ಬೆಂಗಳೂರು : ಪಠ್ಯ ಪುಸ್ತಕಗಳ ಭೋದನೆಯೊಂದಿಗೆ ಶಿಸ್ತು ನೈತಿಕತೆ, ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಾ ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದು ನಲವತ್ತೈದನೇ ವರ್ಷದ ಮುನ್ನಡೆಯಲ್ಲಿ ಸಾಗುತ್ತಿರುವ ಕ್ಯಾಮ್ಲಿನ್ ಶಾಲೆಯ ಜ್ಞಾನದೇಗುಲವು ಇತ್ತೀಚಿಗೆ 45ನೇ ವರ್ಷದ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಮತ್ತು ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿತ್ತು.ಕಾರ್ಯಕ್ರಮವನ್ನು ವಿಜಯನಗರ ಕ್ಷೇತ್ರದ ಶಾಸಕರಾದ ಎಂ ಕೃಷ್ಣಪ್ಪ ಹಾಗೂ ಅಂತರಾಷ್ಟ್ರೀಯ ನಗೆ ಭಾಷಣಕಾರರಾದ ಶ್ರೀಮತಿ ಸುಧಾ ಬರಗೂರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.
ಮಕ್ಕಳು ಭಗವದ್ಗೀತಾ ಪಠಣದಿಂದ ಕಾರ್ಯಕ್ರಮದ ಮೆರುಗನ್ನು ಇಮ್ಮಡಿಗೊಳಿಸಿದರು. ಇದೇ ಸಂದರ್ಭದಲ್ಲಿ ಆಡಳಿತ ಮಂಡಳಿ, ಶಾಲಾ ಸಿಬ್ಬಂದಿವರ್ಗ, ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.ಶ್ರದ್ಧೆಯೇ ಪರಮೋನ್ನತಿ ಎಂಬ ಧೈಯೋಕ್ತಿಯ ಲಾಂಛನದೊಂದಿಗೆ ಶಿಕ್ಷಣ ತಜ್ಞರಾದ ಟಿ.ಬಿ.ಜಿ ಆರಾಧ್ಯ ಅವರು 1981ರಲ್ಲಿ ಕ್ಯಾಮ್ಲಿನ್ ಆಂಗ್ಲ ಶಾಲೆಯನ್ನು ಹಂಪಿ ನಗರದಲ್ಲಿ ಪ್ರಾರಂಭಿಸಿದರು. ರಾಜ್ಯ ಪಠ್ಯಕ್ರಮದಲ್ಲಿ ಶಿಕ್ಷಣವನ್ನು ಮಕ್ಕಳಿಗೆ ನೀಡುತ್ತಾ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇಕಡಾ ನೂರರಷ್ಟು ಫಲಿತಾಂಶಗಳೊಂದಿಗೆ 625/625 ಅಂಕಗಳನ್ನು ಪಡೆದು ರಾಜ್ಯಮಟ್ಟದ ಪ್ರಥಮ ರ್ಯಾಂಕ್ ಗಳಿಸಿ ನಗರದ ಹಲವಾರು ಶಾಲೆಗಳ ಮಧ್ಯೆ ತನ್ನದೇ ಆದ ವಿಭಿನ್ನ ಛಾಪನ್ನು ಮೂಡಿಸಿದ್ದಾರೆ. ಶಿಕ್ಷಣ ಕ್ಷೇತ್ರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಂದ ಅಭಿನಂದನಾ ಪತ್ರವನ್ನು ಪಡೆದಿರುತ್ತದೆ. ಇದೇ ವೇಳೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಚಿನ್ನದ ಪದಕ ಪಡೆದ ತಮ್ಮ ಶಾಲಾ ವಿದ್ಯಾರ್ಥಿನಿ ನಿಶ್ಚಿತಾ ತಿವಾರಿ ಹಾಗೂ ಎಸ್‍ಎಸ್‍ಎಲ್.ಸಿ ಪರೀಕ್ಷೆಯಲ್ಲಿ ವಿವಿಧ ರ್ಯಾಂಕ್ ಹಾಗೂ ಗರಿಷ್ಠ ಅಂಕಗಳಿಂದ ಅತ್ಯುನ್ನತ ಫಲಿತಾಂಶ ಪಡೆದ 23 ವಿದ್ಯಾರ್ಥಿಗಳಿಗೆ ಮತ್ತು ಕ್ರೀಡಾವಲಯದ ಚೆಸ್, ಟೇಬಲ್ ಟೆನ್ನಿಸ್ ಕ್ರೀಡೆಗಳಲ್ಲಿ ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದಂತಹ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳೊಂದಿಗೆ ಬಹುಮಾನಗಳನ್ನು ನೀಡಿ ಸನ್ಮಾನಿಸಿದರು.ಸಂಸ್ಥಾಪಕ ಕಾರ್ಯದರ್ಶಿ ಹಾಗೂ ಶಿಕ್ಷಣ ತಜ್ಞರಾದ ಟಿ.ಬಿ.ಜಿ ಆರಾಧ್ಯ ಅವರು ತಮ್ಮ ವೃತ್ತಿ ಬದುಕಿನಲ್ಲಿ ತಾವು ಶಿಕ್ಷಣ ವಲಯವನ್ನು ಆಯ್ಕೆ ಮಾಡಿಕೊಂಡ ಬಗ್ಗೆ, ಹೆಮ್ಮೆ ವ್ಯಕ್ತಪಡಿಸಿದರು. ತದನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮಗಳು ನಾಡಿನ ಸಂಸ್ಕøತಿ ಕಲೆಯನ್ನು ಪ್ರತಿಬಿಂಬಿಸಿದವು. ವೈವಿಧ್ಯಮಯ ಸಮೂಹ ನೃತ್ಯಗಳು, ಧರ್ಮದ ಸಾರವನ್ನು ತಿಳಿಸುವಂತಹ ಮಹಾಭಾರತ ಕಥಾಸಾರಾಂಶವನ್ನು ಒಳಗೊಂಡ ನೃತ್ಯ ರೂಪಕ ಮತ್ತು ಕಾಂತಾರ ಸಿನಿಮಾದ ದೈವ ನರ್ತನದ ನೃತ್ಯವು ಸಮಾರಂಭದ ಕಳೆಯನ್ನು ವಿಜೃಂಭಿಸಿ ಶಾಲಾ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿ ಜನತೆಯನ್ನು ಮುದಗೊಳಿಸಿ ರಂಜಿಸಿತು. ಸಮಸ್ತ ನೃತ್ಯ ಸಮೂಹ ಒಂದೆಡಿ ಸೇರಿ ಒಗ್ಗಟ್ಟಿನ ಮಹತ್ವದ ಸಾಲಿಗೆ ಅಭಿನಯಿಸಿದ್ದು ಎಲ್ಲರ ಗಮನ ಸೆಳೆಯಿತು. ಸಹಕಾರ್ಯದರ್ಶಿ ಕಾರ್ತಿಕ್ ಅವರು ಮಕ್ಕಳ ಪ್ರತಿಭೆಯನ್ನು ಅಭಿನಂದಿಸಿ ಪ್ರೋತ್ಸಾಹಿಸಿದರು. ಪ್ರಾಂಶುಪಾಲರಾದ ಶ್ರೀಮತಿ ವಿಜಯಾ ಮಕ್ಕಳಿಗೆ, ಸಿಬ್ಬಂದಿ ವರ್ಗದವರಿಗೆ, ನೆರೆದ ಜನ ಸಮೂಹಕ್ಕೆ ಅಭಿನಂದನೆಯನ್ನು ಸಲ್ಲಿಸಿದರು.