ಶಾಮನೂರು ಶಿವಶಂಕರಪ್ಪ ನಿಧನಕ್ಕೆ ವಿಧಾನ ಸಭೆಯಲ್ಲಿ ಸಂತಾಪ ಸೂಚನೆ: ಅಜಾತ ಶತ್ರು ಹಾಗೂ ಸ್ನೇಹಜೀವಿಯ ಒಡನಾಟ ನೆನೆದ ಮುಖ್ಯಮಂತ್ರಿ ಸಿದ್ದರಾಮಯ್ಯ

varthajala
0

 ಬೆಳಗಾವಿ / ಬೆಂಗಳೂರು:-ಎಲ್ಲ ರಾಜಕಾರಣಿಗಳೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಶಾಮನೂರು ಶಿವಶಂಕರಪ್ಪ ಅವರು ಅಜಾತಶತ್ರು ಎನಿಸಿದ್ದರು. ದಾವಣಗೆರೆ ಜಿಲ್ಲೆಯನ್ನು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಲು ಶಿವಶಂಕರಪ್ಪನವರ ಕೊಡುಗೆ ಅಪಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿಂದು ವಿಧಾನ ಸಭೆ ಕಲಾಪದಲ್ಲಿ, ಸಭಾಧ್ಯಕ್ಷ ಯು.ಟಿ.ಖಾದರ್ ಶಾಸಕ ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸಂತಾಪ ಸೂಚಿಸಿ ಮಂಡಿಸಿದ ನಿರ್ಣಯ ಬೆಂಬಲಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.ಎಲ್ಲರ ಜೊತೆ ಸ್ನೇಹದಿಂದ ಇರುತ್ತಿದ್ದ ಶಾಮನೂರು ಶಿವಶಂಕರಪ್ಪನವರು ರಾಜಯಕೀಯದಲ್ಲಿ ಅಜಾತ ಶತ್ರು ಎನಿಸಿದ್ದರು. ಪ್ರತಿ ಬಾರಿ ನಾನು ದಾವಣಗೆರೆ ನಗರಕ್ಕೆ ಆಗಮಿಸಿದರೆ ಶಾಮನೂರು ಶಿವಶಂಕರಪ್ಪನವರ ಗೆಸ್ಟ್ ಹೌಸ್‍ನಲ್ಲಿ ವಾಸ್ತವ್ಯ ಮಾಡುತ್ತಿದ್ದೆ. ಆತ್ಮೀಯವಾಗಿ ಅವರ ಮನೆಗೆ ಊಟಕ್ಕೆ ಕರೆಯುತ್ತಿದ್ದರು. ಅವರ ಅಗಲಿಕೆ ವೈಯಕ್ತಿವಾಗಿ ಹಾಗೂ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ.

