇ ಕಲಾತ್ಮಕ ಪ್ರಕಾರಗಳಲ್ಲೂ ಪರಿಪೂರ್ಣತೆ ಬಯಸುವ ವಿದಿತಾ ತನ್ನ ನೃತ್ಯ ಪಯಣದಲ್ಲಿ ಗುರು- ಹಿರಿಯರ -ಹಿತೈಷಿಗಳ ಆಶೀರ್ವಾದ ಬೇಡುತ್ತಾ ತನ್ನ ಕಲಾಪಯಣ ಮುಂದುವರೆಸುವ – ನೃತ್ಯರಂಗದಲ್ಲಿ ಸಾಧನೆ ಮಾಡುವ ಕನಸನ್ನು ಹೊಂದಿದ್ದಾಳೆ.
ನೃತ್ಯಕ್ಕೆ ಹೇಳಿಮಾಡಿಸಿದಂಥ ಮಾಟವಾದ ದೇಹ ಸೌಷ್ಟವ, ಬುದ್ಧಿಮತ್ತತೆ, ಬದ್ಧತೆಯ ಮನೋಭಾವ ಮತ್ತು ಪರಿಶ್ರಮದ ಅಭ್ಯಾಸ ಹೊಂದಿರುವ ವಿದಿತಾಳ ಉತ್ತಮ ಭವಿಷ್ಯಕ್ಕೆ ಸರ್ವ ಶುಭಾಶಯಗಳು. ಕಲಾವಿದರ ಜೀವನದ ಅತ್ಯಂತ ಪ್ರಮುಖ ಘಟ್ಟ ‘ರಂಗಪ್ರವೇಶ’ದ ಈ ಶುಭ ಸಂದರ್ಭದಲ್ಲಿ ಹಾರ್ದಿಕ ಅಭಿನಂದನೆಗಳು.