ಬೆಳಗಾವಿ / ಬೆಂಗಳೂರು,
ತಮ್ಮ ವಾಸದ ಮನೆಯನ್ನು ಶಿಕ್ಷಣ ಸಂಸ್ಥೆಗೆ ಉಚಿತವಾಗಿ ನೀಡಿ ಶ್ರೇಷ್ಠ ದಾನಗುಣಕ್ಕೆ ಸಾಕ್ಷಿಯಾಗಿದ್ದ ಕರ್ನಾಟಕ ವಿಧಾನ ಪರಿಷತ್‍ನ ಮಾಜಿ ಸದಸ್ಯ ಕೆ. ನರಹರಿ ನಿಧನಕ್ಕೆ ಕರ್ನಾಟಕ ವಿಧಾನ ಪರಿಷತ್‍ನಲ್ಲಿ ಇಂದು ಸಂತಾಪ ಸೂಚಿಸಲಾಯಿತು.
1932ರ ಮೇ 25ರಂದು ಮೈಸೂರಿನಲ್ಲಿ ಜನಿಸಿದ್ದ ಕೆ ನರಹರಿ ಅವರು 2025ರ ಸೆಪ್ಡೆಂಬರ್ 8ರಂದು ನಿಧನರಾದರು. ಶ್ರೀಯುತರು ಬಿ.ಎಸ್ಸಿ ಮತ್ತು ಬಿ.ಇ. ಪದವೀಧರರಾಗಿದ್ದು, ವೃತ್ತಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರು. ಶ್ರೀಯುತರು ಸುಮಾರು 24 ವರ್ಷಗಳ ಕಾಲ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾಗಿ ಮತ್ತು ಸ್ಟುಡೆಂಟ್ಸ್ ವೆಲ್‍ಫೇರ್ ಆಫೀಸರ್ ಆಗಿ, ಹಾಸ್ಟೆಲ್ ಸಮಿತಿಯ ಸದಸ್ಯರಾಗಿ ಅನೇಕ ವರ್ಷಗಳ ಕಾಲ ಕಾಲೇಜಿನ ಉದ್ಯೋಗಿಗಳ ಕಲ್ಯಾಣ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 1984, 1990 ಮತ್ತು 1996ರಲ್ಲಿ ಸತತವಾಗಿ ಮೂರು ಬಾರಿ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿನ ಶಾಸಕರಾಗಿ ಸೇವೆ ಸಲ್ಲಿಸಿರುತ್ತಾರೆ.
ಶ್ರೀಯುತರು ಅಖಿಲ ಭಾರತ ರಾಷ್ಟ್ರೀಯ ಶೈಕ್ಷಿಕ ಮಹಾಸಂಘದ ಮುಖ್ಯಸ್ಥರಾಗಿ, ಬೆಂಗಳೂರಿನ ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿ, ಭಾರತೀಯ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿಯಾಗಿ ವಿವಿಧ ಜವಾಬ್ದಾರಿಯನ್ನು ವಹಿಸಿದ್ದರು.
ಶ್ರೀಯುತರು ಶಿಕ್ಷಣ ಕ್ಷೇತ್ರವಲ್ಲದೆ ಸಾಂಸ್ಕøತಿಕ, ಸಮಾಜ ಸೇವೆ, ರಾಜಕೀಯ ಇತ್ಯಾದಿ ಕ್ಷೇತ್ರಗಳಲ್ಲಿ ಹೆಚ್ಚಿನ ಜ್ಞಾನ ಹೊಂದಿ ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದರು.
ಶ್ರೀಯುತರ ನಿಧನದಿಂದಾಗಿ ರಾಜ್ಯವು ಹಿರಿಯ ಸರಳ ಸಜ್ಜನ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಸಭಾಪತಿ ಅವರು ಸಂತಾಪ ಸೂಚನೆ ನಿರ್ಣಯ ಮಂಡಿಸಿದರು. ಮೃತರ ಗೌರವಾರ್ಥ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಿದರು.