ಕನ್ನಡದ ಕ್ಲಾಸಿಕ್ ಸಿನಿಮಾ ಪ್ರತಿಗಳ ಸಂರಕ್ಷಣೆಗೆ ಚಲನಚಿತ್ರ ಅಕಾಡೆಮಿ ಗಮನ ಹರಿಸಬೇಕು: ಅಪರ್ಣಾ ಸುಬ್ರಮಣಿಯನ್ ಕ್ಲಾಸಿಕ್ ಸಿನಿಮಾ ಸಂಗ್ರಹಣೆ, ಸಂರಕ್ಷಣೆ ಮತ್ತು ಪುನಶ್ಚೇತನದ ಮಹತ್ವ ಸಾರಿದ ಗೋಷ್ಠಿ

varthajala
0

 ಬೆಂಗಳೂರು : ಕನ್ನಡದ ಹಳೆಯ ಸಿನಿಮಾಗಳ ಸಂರಕ್ಷಣೆ ಮತ್ತು ಪುನಶ್ಚೇತನದ ಕಡೆಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಗಮನಹರಿಸಬೇಕು ಎಂದು ಸಿನಿಮಾ ಸಂರಕ್ಷಣೆ ಮತ್ತು ಪುನಶ್ಚೇತನಾ ಕಾರ್ಯದಲ್ಲಿ ತೊಡಗಿಕೊಂಡಿರುವ ಅಪರ್ಣಾ ಸುಬ್ರಮಣಿಯನ್ ಹೇಳಿದರು.ಬೆಂಗಳೂರು ಚಿತ್ರೋತ್ಸವದಲ್ಲಿ ನಡೆದ ‘ಸಿನಿಮಾಗಳ ಸಂಗ್ರಹಣೆ, ಸಂರಕ್ಷಣೆ ಮತ್ತು ಪುನಶ್ಚೇತನ’ ಗೋಷ್ಠಿಯಲ್ಲಿ ಅವರು ಕ್ಲಾಸಿಕ್ ಸಿನಿಮಾಗಳ ಸಂಗ್ರಹಣೆ, ಸಂರಕ್ಷಣೆ ಮತ್ತು ಅವುಗಳನ್ನು ಪುನಶ್ಚೇತನಗೊಳಿಸುವ ಮಹತ್ವದ ಕುರಿತು ಮಾತನಾಡಿದರು.

ಚಿತ್ರೋತ್ಸವದಲ್ಲಿ ಪ್ರದರ್ಶನವಾದ ಹಳೆಯ ಕ್ಲಾಸಿಕ್ ಸಿನಿಮಾಗಳನ್ನು ವೀಕ್ಷಿಸಿದ ಬಳಿಕ ಅದರ ಗುಣಮಟ್ಟ ಸಮರ್ಪಕವಾಗಿಲ್ಲದೇ ಇರುವುದು ಅರಿವಿಗೆ ಬಂತು. ಈ ನಿಟ್ಟಿನಲ್ಲಿ ಹಳೆಯ ಸಿನಿಮಾಗಳನ್ನು ಸಂಗ್ರಹಿಸಿ ಉಳಿಸುವುದು ಅಗತ್ಯವಾಗಿದೆ. ಸಾಮಾನ್ಯವಾಗಿ ನಿರ್ಮಾಪಕರಿಗೆ ಲಾಭ ಗಳಿಸುವ ಕಡೆಗೆ ಗಮನ ಇರುತ್ತದೆಯೇ ಹೊರತು ಆ ಸಿನಿಮಾದ ಸಂರಕ್ಷಣೆ ಕಡೆಗೆ ಎಚ್ಚರ ಇರುವುದಿಲ್ಲ. ಹಾಗಾಗಿ, ಎμÉ್ಟೂೀ ಸಿನಿಮಾಗಳ ನೆಗೆಟಿವ್ ಪ್ರಿಂಟ್ ಗಳು ಸಂರಕ್ಷಣೆ ಮಾಡದಷ್ಟು ಹಾಳಾಗಿವೆ. ಹಾಗಾಗಬಾರದು ಎಂದಾದರೆ ಸಿನಿಮಾ ಸಂರಕ್ಷಣೆ ದೊಡ್ಡ ಮಟ್ಟದಲ್ಲಿ ನಡೆಯಬೇಕು ಎಂದು ಹೇಳಿದರು.ಸಿನಿಮಾ ಸಂರಕ್ಷಣೆಯ ಸವಾಲಿನ ಕುರಿತು ಮಾತನಾಡಿದ ಅವರು, ಒಂದು ಸಿನಿಮಾ ಸಂರಕ್ಷಣೆ ಮತ್ತು ಪುನಶ್ಚೇತನಕ್ಕೆ ಕಡಿಮೆ ಎಂದರೂ 20 ಲಕ್ಷ ಬೇಕಾಗುತ್ತದೆ. ಹಾಗಾಗಿ ಈ ಕಾರ್ಯ ಬಹಳ ದುಡ್ಡು ಬೇಡುವ ಕೆಲಸ.

ಸರ್ಕಾರಿ ಸಂಸ್ಥೆಗಳೇ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕಿರುತ್ತದೆ. ವಿದೇಶಗಳಲ್ಲಿ ಈ ಕಾರ್ಯಕ್ಕಾಗಿ 350 ಮಿಲಿಯನ್ ಡಾಲರ್ ನಷ್ಟು ಅನುದಾನ ದೊರೆಯುತ್ತದೆ. ಆದರೆ, ಅಷ್ಟಿದ್ದರೂ ಸಾಕಾಗುವುದಿಲ್ಲ ಎಂದು ಅವರು ಬೇಸರಿಸುತ್ತಾರೆ. ಇನ್ನು ನಮಗೆ ಒಂದು ಕೋಟಿ ಅನುದಾನ ಕೊಟ್ಟರೂ ಅದು ಯಾವುದಕ್ಕೂ ಸಾಲುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ ಇದುವರೆಗೆ 5000 ಸಿನಿಮಾಗಳ ಸಂರಕ್ಷಣೆ ಮಾಡಿದೆ. ಇನ್ನೂ 2500 ಸಿನಿಮಾಗಳ ಸಂರಕ್ಷಣಾ ಕಾರ್ಯ ನಡೆಯುತ್ತಿದೆ. ಎಂ.ಆರ್. ರಾಧಾ ಅಭಿನಯದ ತಮಿಳಿನ ‘ರಕ್ತ ಕಣ್ಣೀರ್’ ಸಿನಿಮಾವನ್ನು ನಾನೇ ಸಂಗ್ರಹಣೆ ಮಾಡಿ ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾಗೆ ನೀಡಿದ್ದೇನೆ ಎಂದು ಹೇಳಿದರು. ಸಿನಿಮಾ ಸಂರಕ್ಷಣಾ ಕಾರ್ಯದ ಕುರಿತು ಗೋಷ್ಠಿಯನ್ನು ಆಯೋಜಿಸಿದ ಚಲನಚಿತ್ರ ಅಕಾಡೆಮಿಗೆ ಧನ್ಯವಾದ ಸಲ್ಲಿಸಿದ ಅವರು, ಸಾಮಾನ್ಯವಾಗಿ ಚಿತ್ರೋತ್ಸವಗಳಲ್ಲಿ ಸಿನಿಮಾ ಪ್ರದರ್ಶನಗಳ ಕಡೆಗೆ ಗಮನ ಹರಿಸಲಾಗುತ್ತದೆ. ಆದರೆ, ಇಲ್ಲಿ ಸಿನಿಮಾ ಸಂರಕ್ಷಣೆ ಕುರಿತು ಮಾತನಾಡಲು ಅವಕಾಶ ನೀಡಿದ್ದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಹೇಳಿದರು.

Post a Comment

0Comments

Post a Comment (0)