ದೇಶದಲ್ಲಿಯೇ ಹಿರಿಯ  ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು, ದೀರ್ಘ ಕಾಲ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ, ಕೊನೆಯ ಉಸಿರಿನವರೆಗೂ ಕೆಲಸ ಮಾಡಿದ್ದಾರೆ.  1969 ರಲ್ಲಿ ದಾವಣಗೆರೆಯಲ್ಲಿ ಪುರಸಭೆ ಸದಸ್ಯರಾಗಿ ಆಯ್ಕೆಯಾಗಿ, ಬಳಿಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. 1994 ರಲ್ಲಿ ತಮ್ಮ 63ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಅವರು 06 ಬಾರಿ ಶಾಸಕರಾಗಿ, ಒಂದು ಬಾರಿ ಸಂಸತ್ ಸದಸ್ಯರಾಗಿ ಸಮಾಜದ ಸೇವೆ ಸಲ್ಲಿಸಿದ್ದಾರೆ.  ಬಹುದೀರ್ಘಕಾಲ ರಾಜಕೀಯದಲ್ಲಿ ಸಕ್ರಿಯರಾಗಿದ್ದರು.  ದಾವಣಗೆರೆ ಜಿಲ್ಲೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುಂದುವರೆದ್ದರೆ, ಅದಕ್ಕೆ ಶಾಮನೂರು ಶಿವಶಂಕರಪ್ಪನವರು ಕಾರಣ ಎಂದರು.
ದಾವಣಗೆರೆಯಲ್ಲಿ ಜವಳಿ ಉದ್ಯಮ ಅವನತಿಯತ್ತ ಸಾಗುತ್ತಿದ್ದ ಸಂದರ್ಭದಲ್ಲಿ, ಶೈಕ್ಷಣಿಕ ಕ್ಷೇತ್ರದಲ್ಲಿ ದಾವಣಗೆರೆಯನ್ನು ಮುಂಚೂಣಿಗೆ ತಂದು, ಇಂದು ಇಡೀ ಕರ್ನಾಟಕದಲ್ಲಿ ಹೆಸರುವಾಸಿಯಾಗುವಂತೆ ಮಾಡಿದರು. ಬಾಪೂಜಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.  ಅತಿ ದೀರ್ಘ ಕಾಲ ಕಾಂಗ್ರೆಸ್ ಪಕ್ಷದ ಖಜಾಂಜಿಯಾಗಿದ್ದರು.  ಎಲ್ಲರೊಂದಿಗೂ ಸ್ನೇಹದಿಂದ ಇರುತ್ತಿದ್ದ ಇವರಿಗೆ ಯಾರೂ ವೈರಿ ಇರಲಿಲ್ಲ.  ಅಜಾತಶತ್ರುವಿನಂತೆ ಇಡೀ ರಾಜಕೀಯ ಕ್ಷೇತ್ರದ ಹಿರಿಯ ಮುತ್ಸದ್ದಿಯಾಗಿ, ಯುವ ರಾಜಕಾರಣಿಗಳಿಗೆ ಸ್ಫೂರ್ತಿಯಾಗಿದ್ದರು.  ನಾನು ಮುಂದಿನ ವಿಧಾನಸಭಾ ಚುನಾವಣೆಗೂ ಸ್ಪರ್ಧಿಸಲು ಸಿದ್ಧ ಎಂದು ಹೇಳಿದ್ದ ಶಾಮನೂರು ಶಿವಶಂಕರಪ್ಪನವರು ಚೈತನ್ಯದ ಚಿಲುಮೆಯಾಗಿದ್ದರು ಎಂದರು.
ತಮ್ಮ 75 ನೇ ಜನ್ಮ  ದಿನಾಚರಣೆಯನ್ನು ದಾವಣಗೆರೆಯಲ್ಲಿಯೇ ಆಚರಿಸಲು ಶಾಮನೂರು ಶಿವಶಂಕರಪ್ಪನವರೇ ಕಾರಣ ಎಂಬುದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಕಳೆದ 15 ದಿನಗಳ ಹಿಂದೆಯμÉ್ಟೀ ಬೆಂಗಳೂರಿನ ಆಸ್ಪತ್ರೆಗೆ ಭೇಟಿ ನೀಡಿ, ಅವರನ್ನು ನೋಡಿಕೊಂಡು ಬಂದಿದ್ದೆ ಎಂದು ಹೇಳಿದರು.  ಶಾಮನೂರು ಶಿವಶಂಕರಪ್ಪನವರ ಬಡವರಪರ ಸ್ನೇಹಹಸ್ತ ಚಾಚುವ ಅವರ ಕಾಳಜಿಯನ್ನು ವರ್ಣಿಸಿದರು.  ಶಾಮನೂರು ಶಿವಶಂಕರಪ್ಪನವರು ತಮ್ಮ ದೊಡ್ಡ ಕುಟುಂಬ ಮಾತ್ರವಲ್ಲದೆ, ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ್ದಾರೆ.  