ಬೆಂಗಳೂರು: ಸಾಮಾನ್ಯವಾಗಿ ಸಾಫ್ಟ್‌ವೇರ್ ಕಂಪನಿಗಳು ಕನ್ನಡ ರಾಜ್ಯೋತ್ಸವ ಆಚರಣೆಗೆ ಹೆಚ್ಚಿನ ಮಹತ್ವ ನೀಡುವುದಿಲ್ಲ ಎಂಬ ಮಾತುಗಳ ನಡುವೆಯೇ, ಐಟಿ ಕ್ಷೇತ್ರದಲ್ಲಿ ಕರ್ನಾಟಕದ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕ್ಯಾನರೀಸ್ ಆಟೊಮೇಷನ್ ಸಂಸ್ಥೆ ಮಾದರಿಯಾಗಿ ಹೊರಹೊಮ್ಮಿದೆ. ಸಂಸ್ಥೆಯು ಕೋರಮಂಗಲದಲ್ಲಿನ ಸತ್ಯ ಸಾಯಿ ಸಂಸ್ಕೃತ ಸದನದಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿತು. ಈ ಕಾರ್ಯಕ್ರಮದಲ್ಲಿ ನೂರಾರು ಉದ್ಯೋಗಿಗಳು ಹಾಗೂ ಅವರ ಕುಟುಂಬದ ಸದಸ್ಯರು ಭಾಗವಹಿಸಿದ್ದರು.
ಸಾಫ್ಟ್ವೇರ್ ಉದ್ಯೋಗಿಗಳು ಕೋರಮಂಗಲ ಶ್ರೀ ಸತ್ಯ ಸಾಯಿ ಸಂಸ್ಕೃತ ಸದನದಲ್ಲಿ ಕ್ಯಾನರೀಸ್ ಸಂಸ್ಥೆ ವತಿಯಿಂದ 17ನೇ ವರ್ಷದ ಕನ್ನಡ ಸಂಸ್ಕೃತಿ, ಸಂಭ್ರಮ, ತಂತ್ರಜ್ಞಾನ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆ ಕ್ಯಾನರೀಸ್ ಸಂಸ್ಥೆಯ ಸಿ.ಇ.ಓ ಶೇಷಾದ್ರಿ ಶ್ರೀನಿವಾಸ್ ,ವ್ಯವಸ್ಥಾಪಕ ನಿರ್ದೇಶಕರಾದ ರಾಮನ್ ಸುಬ್ಬರಾವ್ ಎಂ, ಆರ್ ನಿರ್ದೇಶಕ ರಘು ಚಂದ್ರಶೇಖರಯ್ಯ , ನಿರ್ದೇಶಕರಾದ ಪುಷ್ಪರಾಜ್ ಶೆಟ್ಟಿ ರವರು ಕನ್ನಡ ಧ್ವಜ ಹಾರುವ ಮೂಲಕ ಸಂಭ್ರಮಾಚರಣೆ ಚಾಲನೆ ನೀಡಿದರು.
ಈ ಆಚರಣೆಯ ವಿಶೇಷತೆ ಎಂದರೆ ಯಾವುದೇ ಹೊರಗಿನ ಕಲಾವಿದರಿಲ್ಲದೆ, ಸಂಪೂರ್ಣವಾಗಿ ಉದ್ಯೋಗಿಗಳಿಂದಲೇ, ಉದ್ಯೋಗಿಗಳಿಗಾಗಿ ಮತ್ತು ಉದ್ಯೋಗಿಗಳ ಮೂಲಕ ಕಾರ್ಯಕ್ರಮ ಆಯೋಜಿಸಲಾಯಿತು. ಕಳೆದ 17 ವರ್ಷಗಳಿಂದ ನಿರಂತರವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿರುವ ಅಪರೂಪದ ಐಟಿ ಕಂಪನಿಗಳಲ್ಲಿ ಕ್ಯಾನರೀಸ್ ಆಟೊಮೇಷನ್ ಸಂಸ್ಥೆ ಒಂದಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಷಾದ್ರಿ ಶ್ರೀನಿವಾಸ್ ಅವರು, ಕನ್ನಡೇತರ ಉದ್ಯೋಗಿಗಳಿಗೆ ಕನ್ನಡ ಕಲಿಯಲು ಸಂಸ್ಥೆ ಸದಾ ಪ್ರೋತ್ಸಾಹ ನೀಡುತ್ತದೆ ಎಂದು ತಿಳಿಸಿದರು. “ನಮ್ಮ ಸಂಸ್ಥೆಯ ಸುಮಾರು 20ರಿಂದ 30 ಶೇಕಡಾ ಉದ್ಯೋಗಿಗಳು ಇತರ ರಾಜ್ಯಗಳಿಂದ ಬಂದವರಾಗಿದ್ದಾರೆ. ಅವರಿಗೆ ಕನ್ನಡ ತರಗತಿಗಳನ್ನು ನಡೆಸಲಾಗುತ್ತಿದ್ದು, ತರಬೇತಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರಗಳನ್ನು ನೀಡಲಾಗುತ್ತದೆ. ಇದರಿಂದ ಅವರು ಯಾವುದೇ ಹಿಂಜರಿಕೆ ಇಲ್ಲದೆ ಕನ್ನಡದಲ್ಲಿ ಮಾತನಾಡಲು ಸಾಧ್ಯವಾಗುತ್ತದೆ,” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಂಸ್ಥೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಉದ್ಯೋಗಿಗಳನ್ನು ಗೌರವಿಸುವ ಉದ್ದೇಶದಿಂದ 5 ವರ್ಷ ಸೇವೆ ಪೂರೈಸಿದವರಿಗೆ ಒಂದು ಚಿನ್ನದ ಪದಕ, 10 ವರ್ಷಗಳಿಗೆ ಎರಡು ಚಿನ್ನದ ಪದಕಗಳು ಸೇರಿದಂತೆ ಹೆಚ್ಚಿನ ಸೇವಾವಧಿಗೆ ಅನುಗುಣವಾಗಿ ಚಿನ್ನದ ಪದಕಗಳನ್ನು ನೀಡಲಾಗುತ್ತದೆ. ಇದು ಉದ್ಯೋಗಿಗಳ ನಿಷ್ಠೆ, ಶ್ರಮ ಹಾಗೂ ಸಂಸ್ಥೆಯೊಂದಿಗೆ ಅವರ ದೀರ್ಘಕಾಲದ ಬಾಂಧವ್ಯಕ್ಕೆ ಗೌರವ ಸೂಚಿಸುವ ಕ್ರಮವಾಗಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.