ಬೆಂಗಳೂರು : ನಗರದ ಶೇಷಾದ್ರಿಪುರದ ಕಾಲೇಜಿನ ಆವರಣದಲ್ಲಿ ಸುಮೇರು ಟ್ರಸ್ಟ್ ಮತ್ತು ಗೋಧೂಳಿ ಕನ್ನಡ ಸಂಘದ ಸಹಭಾಗಿತ್ವದಲ್ಲಿ ಡಾ. ಸುರೇಶ್ ಪಾಟೀಲರು ರಚಿಸಿದ "ಸನ್ನಿಧಿ" ಕಾದಂಬರಿ ಲೋಕಾರ್ಪಣೆಗೊಂಡಿತು. ಪುಸ್ತಕ ಲೋಕಾರ್ಪಣೆಯನ್ನು ನಾಡೋಜ ಡಾ. ಮನು ಬಳಿಗಾರ್‌ರವರು ಮಾಡಿದರು. ಕಾದಂಬರಿಯ ಕುರಿತಾಗಿ ಲೇಖಕಿ, ವಿಮರ್ಶಕಿ ಡಾ. ವೀಣಾ ಬನ್ನಂಜೆಯವರು ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಮತ್ತೊಬ್ಬ ಹಿರಿಯ ಸಾಹಿತಿ, ನಿವೃತ್ತ ಪ್ರಾಧ್ಯಾಪಕರಾದ ಡಾ. ಕೃಷ್ಣ ಕಟ್ಟಿಯವರು ವಹಿಸಿದ್ದರು. ಕಾರ್ಯಕ್ರಮದ ಆರಂಭ ದಾಸವಾಣಿ ಕರ್ನಾಟಕ ತಂಡದ ಶ್ರೀಮತಿ ಮಾನಸಾ ಕುಲಕರ್ಣಿ ಮತ್ತು ತಂಡದವರಿಂದ ಹರಿದಾಸರ ಪದಗಳ ಗಾಯನದಿಂದ ಆರಂಭವಾಯಿತು.
"ಸನ್ನಿಧಿ" ಕಾದಂಬರಿ ಲೋಕಾರ್ಪಣೆ ನಂತರ ಮಾತನಾಡಿದ ಡಾ. ಮನು ಬಳಿಗಾರ್ ಅವರು "ಸನ್ನಿಧಿ" ಕಾದಂಬರಿಯು ಪ್ರಸ್ತುತ ಈಗಿನ ಪರಿಸ್ಥಿತಿಯಲ್ಲಿ ನಾವು ತಿಳಿಯಲೇಬೇಕಾದ ದರ್ಶನ ಪರಿಚಯ ಮಾಡಿಸಿದ್ದಾರೆ. ತಾರತಮ್ಯಗಳ ಸಿದ್ಧಾಂತ ಇಟ್ಟುಕೊಂಡು ಬರೆದ, ವಿಜ್ಞಾನ ತತ್ವ ಜ್ಞಾನ ಸಮನ್ವಯ ಮಾಡಿ ಬರೆದಿದ್ದಾರೆ ಎಂದು ತಿಳಿಸಿದರು. ನಂತರ ಡಾ. ಸುರೇಶ ಪಾಟೀಲ ದಂಪತಿಗಳಿಗೆ ಸನ್ಮಾನಿಸಲಾಯಿತು. ತಮ್ಮ ಕೃತಿಯ ಬಗೆಗೆ ಹೇಳುತ್ತಾ ಡಾ. ಸುರೇಶ ಪಾಟೀಲರು "ಸನ್ನಿಧಿ" ಇಲ್ಲಿಯವರೆಗೂ ಕನ್ನಡ ಅಥವಾ ಯಾವುದೇ ಭಾಷೆಯಲ್ಲಿ ಶ್ರೀಮಧ್ವಾಚಾರ್ಯರ ಬಗೆಗೆ ಬರೆದಿರುವ ಮೊದಲ ಕಾದಂಬರಿ ಎಂದು ತಿಳಿಸಿದರು.
