ಬೆಂಗಳೂರಿನಲ್ಲಿ ನೃತ್ಯ ಚಟುವಟಿಕೆಗಳು ಪ್ರತಿದಿನ ನಡೆಯುತ್ತಲೇ ಇರುತ್ತವೆ. ಪ್ರತಿನಿತ್ಯ ಹಲವಾರು ನೃತ್ಯಶಾಲೆಗಳು- ಕಲಾವಿದರು ಒಂದಲ್ಲ ಒಂದುಕಡೆ ನೃತ್ಯ ಪ್ರದರ್ಶನ ನೀಡುತ್ತಲೇ ಇರುತ್ತಾರೆ. ಕೇವಲ ವೇದಿಕೆಯ ಮೇಲೆ ನೃತ್ಯ ಪ್ರದರ್ಶನವೊಂದೇ ನೃತ್ಯಕಲಾವಿದರ ಗುರಿಯಾಗಬಾರದು. ಪ್ರದರ್ಶನಕ್ಕೆ ಅಗತ್ಯವಾದ ಉತ್ತಮ ಶಿಕ್ಷಣ -ಅಭ್ಯಾಸವಷ್ಟೇ ಆಗದೇ, ಜ್ಞಾನಾರ್ಜನೆಯ ಸಮಗ್ರ ಬೆಳವಣಿಗೆಯ ಕಡೆ ಆದ್ಯ ಗಮನ ನೀಡಬೇಕಾದ್ದು ಅವಶ್ಯ ಎಂಬುದನ್ನು ಮನಗಾಣಿಸುವುದು ‘ಸಾಧನ ಸಂಗಮ’ದ ಹಲವಾರು ನೃತ್ಯೋತ್ಸವಗಳು.
ಈ ನಿಟ್ಟಿನಲ್ಲಿ ಕಳೆದ ಎರಡೂವರೆ ದಶಕಗಳಿಂದ ಸಾಧನ ಸಂಗಮ, ಕಾಲ ಕಾಲಕ್ಕೆ ಹೊಸ ಚಿಂತನೆಗಳು, ಪ್ರಯೋಗ-ಪ್ರಯತ್ನಗಳಿಂದ ನೂತನ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದೆ. ಬಸವೇಶ್ವರ ನಗರದಲ್ಲಿರುವ ಈ ಖ್ಯಾತ ನೃತ್ಯಸಂಸ್ಥೆ ‘ಸಾಧನ ಸಂಗಮ’ ದ ಹಿಂದಿನ ಧೀ ಶಕ್ತಿ, ಅನುಭವ ಭಂಡಾರ ಖ್ಯಾತ ನೃತ್ಯಜ್ಞೆ ವಿ. ಜ್ಯೋತಿ ಪಟ್ಟಾಭಿ ರಾಮ್ ಅವರದು.
ಅವರದು ಸಮಗ್ರ ದೃಷ್ಟಿ, ಅಂತಸ್ಸತ್ವ ಬೆಳೆಸುವ ಸುತ್ಯಾರ್ಹ ಪ್ರಯತ್ನ. ಪುಟ್ಟ ಮಕ್ಕಳ ನೃತ್ಯ ಸಾಮರ್ಥ್ಯವನ್ನು ಬೆಳೆಸುವ ದೃಷ್ಟಿಯಿಂದ ವೇದಿಕೆ ಒದಗಿಸಿ, ಅನೇಕ ಬಗೆಯಲ್ಲಿ ಅವರ ಬೆಳವಣಿಗೆಗೆ ಸಾಧನವಾಗುವ ‘ಮುಕುಲೋತ್ಸವ’, ಯುಗಳೋತ್ಸವ ಮತ್ತು ಬಹುಳ ನೃತ್ಯೋತ್ಸವಗಳು ನೃತ್ಯಕ್ಷೇತ್ರದಲ್ಲಿ ಗಮನಾರ್ಹ ಸ್ಥಾನ ಗಳಿಸಿದೆ. ನಾಟ್ಯಗುರು ಜ್ಯೋತಿ ಪಟ್ಟಾಭಿರಾಮ್ ಮತ್ತು ಅವರ ಶಿಷ್ಯೆ ಮತ್ತು ಮಗಳಾದ ಡಾ. ಪಿ ಸಾಧನಶ್ರೀ ನೇತೃತ್ವದಲ್ಲಿ ‘ಸಾಧನ ಸಂಗಮ ಟ್ರಸ್ಟ್’ ನೃತ್ಯಶಾಲೆಯು ಪ್ರತಿವರ್ಷದಂತೆ ‘ಬಹುಳ ನೃತ್ಯೋತ್ಸವ’ವನ್ನು ಇದೇ ತಿಂಗಳ 26 ಸೋಮವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಎ.ಡಿ.ಎ. ರಂಗಮಂದಿರದಲ್ಲಿ ಏರ್ಪಡಿಸಿದೆ.
