ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೂ ಎಸ್.ಎಸ್.ಎಲ್.ಸಿ ಮಾದರಿ ಪ್ರಶ್ನೆಪತ್ರಿಕೆ ಪ್ರಕಟಿಸುವಂತೆ ಐಟಾ ಮನವಿ

varthajala
0

ಕನ್ನಡ ಇಂಗ್ಲಿಷ್ ಮಾಧ್ಯಮದಂತೆ ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೂ ಎಸ್.ಎಸ್.ಎಲ್.ಸಿ ಮಾದರಿ ಪ್ರಶ್ನೆಪತ್ರಿಕೆ ಪ್ರಕಟಿಸುವಂತೆ ಐಟಾ ಮನವಿ

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB) ತನ್ನ ಅಧಿಕೃತ ಜಾಲತಾಣದಲ್ಲಿ 2025–26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಿಗಾಗಿ ಮಾತ್ರ ಮಾದರಿ ಪ್ರಶ್ನೆಪತ್ರಿಕೆ, ಬ್ಲೂಪ್ರಿಂಟ್ ಪ್ರಕಟಿಸಿದ್ದು, ಉರ್ದು ಮಾಧ್ಯಮದ ಸಾವಿರಾರು ವಿದ್ಯಾರ್ಥಿಗಳು ಈ ಸೌಲಭ್ಯದಿಂದ ಸಂಪೂರ್ಣ ವಂಚಿತರಾಗಿರುವುದನ್ನು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ (ರಿ.) AIITA ಕರ್ನಾಟಕ ರಾಜ್ಯ ಶಾಖೆ ಗಂಭೀರವಾಗಿ ಗಮನಿಸಿದೆ.

AIITA ಕರ್ನಾಟಕದ ಅಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಅವರು ನಿರ್ದೇಶಕರಿಗೆ ಸಲ್ಲಿಸಿದ ಮನವಿಯಲ್ಲಿ, “ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿರುವ ಶೈಕ್ಷಣಿಕ ನೆರವು ಉರ್ದು ಮಾಧ್ಯಮಕ್ಕೆ ಲಭ್ಯವಾಗದೇ ಇರುವುದು ಶೈಕ್ಷಣಿಕ ಸಮಾನತೆಯ ಮೇಲೆ ಗಂಭೀರ ಪ್ರಭಾವ ಬೀರುತ್ತಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ” ಎಂದು ತಿಳಿಸಿದ್ದಾರೆ.

ಉರ್ದು ಮಾಧ್ಯಮದಲ್ಲಿ ಆಡಳಿತಾತ್ಮಕ ನಿರ್ಲಕ್ಷ್ಯ ಕಂಡುಬರುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಪಾಲಕರಲ್ಲಿ ಆತಂಕ ಮತ್ತು ಅಸಮಾಧಾನ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಪ್ರತಿ ವರ್ಷ ಗಣನೀಯ ಸಂಖ್ಯೆಯಲ್ಲಿ ಉರ್ದು ಮಾಧ್ಯಮದ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುತ್ತಿದ್ದು, ಸಮಾನ ಕಲಿಕಾ ಸಂಪನ್ಮೂಲಗಳ ಕೊರತೆಯಿಂದ ಇವರ ಸಿದ್ಧತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್ ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ರಝಾ ಮಾನ್ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

AIITA ಕರ್ನಾಟಕ ಎಸ್.ಎಸ್.ಎಲ್.ಸಿ. ಪರೀಕ್ಷಾ ಮಂಡಳಿಗೆ ಸಲ್ಲಿಸಿರುವ ಮುಖ್ಯ ಬೇಡಿಕೆಗಳು:ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ತಕ್ಷಣ ಮಾದರಿ ಪ್ರಶ್ನೆಪತ್ರಿಕೆ, ಬ್ಲೂಪ್ರಿಂಟ್, ಪ್ರಶ್ನೆಕೋಶ (Question Bank) ಇವುಗಳನ್ನು KSEAB ಜಾಲತಾಣದಲ್ಲಿ ಪ್ರಕಟಿಸುವುದು.
ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಂತೆ ಉರ್ದು ಮಾಧ್ಯಮಕ್ಕೂ ಸಮಾನ ಶೈಕ್ಷಣಿಕ ಸಂಪನ್ಮೂಲ ಲಭ್ಯವಾಗುವಂತೆ ಮಾರ್ಗಸೂಚಿಗಳನ್ನು ಜಾರಿಗೊಳಿಸುವುದು.
ಈ ಕ್ರಮವನ್ನು ತುರ್ತಾಗಿ ಕೈಗೊಂಡು ರಾಜ್ಯದ ಉರ್ದು ಮಾಧ್ಯಮದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸುವುದು.

AIITA ಕರ್ನಾಟಕ, ರಾಜ್ಯ ಶಿಕ್ಷಣ ಇಲಾಖೆ ಎಲ್ಲಾ ಭಾಷಾ ಮಾಧ್ಯಮಗಳಿಗೂ ಸಮಾನ ಶಿಕ್ಷಣ ಮತ್ತು ಸಮಾನ ಅವಕಾಶ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದೆ.

ಅಬ್ದುಲ್ ಕದೀರ್ ಬೇಗ್

ಮಾಧ್ಯಮ ಕಾರ್ಯದರ್ಶಿ
: 9886455416

Post a Comment

0Comments

Post a Comment (0)