ವೀಣಕ್ಕ ಎಂದೇ ಚಿರಪರಿಚಿತ ವೀಣಾ ಬನ್ನಂಜೆಯವರು ತತ್ವಶಾಸ್ತ್ರಜ್ಞ ಹಾಗೂ ಸಿದ್ಧಾಂತಕ್ಕೆ ಕಾರಣರಾದ ವ್ಯಕ್ತಿಯ ಕುರಿತು ಬರೆಯುವುದ ಈ ಕಾಲ ಘಟ್ಟದಲ್ಲಿ ಎಷ್ಟು ದೊಡ್ಡ ಸವಾಲು ಎಂದು ಹೇಳಿ ಮೌಢ್ಯ ಮತ್ತು ಅಂಧಕಾರ ಪ್ರತಿಪಾದಿಸುವ, ಪ್ರಸಿದ್ಧರು ತಮ್ಮ ಸ್ವಾಮಿತ್ವ ಹೇಳುವ ಜನರ ನಡುವೆ ಯಾವುದೇ ವಿವಾದದ ಸುಳಿಯಲ್ಲಿ ಸಿಲುಕದ ಇಂತಹ ಒಂದು ಉತ್ತಮ ಕಾದಂಬರಿಯ ರಚನೆಯಾಗಿರುವುದು ಅಭಿನಂದನೀಯ ಎಂದರು.
ತಮ್ಮ ಅಧ್ಯಕ್ಷೀಯ ಭಾಷಣ ಮಾಡಿದ ಡಾ. ಕೃಷ್ಣ ಕಟ್ಟಿ ಅವರು ಸನ್ನಿಧಿ ಕಾದಂಬರಿಯು ಮನುಷ್ಯನ ಅರಿವಿನ ಹೊತ್ತು ಎನ್ನಬಹುದಾಗಿದೆ ಎಂದು ಹೇಳಿದರು. ಮಧ್ವಾಚಾರ್ಯರು ಕೊಟ್ಟ ದೃಷ್ಟಿ ದೇವರನ್ನ ಹೇಗೆ ನೋಡಬೇಕು ಎಂದು ಹೇಳಿಕೊಟ್ಟಿದ್ದಾರೆ, ಇಂತಹ ತತ್ವವನ್ನು ಹೇಳಿಕೊಟ್ಟ ಆಚಾರ್ಯರನ್ನು ಯಾವ ರೀತಿ ನೋಡಬಹುದೆಂದು "ಸನ್ನಿಧಿ" ಕಾದಂಬರಿ ತಿಳಿಸುತ್ತದೆ ಎಂದು ಹೇಳಿದರು.
ಡಾ. ಕೃಷ್ಣ ಕಟ್ಟಿ ಹಾಗೂ ಡಾ. ವೀಣಾ ಬನ್ನಂಜೆಯವರನ್ನು ಸನ್ಮಾನಿಸಲಾಯಿತು. ವಂದನಾರ್ಪಣೆಯನ್ನು ಶೇಷಾದ್ರಿಪುರದ ಕಾಲೇಜಿನ ಪ್ರಾಂಶುಪಾಲರಾದ ಎನ್ ಎಸ್ ಸತೀಶರವರು ನೆರವೇರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ. ಎಸ್ ಎಲ್ ಮಂಜುನಾಥ್‌ರವರು ಮಾಡಿದರು. ಕಾರ್ಯಕ್ರಮದಲ್ಲಿ ಐಸಿರಿ ಪ್ರಕಾಶನದ ಡಾ. ರೂಪಾ ಮಂಜುನಾಥ್ ಹಾಗೂ ತಂಡದವರು ದೂರದರ್ಶನದ ಸುದ್ದಿ ಸಂಪಾದಕರಾಗಿದ್ದ ಡಾ. ಮೈ. ಸಿ ಪಾಟೀಲ ಹಾಗೂ ಖ್ಯಾತ ಲೇಖಕರು ಮತ್ತು ಪ್ರಸಿದ್ಧ ಜ್ಯೋತಿಷಿಗಳಾದ ಮಹಾಬಲ ಮೂರ್ತಿ ಕೊಡ್ಲೆಕೆರೆಯವರು ಉಪಸ್ಥಿತರಿದ್ದರು.