ಸ್ವಾಗತ ನರ್ತನ- ಭಾರತೀಯ ವಿವಿಧ ಶಾಸ್ತ್ರೀಯ ನೃತ್ಯಶೈಲಿಗಳ ಪ್ರದರ್ಶನವನ್ನು ‘ನಾಟ್ಯ ದೇಗುಲ ಡ್ಯಾನ್ಸ್ ಸ್ಕೂಲ್’ ಕಲಾತ್ಮಕ ನಿರ್ದೇಶಕ ವಿ. ಎಂ. ಸ್ವಾಮಿ ಅವರ ಶಿಷ್ಯರಿಂದ ಮತ್ತು ‘ಬಹುಳ’ ನೃತ್ಯರೂಪಕದ ಪ್ರದರ್ಶನವಾಗಿ ‘ದಿ ಸ್ಟ್ರಕ್ಚರಲ್ ಸ್ಕೂಲ್ ಆಫ್ ಫೈನ್ ಆರ್ಟ್ಸ್’ ನ ನಾಟ್ಯಗುರು ವಿ. ಅಕ್ಷರ ಭಾರಧ್ವಾಜ್ ಶಿಷ್ಯರು ಪ್ರದರ್ಶಿಸುವ - ‘ರಸ ರಾಜ’ – ವಿಶೇಷನೃತ್ಯರೂಪಕ ಹಾಗೂ ‘ಸಾಧನ ಸಂಗಮ ಡ್ಯಾನ್ಸ್ ಸೆಂಟರ್’ ನ ಶಿಷ್ಯರು ಪ್ರದರ್ಶಿಸುವ ‘ನಾದಾಮೋದ’ ಸಂಗೀತ ನೃತ್ಯರೂಪಕಗಳ ವಿಶೇಷ ನೃತ್ಯ ಕಾರ್ಯಕ್ರಮಗಳು ‘ಸಾಧನ ಸಂಗಮ’ದ ‘ಬಹುಳ’ ನೃತ್ಯೋತ್ಸವದ ಅಂಗವಾಗಿ ಮನರಂಜಿಸಲಿವೆ. ಕಣ್ಮನ ತುಂಬುವ ಈ ಕಲಾ ವೈಭವದ ಹೃದಯಸ್ಪರ್ಶಿ ಅನುಭವವನ್ನು ಪಡೆಯಲು ನಾಡಿನ ಎಲ್ಲ ಕಲಾರಸಿಕರಿಗೂ ಆದರದ ಸುಸ್ವಾಗತ.
ಈ ಕಾರ್ಯಕ್ರಮದಲ್ಲಿ ಡಾ. ಜಯಪ್ರಕಾಶ್ ನಾರಾಯಣ್- ಅಧ್ಯಕ್ಷರು , ಆಯುರ್ವೇದ ಅಕಾಡೆಮಿ, ನೃತ್ಯಗುರು- ನೃತ್ಯ ಸಂಯೋಜಕರು ಶಕುಂತಲಾ ಪ್ರಭಾತ್ ಮತ್ತು ಶ್ರೀ ರಾಘವೇಂದ್ರ ಪ್ರಭಾತ್- ಪ್ರಭಾತ್ ಗ್ರೂಪ್ ಆಫ್ ಕಂಪೆನಿಗಳ ಸ್ಥಾಪಕ ನಿರ್ದೇಶಕರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ.