ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ʼಗಣರಾಗʼ ಪ್ರದರ್ಶನ ಸಿನಿಮಾ ಮೂಲಕ ಸಮಾಜ, ಲಿಂಗಭೇದ ಮತ್ತು ಕಲೆಯ ಕುರಿತು ಬೆಳಕು ಚೆಲ್ಲಿದ ನಿರ್ದೇಶಕ ದೀಪ್ ಭುಯಾನ್

varthajala
0

 ಬೆಂಗಳೂರು : ಅಸ್ಸಾಮಿ ಚಲನಚಿತ್ರ ನಿರ್ದೇಶಕ ದೀಪ್ ಭುಯಾನ್ ಅವರು 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ತಮ್ಮ ʼಗಣರಾಗʼ ಚಿತ್ರವನ್ನು ಪ್ರಸ್ತುತಪಡಿಸುತ್ತಿರುವುದು ಒಂದು ವಿಶೇಷ ಮತ್ತು ತೃಪ್ತಿದಾಯಕ ಅನುಭವ ಎಂದು ತಿಳಿಸಿದ್ದಾರೆ.ʼನಿರ್ದೇಶಕನಾಗಿ ತಮ್ಮ ಚಿತ್ರದೊಂದಿಗೆ ಪಾಲ್ಗೊಳ್ಳುತ್ತಿರುವುದು ಹೆಚ್ಚು ಆಪ್ತ ಮತ್ತು ವಿಭಿನ್ನವಾದ ಕ್ಷಣವಾಗಿದೆ ಎಂದು ಅವರು ತಿಳಿಸಿದರು. ಚಲನಚಿತ್ರೋತ್ಸವದ ಪ್ರೀತಿಯ ವಾತಾವರಣ, ಇಲ್ಲಿನ ಜನರ ಸಂವೇದನಾಶೀಲತೆ ಮತ್ತು ಸ್ವತಂತ್ರ ಸಿನಿಮಾಗಳನ್ನು ವೀಕ್ಷಿಸಲು ಸಾಲುಗಟ್ಟಿ ನಿಲ್ಲುವ ಪ್ರೇಕ್ಷಕರ ಉತ್ಸಾಹವನ್ನು ಶ್ಲಾಘಿಸಿದ ಅವರು, ಇಂತಹ ವೇದಿಕೆಗಳು ಅರ್ಥಪೂರ್ಣ ಸಿನಿಮಾಗಳಿಗೆ ಹೆಚ್ಚಿನ ಪೆÇ್ರೀತ್ಸಾಹ ನೀಡುತ್ತವೆʼ ಎಂದು ಹೇಳಿದರು.


ತಮ್ಮ ಚಿತ್ರದ ಕುರಿತು ವಿವರಿಸಿದ ಭುಯಾನ್, 'ಗಣರಾಗ' ಚಿತ್ರವು ದೃಶ್ಯರೂಪದಲ್ಲಿ ಅಸ್ಸಾಂನ ಸಾಂಪ್ರದಾಯಿಕ ಪ್ರದರ್ಶನ ಕಲೆಯಾದ 'ಒಜಾಪಾಲಿ'ಯನ್ನು  ಅವಲಂಬಿಸಿದ್ದರೂ, ಇದು ಕೇವಲ ಆ ಕಲೆಯ ಬಗ್ಗೆ ಮಾತ್ರವಲ್ಲ ಎಂದರು. ಓಜಾಪಾಲಿಯನ್ನು ಅವರು ಒಂದು ವಸ್ತುವನ್ನಾಗಿ ಬಳಸುವ ಬದಲು, ಸಮಾಜದ ದೊಡ್ಡ ಆಲೋಚನೆಗಳನ್ನು ಸಂವಹನ ಮಾಡಲು ಒಂದು ಮಾಧ್ಯಮ ಅಥವಾ 'ಕ್ಯಾನ್ವಾಸ್' ಆಗಿ ಬಳಸಿಕೊಂಡಿದ್ದಾರಂತೆ.ಈ ಸಾಂಪ್ರದಾಯಿಕ ಕಲೆಯ ಮೂಲಕ ಪುರುಷ ಪ್ರಧಾನ ವ್ಯವಸ್ಥೆ, ಮಹಿಳಾ ಸಬಲೀಕರಣ ಮತ್ತು ದೇಶದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಪ್ರತಿಬಿಂಬಿಸಲು ಸಾಧ್ಯವಾಯಿತು ಎಂದು ಅವರು ಅಭಿಪ್ರಾಯಪಟ್ಟರು. ಅಲ್ಲದೆ, ಈ ಸಿನಿಮಾವು ಯಾವುದೇ ನಿರ್ದಿಷ್ಟ ಕಾಲಘಟ್ಟಕ್ಕೆ ಅಥವಾ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕನಿಗೆ ಸೀಮಿತವಾಗಿಲ್ಲ, ಬದಲಿಗೆ ತಲೆಮಾರುಗಳಿಂದ ಮುಂದುವರಿಯುತ್ತಿರುವ ಸಾಮಾಜಿಕ ವಾಸ್ತವಗಳನ್ನು ಇದು ಎತ್ತಿ ತೋರಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ರಾಜಕೀಯ ಅಥವಾ ಸಾಮಾಜಿಕ ಸಂದೇಶಗಳನ್ನು ರವಾನಿಸಲು ಸಾಂಪ್ರದಾಯಿಕ ಕಲೆಗಳನ್ನು ಬಳಸುವುದು ಅಸ್ಸಾಂನಲ್ಲಿ ಹೊಸದೇನಲ್ಲ ಎಂದು ಅವರು ಹೇಳಿದರು. ʼಅಸ್ಸಾಂನ ಜಾನಪದ ಗೀತೆಗಳು ಮತ್ತು ಒಜಾಪಾಲಿ ಪ್ರದರ್ಶನಗಳನ್ನು ರಾಜಕೀಯ ಪ್ರಚಾರ ಮತ್ತು ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳಲ್ಲಿ ಬಳಸಲಾಗುತ್ತದೆ ಎಂಬ ನೈಜ ಉದಾಹರಣೆಗಳನ್ನು ಭುಯಾನ್ ನೀಡಿದರು. ಈ ಚಿತ್ರದಲ್ಲಿ ಓಜಾಪಾಲಿಯನ್ನು ಕೇವಲ ಒಂದು ಧಾರ್ಮಿಕ ಆಚರಣೆಯಾಗಿ ತೋರಿಸದೆ, ಅಭಿವ್ಯಕ್ತಿ ಮತ್ತು ರಾಜಕೀಯ ಸಂವಹನದ ಸಾಧನವಾಗಿ ಚಿತ್ರಿಸಲಾಗಿದೆʼ ಎಂದರು.ಪ್ರೇಕ್ಷಕರಿಂದ ವ್ಯಕ್ತವಾದ ಪ್ರತಿಕ್ರಿಯೆಗಳು ಸಿನಿಮಾವು ಆಳವಾದ ಚಿಂತನೆಗೆ ಹಚ್ಚುತ್ತದೆ ಎಂಬ ಅವರ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು, ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಂತಹ ವೇದಿಕೆಗಳು ನಿರ್ದೇಶಕರು ಮತ್ತು ಪ್ರೇಕ್ಷಕರಿಬ್ಬರಿಗೂ ಅತ್ಯಗತ್ಯ ಎಂದು ಅವರು ಹೇಳಿದರು.

Post a Comment

0Comments

Post a Comment (0)