ಬೆಂಗಳೂರು : ಸಂವಿಧಾನದ 10ನೇ ಅನುಸೂಚಿ (ಪಕ್ಷಾಂತರ ವಿರೋಧಿ ಕಾಯ್ದೆ) ಅಡಿಯಲ್ಲಿ ಪೀಠಾಸೀನಾಧಿಕಾರಿಗಳ ಅಧಿಕಾರ ವ್ಯಾಪ್ತಿಯನ್ನು ಪರಿಶೀಲಿಸಲು ಲೋಕಸಭಾ ಅಧ್ಯಕ್ಷರಾದ ಓಂ ಬಿರ್ಲಾ ಅವರು ರಚಿಸಿರುವ ವಿಶೇಷ ಸಮಿತಿಯ ಸಭೆಯು ಫೆಬ್ರವರಿ 9 ಮತ್ತು 10 ರಂದು ಮುಂಬೈನ ಮಹಾರಾಷ್ಟ್ರ ವಿಧಾನ ಭವನದಲ್ಲಿ ನಡೆಯುತ್ತಿದೆ. ಈ ನಿರ್ಣಾಯಕ ಸಭೆಯಲ್ಲಿ ಸಮಿತಿಯ ಸದಸ್ಯರಾದ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಅವರು ಪಾಲ್ಗೊಂಡು ಮಹತ್ವದ ಚರ್ಚೆಗಳನ್ನು ನಡೆಸುತ್ತಿದ್ದಾರೆ.
ಪಕ್ಷಾಂತರ ವಿರೋಧಿ ಕಾಯ್ದೆಗೆ ಸಂಬಂಧಿಸಿದಂತೆ ಸಭಾಧ್ಯಕ್ಷರು ಕೈಗೊಳ್ಳುವ ನಿರ್ಧಾರಗಳು ಮತ್ತು ಅವರ ಅಧಿಕಾರಗಳ ಕುರಿತಾದ ನಿಯಮಾವಳಿಗಳನ್ನು ಮರುಪರಿಶೀಲಿಸುವ ಉದ್ದೇಶದಿಂದ ಮಹಾರಾಷ್ಟ್ರ ವಿಧಾನಸಭೆ ಸಭಾಧ್ಯಕ್ಷರಾದ ರಾಹುಲ್ ನಾರ್ವೇಕರ್ ಅಧ್ಯಕ್ಷತೆಯಲ್ಲಿ, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಫರೀದ್, ಒಡಿಶಾ ವಿಧಾನಸಭೆ ಸಭಾಧ್ಯಕ್ಷರಾದ ಶ್ರೀಮತಿ ಸುರಮ ಪಾದಿ ಮತ್ತು ನಾಗಾಲ್ಯಾಂಡ್ ವಿಧಾನಸಭೆಯ ಸಭಾಧ್ಯಕ್ಷರಾದ ಷÀರಿಂಗ್‍ಮೈನ್ ಲಾಂಗ್‍ಕುಮೆರ್ ಅವರನ್ನೊಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.