*ಪ್ರಾಥಮಿಕ ಶಿಕ್ಷಣದ ರಾಷ್ಟ್ರೀಕರಣ ಆಗಲಿ: ಎಲ್.ಹನುಮಂತಯ್ಯ

varthajala
0
ಬೆಂಗಳೂರು:  ಇಂಗ್ಲೀಷಿನಲ್ಲಿ ಕಲಿಯದೆ ಇದ್ದರೆ ಭವಿಷ್ಯವಿಲ್ಲ ಎನ್ನುವ ಭಾವನೆ ಪೋಷಕರಲ್ಲಿ ಬೇರೂರಿದೆ. ಹೀಗಾಗಿ ಕಲಿಕೆಗೆ ಕುರಿತ ಸತ್ಯಗಳು ಸೋತಿದ್ದು, ಭಾರತೀಯ ಭಾಷೆಗಳು ಬಸವಳಿಯುತ್ತಿವೆ. ಆದ್ದರಿಂದ ಪ್ರಾಥಮಿಕ ಶಿಕ್ಷಣದ ರಾಷ್ಟ್ರೀಕರಣ ಆಗಲೇಬೇಕು ಮತ್ತು ಉದ್ಯೋಗದಲ್ಲಿ ಸ್ಥಳೀಯ ಭಾಷೆಯ ಅರಿವು ಕಡ್ಡಾಯವಾಗಬೇಕು ಎಂದು ಹಿರಿಯ ಸಾಹಿತಿ ಡಾ.ಎಲ್ ಹನುಮಂತಯ್ಯ ಹೇಳಿದ್ದಾರೆ.

40 ವರ್ಷ ಪೂರೈಸಿರುವ ಕನ್ನಡ ಗೆಳೆಯರ ಬಳಗ ಮತ್ತು ಕರ್ನಾಟಕ ಕಾರ್ಮಿಕ ಲೋಕ ಸಂಘಟನೆಗಳು ಬುಧವಾರ ನಯನ ಸಭಾಂಗಣದಲ್ಲಿ ಸಂಯುಕ್ತವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಹಿರಿಯ ಜಾನಪದ ಸಂಶೋಧಕ ಹಿ.ಚಿ. ಬೋರಲಿಂಗಯ್ಯ ಅವರಿಗೆ 'ಎಂ. ಚಿದಾನಂದಮೂರ್ತಿ ಕನ್ನಡ ಸಂಸ್ಕೃತಿ ಪ್ರಶಸ್ತಿ, ಪತ್ರಕರ್ತ ಚ.ಹ.ರಘುನಾಥ, ಸತ್ಯೇಶ್ ಬೆಳ್ಳೂರ್ ಮತ್ತು ವಿಜಯಾ ಗುರುರಾಜ್ ಅವರಿಗೆ 'ಹಾಮಾನಾ ಕನ್ನಡ ಜಾಗೃತಿ' ಪುಸ್ತಕ ಬಹುಮಾನ, ಕನ್ನಡ ಹೋರಾಟಗಾರ ಟಿ. ತಿಮ್ಮೇಶ್ ಅವರಿಗೆ 'ಆಳ್ಲ ಚಿರಂಜೀವಿ ಕನ್ನಡ ಪ್ರಶಸ್ತಿ', ಕೆ.ಜಿ.ಎಫ್.ನ ಕನ್ನಡಪರ ಕಾರ್ಯಕರ್ತ ಹ.ಕೃ. ಸೋಮಶೇಖರ ಅವರಿಗೆ 'ಕನ್ನಡ ಅರವಿಂದ ಪ್ರಶಸ್ತಿ', ಪ್ರದಾನ ಮಾಡಲಾಯಿತು. ಜೊತೆಗೆ, ಗದಗ ಜಿಲ್ಲೆಯ ಯಕ್ಲಾಸಪುರದ ಪಾರ್ವತೆವ್ವ ಹಿರೇಬಸಪ್ಪ ಸರಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಗೆ 10 ಸಾವಿರ ರೂ. ನಗದು ಬಹುಮಾನ ವಿತರಣೆ ಮತ್ತು ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
ಶಿಕ್ಷಣ ಇಲಾಖೆ ಅತಿಥಿ ಶಿಕ್ಷಕರಿಂದಲೇ ನಡೆಯುತ್ತಿದೆ. ನ್ಯಾಯಾಲಯವು ಶಿಕ್ಷಣ ಮಾಧ್ಯಮದ ಆಯ್ಕೆಯನ್ನು ಪೋಷಕರಿಗೆ ಬಿಟ್ಟಿದೆ. ಈ ಗೋಜಲುಗಳಿಂದ  ಕನ್ನಡದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ ಎಂದು ಹನುಮಂತಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ಇವತ್ತು ಗ್ರಾಮೀಣರು ಕೂಡ ಇಂಗ್ಲಿಷ್ ಮೀಡಿಯಂನತ್ತ ಹೋಗುತ್ತಿದ್ದಾರೆ. ಸರಕಾರಿ ಶಾಲೆಗಳಲ್ಲಿ ಗುಣಮಟ್ಟ ಸುಧಾರಿಸಬೇಕು. ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿ ಇರುವುದರಿಂದ ಈಗ ರಾಜ್ಯ ಮತ್ತು ಕೇಂದ್ರ ಸರಕಾರಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ಸರೋಜಿನಿ ಮಹಿಷಿ ವರದಿಯಲ್ಲಿ ಈಗಿನ ಕಾಲಕ್ಕೆ ಪ್ರಸ್ತುತವಾಗಿರುವ 11 ಶಿಫಾರಸುಗಳನ್ನಾದರೂ ಸರಕಾರವು ಒಪ್ಪಿ, ಮುಂದಿನ ಕ್ರಮ ಕೈಗೊಳ್ಳಬೇಕು ಎಂದರು.
ಈಗ ಹೋಟೆಲುಗಳಲ್ಲಿ ಕೂಡ ಈಶಾನ್ಯ ಭಾರತದವರು ಕೆಲಸ ಮಾಡುತ್ತಿದ್ದಾರೆ. ಚಿಕ್ಕಪುಟ್ಟ ಕೆಲಸಗಳಿಂದ ಕನ್ನಡಿಗರು ದೂರವಾಗಿದ್ದಾರೆ. ಈಗ ಗ್ರೇಟರ್ ಬೆಂಗಳೂರಿನಲ್ಲಿ ಕ್ಷೌರಿಕರು ಕೂಡ ಸ್ಥಳೀಯರು ಕಾಣುತ್ತಿಲ್ಲ. ಇದನ್ನು ನಾವೇ ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಅವರು ನುಡಿದಿದ್ದಾರೆ.
ಕಲಿಕೆಗೂ ಕೌಶಲ್ಯಗಳಿಗೂ ಹೊಂದಿಕೆಯೇ ಇಲ್ಲ. ಉದ್ಯೋಗ ಮತ್ತು ಕನ್ನಡಿಗರ ನಡುವೆ ಕಂದಕ ಸೃಷ್ಟಿಯಾಗಿದೆ. ನಮಗೆ ವಿದೇಶಿ ಹೂಡಿಕೆ ಬರುತ್ತಿದೆ. ನಮ್ಮ ಭಾಷಿಕ ಸಮುದಾಯಗಳ ಒಳಗಿನ ಚಿಂತನೆ ನಾಶವಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.

Post a Comment

0Comments

Post a Comment (0)