ಅವರ ಆತ್ಮಕ್ಕೆ ಚಿರಶಾಂತಿಯನ್ನು ಹಾಗೂ ಅವರ ಅಗಲಿಕೆಯಿಂದ ಉಂಟಾಗಿರುವ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ದಯಪಾಲಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಪ್ರಸ್ತುತ ವಿಧಾನಸಭೆಯ ಇಬ್ಬರು ಹಿರಿಯ ಶಾಸಕರನ್ನು ಕಳೆದುಕೊಂಡಿರುವುದು ದುಃಖದ ಸಂಗತಿಯಾಗಿದೆ. ತುಂಬಾ ಗಟ್ಟಿ ವ್ಯಕ್ತಿತ್ವ ಹೊಂದಿದ್ದ ಶಾಮನೂರು ಶಿವಶಂಕರಪ್ಪನವರು ನೇರ ನಿಷ್ಠರವಾಗಿ ಮಾತನಾಡುತ್ತಿದ್ದರು. ಧೀರ್ಘಕಾಲ ಅವರು ಸಮಾಜಕ್ಕೆ ಸಲ್ಲಿಸಿದ ಸೇವೆ ಅವರ ವ್ಯಕ್ತಿತ್ವದ ಘನತೆ ಹೆಚ್ಚಿಸಿತ್ತು. ದೇಶದಲ್ಲಿ ಹಿರಿಯ ವಯಸ್ಸಿನ ಶಾಸಕ ಎನಿಸಿದ್ದರು. ಕೊನೆಯ ಕಾಲದವರೆಗೂ ಸಕ್ರಿಯ ರಾಜಕಾರಣದಲ್ಲಿ ಇರುವುದಾಗಿ ಹೇಳುತ್ತಿದ್ದರು. ದಾವಣಗೆರೆ ನಗರ ವಿದ್ಯಾಕಾಶಿ ಎಂದು ಹೆಸರು ಗಳಿಸಲು ಶಾಮನೂರು ಶಿವಶಂಕರಪ್ಪನವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಕಾರಣವಾಗಿವೆ ಎಂದರು.
ಆಹಾರ ಮತ್ತು ನಾಗರಿಕರ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, ಶಾಮನೂರು ಶಿವಶಂಕರಪ್ಪನವರು ಬಸವಣ್ಣವರ ಚಿಂತನೆಯನ್ನು ಅಳವಡಿಸಿಕೊಂಡಿದ್ದರು. ಸರ್ವರನ್ನೂ ಸಮಾನವಾಗಿ ಕಾಣುತ್ತಿದ್ದ ಅವರು ಎಂದಿಗೂ ಬೇಧ ಭಾವ ಮಾಡಲಿಲ್ಲ. ಆರ್ಥಿಕವಾಗಿ ಸಂಕಷ್ಟ ಎಂದು ಹೋದವರಿಗೆ ಸದಾ ಕಾಲ ನೆರವಾಗುತ್ತಿದ್ದರು.  ಎಲ್ಲೆಡೆ ಕೋವಿಡ್ ಸಾಂಕ್ರಾಮಿಕ ರೋಗದಿಂದ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ 06 ಕೋಟಿ ರೂ. ಖರ್ಚು ಮಾಡಿ, ಮೆಡಿಕಲ್ ಆಕ್ಸಿಜನ್ ಅನ್ನು ಉಚಿತವಾಗಿ ಒದಗಿಸುವ ಕೆಲಸ ಮಾಡಿದರು ಎಂದರು.
ವಸತಿ ಸಚಿವ ಬಿ.ಝಡ್.ಜಮೀರ್ ಅಹ್ಮದ್‍ಖಾನ್ ಮಾತನಾಡಿ, ಬಹಳ ವರ್ಷದಿಂದ ರಾಜಕಾರಣದಲ್ಲಿದ್ದ ಶಾಮನೂರು ಶಿವಶಂಕರಪ್ಪನವರು ನಮಗೆಲ್ಲಾ ಮಾದರಿಯಾಗಿದ್ದಾರೆ. ಕ್ಷೇತ್ರದ ಕೆಲಸಗಳಿಗಾಗಿ ಇಳಿ ವಯಸ್ಸಿನಲ್ಲಿಯೂ ನನ್ನನ್ನು ಕಾಣಲು ಬರುತ್ತಿದ್ದರು. ‘ಸರ್ ನೀವು ಬರುವುದು ಬೇಡ, ಫೋನ್‍ನಲ್ಲಿ ಹೇಳಿ ಸಾಕು, ನಾನು ನಿಮ್ಮ ಕೆಲಸ ಮಾಡಿಕೊಡುತ್ತೇನೆ ಎಂದರೂ ಕೇಳದೇ, ಅವರೇ ಬರುತ್ತಿದ್ದರು. ಅವರ ಮಗ ಎಸ್.ಎಸ್. ಮಲ್ಲಿಕಾರ್ಜುನ್ ಸಚಿವರಾದ್ದರಿಂದ, ನೀವು ಸಚಿವರಾಗುವಂತೆ ನಾನು ಕೇಳಿದರೆ, ಮುಖ್ಯಮಂತ್ರಿಯವರನ್ನು ಒಪ್ಪಿಸು ಈಗಲೂ ಸಚಿವನಾಗಿ ಕಾರ್ಯನಿರ್ವಹಿಸುತ್ತೇನೆ’ ಎನ್ನುವ ಉತ್ಸಾಹದ ಮಾತು ಅವರಿಂದ ಕೇಳಿಬರುತ್ತಿತ್ತು. ಇನ್ನಷ್ಟು ದಿನ ಅವರು ಬದುಕುತ್ತಾರೆ ಎಂದು ನಾನು ತಿಳಿದಿದ್ದೆ, ಅವರ ನಿಧನ ತುಂಬಲಾರದ ನಷ್ಟ ಉಂಟು ಮಾಡಿದೆ ಎಂದು ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ಹೇಳಿದರು.
ಶಾಸಕರಾದ ಎಸ್. ಸುರೇಶ್ ಕುಮಾರ್, ಸಿ.ಎನ್.ಬಾಲಕೃಷ್ಣ, ಯು.ಬಿ.ಬಣಕಾರ್, ಸಿ.ಸಿ.ಪಾಟೀಲ್, ಶಿವಲಿಂಗೇಗೌಡ, ಅಪ್ಪಾಜಿ ಸಿ.ಎಸ್.ನಾಡಗೌಡರ್, ಡಾ.ಹೆಚ್.ಡಿ.ರಂಗನಾಥ್, ಸಿದ್ದು ಸವದಿ, ಜೆ.ಟಿ.ಪಾಟೀಲ್, ಸಿಮೆಂಟ್ ಮಂಜು, ಅರಗ ಜ್ಞಾನೇಂದ್ರ, ಎನ್.ಟಿ.ಶ್ರೀನಿವಾಸ, ಶಾಮನೂರು ಶಿವಶಂಕರಪ್ಪನವರಿಗೆ ನುಡಿ ನಮನ ಸಲ್ಲಿಸಿದರು.  
ಮೃತರ ಗೌರವಾರ್ಥ ಒಂದು ನಿಮಿಷಗಳ ಕಾಲ ಮೌನ ಆಚರಿಸಲಾಯಿತು.

Post a Comment

0Comments

Post a Comment (0)